ಒಂದು ಕಡೆ ನೆರೆಯ ಕೇರಳದಲ್ಲಿ ಕಳೆದ ಒಂದು ವಾರದಿಂದ ಕೋವಿಡ್ ಹೊಸ ಪ್ರಕರಣಗಳು ಮತ್ತು ಸಾವಿನ ಪ್ರಮಾಣ ನಿರಂತರ ಏರುಗತಿಯಲ್ಲಿದ್ದು, ಬಹುತೇಕ ಅಲ್ಲಿ ಮೂರನೇ ಅಲೆ ಈಗಾಗಲೇ ಆರಂಭವಾಗಿರುವ ಆತಂಕದ ವರದಿಗಳು ಬರುತ್ತಿವೆ.
ಇಂಥ ಸ್ಥಿತಿಯಲ್ಲಿ ಕರ್ನಾಟಕದಲ್ಲಿ ಒಂದು ಕಡೆ ಲಸಿಕೆ ಕೊರತೆಯಿಂದ ಲಸಿಕಾ ಕಾರ್ಯಕ್ರಮ ಹಳಿತಪ್ಪಿದ್ದು ಮೊದಲ ಡೋಸ್ ಪಡೆದವರು ಸಕಾಲದಲ್ಲಿ ಎರಡನೇ ಡೋಸ್ ಒಡೆಯಲಾಗದ ದುರವಸ್ಥೆ ನಿರ್ಮಾಣವಾಗಿದೆ. ಮತ್ತೊಂದು ಕಡೆ, ಸಂಪೂರ್ಣ ಲಾಕ್ ಡೌನ್ ತೆರವು ಮಾಡಿ, ಧಾರ್ಮಿಕ ಸ್ಥಳಗಳು ಮತ್ತು ಯಾತ್ರಾ ಸ್ಥಳಗಳಲ್ಲಿ ಜನ ಜಾತ್ರೆಗೆ ಅವಕಾಶ ಮಾಡಿಕೊಡಲಾಗಿದೆ.
ಆ ಮೂಲಕ ರಾಜ್ಯದಲ್ಲಿ ಕರೋನಾ ಆತಂಕ ಎಂಬುದು ಮುಗಿದ ಅಧ್ಯಾಯ, ಕರೋನಾ ಎರಡನೇ ಅಲೆಯನ್ನು ಗೆದ್ದುಬಿಟ್ಟೆವು ಎಂಬಂತೆ ಸರ್ಕಾರ ಮತ್ತು ಜನತೆ ವರ್ತಿಸತೊಡಗಿದ್ದಾರೆ.
ರಾಜ್ಯದ ಉದ್ದಗಲಕ್ಕೆ ಸಂತೆ, ರಾಜಕೀಯ ಸಭೆ, ಪ್ರತಿಭಟನೆ, ಜಾತ್ರೆ, ಮಾರುಕಟ್ಟೆ, ಶಾಪಿಂಗ್ ಮಾಲ್, ದೇವಸ್ಥಾನ, ಮಠಮಂದಿರ, ಯಾತ್ರಾ ಸ್ಥಳ, ಪ್ರವಾಸಿ ಸ್ಥಳಗಳಲ್ಲಿ ಸಾವಿರಾರು ಜನ ಮಾಸ್ಕ್, ದೈಹಿಕ ಅಂತರ ಮತ್ತಿತರ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಸಂಭ್ರಮಿಸುತ್ತಿದ್ದಾರೆ. ಅದೇ ಹೊತ್ತಿಗೆ, ಅಪಾಯಕಾರಿ ಮೂರನೇ ಅಲೆಯ ವಿರುದ್ಧ ಜನರ ಜೀವ ಉಳಿಸುವ ಏಕೈಕ ಅಸ್ತ್ರ ಲಸಿಕೆ ವಿಷಯದಲ್ಲಿ ಕೂಡ ರಾಜ್ಯದಲ್ಲಿ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ.

ರಾಜ್ಯದಲ್ಲಿ ಈ ವರೆಗೆ ಲಸಿಕೆ ಪಡೆದವರ ಪೈಕಿ ಮೊದಲ ಮತ್ತು ಎರಡನೇ ಡೊಸ್ ಪಡೆದವರ ನಡುವಿನ ಅಂತರ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಸೋಮವಾರ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಒಟ್ಟು 2,58,30,507 ಮಂದಿ ಲಸಿಕೆ ಪಡೆದವರಾಗಿದ್ದರೆ,ಆ ಪೈಕಿ ಎರಡೂ ಡೋಸ್ ಲಸಿಕೆ ಪಡೆದವರ ಸಂಖ್ಯೆ ಕೇವಲ 47 ಲಕ್ಷದ 81 ಸಾವಿರ ಮಾತ್ರ. ಇನ್ನು ಉಳಿದ 2.10 ಕೋಟಿ ಮಂದಿ ಕೇವಲ ಒಂದು ಡೋಸ್ ಮಾತ್ರ ಪಡೆದಿದ್ದು, ಅವರಲ್ಲಿ ಬಹಳಷ್ಟು ಮಂದಿಗೆ ಎರಡನೇ ಡೋಸ್ ಪಡೆಯುವ 84 ದಿನಗಳ ಗಡುವು ಮುಗಿದುಹೋಗಿದ್ದು, ಎರಡನೇ ಡೋಸ್ ಪಡೆಯಲು ಲಸಿಕೆ ಲಭ್ಯವಿಲ್ಲ!
ಹಾಗಾಗಿ ಮೊದಲ ಡೋಸ್ ಪಡೆದವರು ಮತ್ತು ಎರಡನೇ ಡೋಸ್ ಪಡೆದವರ ನಡುವಿನ ಅಂತರ ನಾಲ್ಕು ಪಟ್ಟು ಹೆಚ್ಚಾಗಿದೆ. ಅಂದರೆ ಎರಡನೇ ಡೋಸ್ ಲಸಿಕೆ ನೀಡುವ ಗಡುವು ಮುಗಿದುಹೋಗಿ ಮೊದಲ ಡೋಸ್ ಕೊಟ್ಟಿದ್ದು ಕೂಡ ವ್ಯರ್ಥವಾಗುವ ದುರವಸ್ಥೆ ಒಂದು ಕಡೆಯಾದರೆ, ಶಾಲಾ-ಕಾಲೇಜು ಆರಂಭಕ್ಕೆ ಅವಸರಿಸುತ್ತಿರುವ ಸರ್ಕಾರ ಮತ್ತು ಖಾಸಗೀ ಶಿಕ್ಷಣ ಸಂಸ್ಥೆಗಳ ಧಾವಂತದ ನಡುವೆ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಲಸಿಕೆ ನೀಡಲಾಗದ ಅಸಹಾಯಕತೆ ಮತ್ತೊಂದು ಕಡೆ.

ಹಾಗಾಗಿ ಈಗಾಗಲೇ ನೆರೆಯ ಕೇರಳದಲ್ಲಿ ಅರಂಭವಾಗಿ ಆತಂಕಕಾರಿ ಪ್ರಮಾಣದಲ್ಲಿ ಹರಡುತ್ತಿರುವ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗುವುದಿರಲಿ, ಕನಿಷ್ಟ ನಿರೀಕ್ಷಿತ ಪ್ರಮಾಣದಲ್ಲಿ ಲಸಿಕೆ ನೀಡಲು ಕೂಡ ರಾಜ್ಯ ಬಿಜೆಪಿ ಸರ್ಕಾರ ಕೈಚೆಲ್ಲಿದೆ. ಹಾಗೇ ಜನರನ್ನು ಮೂರನೇ ಅಲೆಯ ಅಪಾಯದೆದುದು ಮೈಮರೆಯದಂತೆ, ಗುಂಪುಗೂಡು ಜೀವಕ್ಕೆ ಕುತ್ತು ತರಿಸಿಕೊಳ್ಳದಂತೆ ಎಚ್ಚರಿಸುವಲ್ಲಿ, ನಿರ್ಬಂಧಿಸುವಲ್ಲಿ ಕೂಡ ಸರ್ಕಾರ ವಿಫಲವಾಗಿದೆ.
ಈ ನಡುವೆ ಮೂರನೇ ಅಲೆಗೆ ಯಾವುದೇ ಕ್ಷಣದಲ್ಲಿ ವ್ಯಾಪಿಸಬಹುದು. ಜನತೆ ಮರೆಯುವಂತಿಲ್ಲ. ಕೋವಿಡ್ ನಿಯಮಗಳನ್ನು ಪಾಲನೆ ಮಾಡುವಲ್ಲಿ ಉದಾಸೀನ ಮಾಡಬಾರದು ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ) ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ಆದರೆ, ರಾಜ್ಯ ಸರ್ಕಾರ ಮೂರನೇ ಅಲೆ ಎದುರಿಸಲು 1500 ಕೋಟಿ ರೂ. ಕ್ರಿಯಾಯೋಜನೆ ಅಂತಿಮಗೊಳಿಸುವ ಹಂತದಲ್ಲೇ ಇದ್ದು, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೆಚ್ಚುವರಿ ಐಸಿಯು ಘಟಕ ನಿರ್ಮಾಣ ಮಾಡುವುದಾಗಿ ಹೇಳಿದೆ. ಅಂದರೆ ಅವಸರದಲ್ಲಿ ಎಲ್ಲಾ ಲಾಕ್ ಡೌನ್ ನಿಯಮ ತೆರವು ಮಾಡಿ, ಕೋವಿಡ್ ಮಾರ್ಗಸೂಚಿ ಗಾಳಿಗೆ ತೂರಿ ಜನಜಾತ್ರೆ ನೆರೆಯಲು ಮುಕ್ತ ಅವಕಾಶ ಮಾಡಿಕೊಡುವುದು ಒಂದು ಕಡೆ. ಮತ್ತೊಂದು ಕಡೆ ಸಾವಿರಾರು ಕೋಟಿ ವೆಚ್ಚದಲ್ಲಿ ಐಸಿಯು ಘಟಕ ನಿರ್ಮಾಣಕ್ಕೆ ಯೋಜನೆ ರೂಪಿಸುವುದು.. ಇದು ಸರ್ಕಾರದ ಇಬ್ಬಂದಿತನ. ಅಥವಾ 1500 ಕೋಟಿ ಹಣದ ಲಾಭನಷ್ಟದ ವ್ಯಾಪಾರಿ ವರಸೆ!
ಪರೀಕ್ಷೆಗಳನ್ನು ಕಡಿಮೆ ಮಾಡಿ ಹೊಸ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ತೋರಿಸಲಾಗುತ್ತಿದೆ. ಆದರೆ ಮರಣ ಪ್ರಮಾಣದಲ್ಲಿ ದೊಡ್ಡಮಟ್ಟದ ಬದಲಾವಣೆ ಆಗಿಲ್ಲ ಎಂಬ ಮಾತುಗಳು ಕೂಡ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಸೋಮವಾರ ಕೇಂದ್ರ ಸರ್ಕಾರ ಮತ್ತು ವಿವಿಧ ರಾಜ್ಯ ಸರ್ಕಾರಗಳಿಗೆ ನೀಡಿರುವ ಎಚ್ಚರಿಕೆ ಗಂಭೀರವಾದುದು.
ಮೂರನೇ ಅಲೆ ಯಾವ ಕ್ಷಣದಲ್ಲಾದರೂ ಬರಬಹುದು. ಜೊತೆಗೆ ಈಗಾಗಲೇ ಇರುವ ಎರಡನೇ ಅಲೆ ಇನ್ನೂ ಮುಕ್ತಾಯ ಆಗಿಲ್ಲ. ಎರಡನೇ ಅಲೆ ಮುಗಿದು ಹೋಯಿತು ಹೋಯಿತು ಎಂಬ ಮನಸ್ಥಿತಿಯಲ್ಲಿ ಸರ್ಕಾರಗಳು ಮತ್ತು ಜನರು ವರ್ತಿಸುತ್ತಿರುವುದು ಬಹಳ ದೊಡ್ಡ ಅನಾಹುತಕ್ಕೆ ಕಾರಣ ಆಗಬಹುದು. ದೇಶದ ಆರೋಗ್ಯ ವ್ಯವಸ್ಥೆ ಇನ್ನೂ ಕೂಡ ಒಂದು ದೊಡ್ಡ ಸಾಂಕ್ರಾಮಿಕವನ್ನು ನಿಭಾಯಿಸುವ ಶಕ್ತಿ ಪಡೆದುಕೊಂಡಿಲ್ಲ. ಸಬಲೀಕರಣ ಆಗಿಲ್ಲ. ಎರಡನೇ ಮತ್ತು ಮೊದಲನೇ ಅಲೆಗಿಂತ ಅತ್ಯಂತ ಭೀಕರವಾದ ಒಂದು ಪರಿಸ್ಥಿತಿಯನ್ನು ಎದುರಿಸುವ ಅನಿವಾರ್ಯತೆ ಬರಬಹುದು. ಸರಣಿ ಸಾವಿನ ಭೀಕರ ದುರಂತ ಸಂಭವಿಸಬಹುದು. ಹಾಗಾಗಿ ಸರ್ಕಾರಗಳು ಕೂಡಲೇ ಪ್ರವಾಸಿ ಸ್ಥಳಗಳು, ಧಾರ್ಮಿಕ ಸ್ಥಳಗಳು, ಯಾತ್ರಾಸ್ಥಳಗಳಲ್ಲಿ ಮತ್ತು ಸಂತೆ- ಜಾತ್ರೆ-ಉತ್ಸವಗಳ ನೆಪದಲ್ಲಿ ಜನ ಗುಂಪು ಸೇರುವುದನ್ನು ತಪ್ಪಿಸಬೇಕು. ಇಲ್ಲದಿದ್ದರೆ ಮೂರನೇ ಅಲೆಗೆ ಈಗಾಗಲೇ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಸಂಭವಿಸಿರುವ ಅನಾಹುತದ ಹತ್ತಾರು ಪಟ್ಟು ಹೆಚ್ಚು ಅನಾಹುತಗಳು ಭಾರತದಲ್ಲಿ ಸಂಭವಿಸಬಹುದು ಎಂದು ಐಎಂಎ ಎಚ್ಚರಿಕೆ ನೀಡಿದೆ.
ಒರಿಸ್ಸಾದ ಪುರಿಯ ಜಗನ್ನಾಥ ರಥಯಾತ್ರೆ ಮತ್ತು ಉತ್ತರಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ಕನ್ವರ್ ಯಾತ್ರೆಗಳಿಗೆ ಅನುಮತಿ ನೀಡುವ ಸಂಬಂಧ ಚರ್ಚೆಗಳು ನಡೆದಿರುವ ಹೊತ್ತಲ್ಲಿ ಭಾರತೀಯ ವೈದ್ಯಕೀಯ ಸಂಸ್ಥೆ ಈ ಎಚ್ಚರಿಕೆ ನೀಡಿರುವುದನ್ನು ಗಮನಿಸಬೇಕು.ಹಾಗೆ ನೋಡಿದರೆ ಕರ್ನಾಟಕದಲ್ಲಿ ಕೂಡ ಮೈಸೂರಿನ ಚಾಮುಂಡೇಶ್ವರಿ, ಶಿವಮೊಗ್ಗದ ಸಿಗಂದೂರು ದೇವಸ್ಥಾನ ಇರಬಹುದು ಅಥವಾ ಪ್ರವಾಸಿತಾಣಗಳಾ ಜೋಗ ಜಲಪಾತ, ಮುಳ್ಳಯ್ಯನಗಿರಿ, ನಂದಿ ಬೆಟ್ಟ ಮುಂತಾದ ಕಡೆ ವಾರಂತ್ಯದಲ್ಲಿ ಲಕ್ಷಾಂತರ ಜನ ಪ್ರವಾಸಿಗಳು, ಯಾತ್ರಾರ್ಥಿಗಳು ಮಾಸ್ಕ್, ದೈಹಿಕ ಅಂತರ ಕಾಯದೆ ಜಾತ್ರೆಯೋಪಾದಿಯಲ್ಲಿ ನೆರೆಯುತ್ತಿದ್ದಾರೆ.
ಆದರೆ ರಾಜ್ಯ ಸರ್ಕಾರ ಮಾತ್ರ ಇಂಥ ಅಪಾಯಕಾರಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಬದಲು ಸಾವಿರಾರು ಕೋಟಿ ರೂಪಾಯಿ ಕ್ರಿಯಾಯೋಜನೆ ರೂಪಿಸುತ್ತಿದೆ ಮತ್ತು ತುರ್ತಾಗಿ ಜಿಲ್ಲಾ ಪಂಚಾಯ್ತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಲು ಸಜ್ಜಾಗುತ್ತಿದೆ.






