ಬೆಂಗಳೂರು: ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್(DK Shivakumar) ಕಾಂಗ್ರೆಸ್ ನಾಯಕರ ಸಮಿತಿ ರಚಿಸಿದ್ದಾರೆ. ಈ ಕಾಂಗ್ರೆಸ್ ಸಂಸದ ಹಾಗೂ ಶಾಸಕರ ಸಮಿತಿಯು ಗಲಭೆಯ ಘಟನಾ ಸ್ಥಳ ಬಳ್ಳಾರಿಗೆ ಭೇಟಿ ನೀಡಿ ವಸ್ತು ಸ್ಥಿತಿಯ ಪರಿಶೀಲನೆ ನಡೆಸಿ ವರದಿ ನೀಡುವಂತೆ ಡಿ.ಕೆ ಶಿವಕುಮಾರ್ ಸೂಚಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಹಾಗೂ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಹೆಚ್.ಎಂ.ರೇವಣ್ಣ ನೇತೃತ್ವದಲ್ಲಿ ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ರಾಯಚೂರು ಸಂಸದ ಜಿ.ಕುಮಾರ್ ನಾಯ್ಕ, ವಿಧಾನ ಪರಿಷತ್ ಸದಸ್ಯ ಜಕ್ಕಪ್ಪನವರ್ ಹಾಗೂ ಬಸನಗೌಡ ಬಾದರ್ಲಿ ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ಬಳ್ಳಾರಿಗೆ ತೆರಳಿ ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಶ್ರೀರಾಮುಲು ಇಬ್ಬರನ್ನೂ ಭೇಟಿಯಾಗಿದ್ದರು. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿಯನ್ನು ತಕ್ಷಣ ಬಂಧಿಸಿ ಜೈಲಿಗೆ ಹಾಕಬೇಕು ಎಂದು ಒತ್ತಾಯಿಸಿದ್ದರು. ಇದಾದ ಬಳಿಕ ಕೂಡಲೇ ಕಾಂಗ್ರೆಸ್ ನಾಯಕರ ಸಮಿತಿ ರಚನೆಯಾಗಿರುವುದು ಬಳ್ಳಾರಿಯ ರಾಜಕೀಯ ದಂಗಲ್ ಇನ್ನಷ್ಟು ರೋಚಕತೆ ಪಡೆದಂತಾಗಿದೆ.











