
ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ತಮಿಳುನಾಡಿಗೆ ಈಶಾನ್ಯ ಮುಂಗಾರು ಪ್ರವೇಶ ಮಾಡಿದ್ದು, ಭಾರೀ ಮಳೆಯಾಗುತ್ತಿದೆ. ಆದರೆ ಈ ಸೈಕ್ಲೋನ್ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ.
ಬೆಂಗಳೂರಿನಲ್ಲಿ ನಿನ್ನೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ ಮಧ್ಯರಾತ್ರಿಯಿಂದ ನಗರದಲ್ಲಿ ಜಿಟಿಜಿಟಿ ಮಳೆ ಪ್ರಾರಂಭವಾಗಿದೆ. ಮುಂಜಾನೇ ಕೆಲಸಕ್ಕೆ ಹೋಗುವರು, ದೂರದ ಊರುಗಳಿಂದ ಬರುವರಿಗೆ ಮಳೆ ರಗಳೆ ಮಾಡಿದೆ.
ನಗರದ ಅನೇಕ ಭಾಗಗಳಲ್ಲಿ ಮಧ್ಯರಾತ್ರಿಯಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದು ದೀಪಾವಳಿ ಹಬ್ಬಕ್ಕೂ ಅಡಚಣೆ ಉಂಟು ಮಾಡಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಹೂ, ಹಣ್ಣು ಖರೀದಿ ಮಾಡುವರು ಮಳೆಯಿಂದಾಗಿ ಪರದಾಡುವಂತಾಯಿತು..
ಮುಂಜಾನೆ 4 ಗಂಟೆಯಿಂದಲೇ ಕೆ.ಆರ್.ಮಾರ್ಕೆಟ್ ನಲ್ಲಿ ಜನರು ಸಾಮಾಗ್ರಿಗಳನ್ನ ಕೊಳ್ಳಲು ಮುಗಿಬಿದ್ದಿದ್ದರು. ಮಾರುಕಟ್ಟೆಯ ವ್ಯಾಪಾರಿಗಳು ಅವಿನ್ಯೂ ರಸ್ತೆಯಲ್ಲಿ ಕೆನೋಪಿಗಳನ್ನ ಹಾಕಿಕೊಂಡ ವ್ಯಾಪಾರ ಮಾಡುತ್ತಿದ್ದರು. ಕೆಲ ಜನರು ಛತ್ರಿ ಹಿಡಿದು ಖರೀದಿ ಮಾಡ್ತಿದ್ರೆ ಕೆಲವರು ಮಳೆಯಲ್ಲಕ ನೆನೆದುಕೊಂಡೇ ಹೂ, ಹಣ್ಣು ಖರೀದಿಸುವ ಸ್ಥಿತಿ ಎದುರಾಯಿತು

ಸೈಕ್ಲೋನ್ ಎಫೆಕ್ಟ್ ಹಿನ್ನೆಲೆ ರಾಜ್ಯದಲ್ಲಿ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ಮುಂದಿನ 10 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ಕೊಡಗು ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಮತ್ತು ತುಮಕೂರಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಲ್ಲಿ ಸಣ್ಣ ಪ್ರಮಾಣದ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.













