ಭಾರತದ ಸುಶೀಲಾದೇವಿ ಲಿಕ್ಮಡಮ್ ಕಾಮನ್ ವೆಲ್ತ್ ಕ್ರೀಡಾಕೂಟದ ಜುಡೊ ಸ್ಪರ್ಧೆಯ ಫೈನಲ್ ನಲ್ಲಿ ಸೋಲುಂಡು ಬೆಳ್ಳಿ ಪದಕಕ್ಕೆ ತೃಪ್ತರಾದರು. ಈ ಮೂಲಕ ಕಾಮನ್ ವೆಲ್ತ್ ನಲ್ಲಿ 2ನೇ ಪದಕ ಗೆದ್ದ ಸಾಧನೆ ಮಾಡಿದರು.
ಸೋಮವಾರ ನಡೆದ ವನಿತೆಯರ 48ಕೆಜಿ ವಿಭಾಗದ ಫೈನಲ್ ನಲ್ಲಿ ಸುಶೀಲಾದೇವಿ ದಕ್ಷಿಣ ಆಫ್ರಿಕಾದ ವೈಟ್ ಬೋಯಿ ವಿರುದ್ಧ ಸೋಲುಂಡರು.

4 ನಿಮಿಷಗಳ ಪಂದ್ಯದಲ್ಲಿ ಇಬ್ಬರೂ 0-0ಯಿಂದ ಸಮಾನ ಸ್ಥಾನ ಪಡೆದಿದ್ದರಿಂದ ಗೋಲ್ಡನ್ ಪಾಯಿಂಟ್ ಗಾಗಿ ನಡೆದ ಹೋರಾಟದಲ್ಲಿ ಸುಶೀಲಾದೇವಿ ನಿರಾಸೆ ಅನುಭವಿಸಿದರು. ಗಾಸ್ಕೊ ಕಾಮನ್ ವೆಲ್ತ್ ನಲ್ಲಿ ಕೂಡ ಬೆಳ್ಳಿ ಪದಕ ಗೆದ್ದಿದ್ದ ಸುಶೀಲಾದೇವಿ ಚಿನ್ನದಂತಹ ಅವಕಾಶ ಕಳೆದುಕೊಂಡು ಬೆಳ್ಳಿ ಪದಕಕ್ಕೆ ತೃಪ್ತರಾದರು.
ಇದಕ್ಕೂ ಮುನ್ನ ನಡೆದ ಸೆಮಿಫೈನಲ್ ನಲ್ಲಿ ಮಾರಿಷಸ್ ನ ಪ್ರಿಸ್ಕೆಲಾ ಮೊರ್ನಾಡ್ ವಿರುದ್ಧ ರೋಚಕ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಹಾಕಿದ್ದರು.





