ಉಡುಪಿ: ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ವೈದ್ಯನೊಬ್ಬ ಕಿರುಕುಳ ಕೊಟ್ಟ ಆರೋಪ ಕೇಳಿ ಬಂದಿದೆ. ಸಹಪಾಠಿ ವೈದ್ಯನೊಬ್ಬ ವೈದ್ಯ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ್ದು, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಮಣಿಪಾಲದ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳ ನಡುವೆ ಈ ಘಟನೆ ನಡೆದಿದ್ದು, ವಿದ್ಯಾಭ್ಯಾಸ ಮಾಡಲು ಹೊರರಾಜ್ಯದಿಂದ ಬಂದಿರುವ ವೈದ್ಯ ವಿದ್ಯಾರ್ಥಿಗಳು. ಡೆಲ್ಲಿ ಮತ್ತು ರಾಜಸ್ಥಾನದಿಂದ ಬಂದಿರುವ ವೈದ್ಯ ವಿದ್ಯಾರ್ಥಿಗಳು, ಪರಸ್ಪರ ಪ್ರೀತಿಯಲ್ಲಿದ್ದರು ಎನ್ನಲಾಗಿದೆ.
ಸದ್ಯ ಕಿರುಕುಳ ನೀಡಿದ ಆರೋಪದಲ್ಲಿ ಮಹಮ್ಮದ್ ಡ್ಯಾನಿಷ್ ಖಾನ್ನನ್ನು ಬಂಧನ ಮಾಡಲಾಗಿದೆ. ಪ್ರೀತಿಯಲ್ಲಿದ್ದಾಗ ಮದುವೆಯ ಪ್ರಸ್ತಾಪ ಮುಂದಿಟ್ಟಿದ್ದ ಡ್ಯಾನಿಷ್. ಆದರೆ ಇಸ್ಲಾಂಗೆ ಮತಾಂತರ ಆಗಬೇಕೆಂದು ಷರತ್ತು ಹಾಕಿದ್ದನು ಎನ್ನಲಾಗಿದೆ.
ಈ ಬಗ್ಗೆ ಉಡುಪಿ ಮಹಿಳಾ ಠಾಣೆಯಲ್ಲಿ ಆಗಸ್ಟ್ 31 ರಂದು ದೂರು ದಾಖಲು ಮಾಡಲಾಗಿದೆ. ಮಹಮ್ಮದ್ ಡ್ಯಾನಿಷ್ ಖಾನ್ ಮತ್ತು ಸಂತ್ರಸ್ತೆ ಒಂದೇ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಕ್ಯಾಂಪಸ್ನಲ್ಲಿ ಪರಿಚಯವಾಗಿ, ಫೋನ್ ನಂಬರ್ ಪಡೆದುಕೊಂಡು ಗೆಳೆತನ ಬೆಳೆಸಿದ್ದರು. ನಂತರ ಪ್ರೀತಿಗೆ ಬದಲಾಗಿತ್ತು ಅನ್ನೋ ಮಾಹಿತಿ ಲಭ್ಯವಾಗಿದೆ.
2024ರ ಜನವರಿ 22 ರಂದು ಮಾತುಕತೆ ವೇಳೆ ಹಿಂದೂ ಧರ್ಮ ಹಾಗೂ ರಾಮ ಮಂದಿರದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಅನ್ನೋ ಆರೋಪವನ್ನೂ ಮಾಡಲಾಗಿದೆ. ಅಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಆಗಿತ್ತು. ಆ ವಿಚಾರವಾಗಿ ಅವಹೇಳನ ಮಾಡಿದ್ದನು ಎನ್ನಲಾಗಿದೆ.
2024 ರ ಮಾರ್ಚ್ 11 ರಂದು ಸಂತ್ರಸ್ತೆ ಆರೋಪಿಯ ರೂಮ್ಗೆ ತೆರಳಿದಾಗ ಮತಾಂತರಕ್ಕೆ ಒತ್ತಾಯಿಸಿದ್ದನು. ಹಿಂದೂ ಧರ್ಮದಿಂದ ಮತಾಂತರ ಆಗಲು ನಿರಾಕರಿಸಿದಾಗ ಸಂತ್ರಸ್ತೆಯ ಕೆನ್ನೆಗೆ ಹೊಡೆದು, ಕೂದಲು ಹಿಡಿದು ಎಳೆದಾಡಿದ್ದನು. ದೇಹದ ಖಾಸಗಿ ಭಾಗವನ್ನು ಮುಟ್ಟಿ ಲೈಂಗಿಕತೆಗೆ ಬೇಡಿಕೆ ಇಟ್ಟಿದ್ದನು. 2024ರ ಆಗಸ್ಟ್ 28 ರವರೆಗೂ ಪೋನ್‌ನಲ್ಲಿ ತನ್ನನ್ನು ಸಂಪರ್ಕಿಸಿ ನಿರಂತರ ಕಿರುಕುಳ ನೀಡುತ್ತಿದ್ದನು ಎಂದು ಆರೋಪಿಸಲಾಗಿದೆ.
27 ವರ್ಷದ ಆರೋಪಿ ಮಹಮ್ಮದ್ ಡ್ಯಾನಿಷ್ ಖಾನ್ನನ್ನು ಬಂಧಿಸಿದ ಪೊಲೀಸ್ರು, ನ್ಯಾಯಾಲಯಕ್ಕೆ ಹಾಜರು ಪಡಿಸಿರುವ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ. ಆದರೆ ಇದು ಪ್ರೀತಿಯಲ್ಲಿ ಮೂಡಿದ ವೈಮಸ್ಸು ಇರಬಹುದು ಎಂದು ಶಂಕೆ ವ್ಯಕ್ತವಾಗುತ್ತಿದೆ. ಪೊಲೀಸ್ರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.