2023ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಇನ್ನೇನು ಬೆರಳೆಣಿಕೆ ದಿನಗಳಷ್ಟೇ ಬಾಕಿ ಇವೆ. ರಾಜ್ಯದಲ್ಲಂತೂ ಚುನಾವಣಾ ಕಾವು ಜೋರಾಗಿದ್ದು, ಪಕ್ಷದ ನಾಯಕರು, ಮುಖಂಡರು ಅಖಾಡಕ್ಕಿಳಿದು ಭರ್ಜರಿ ಮತ ಪ್ರಚಾರ ಮಾಡ್ತಿದ್ದಾರೆ. ಈ ಮಧ್ಯೆ ರಾಜಕೀಯ ನಾಯಕರು ವಾಕ್ ಸಮರವನ್ನೂ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ತಾಲೂಕಿನ ಅವುಲಗುರ್ಕಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತ್ನಾಡಿದ ಡಾ.ಕೆ.ಸುಧಾಕರ್, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ʻಸತತ 60 ವರ್ಷಗಳ ಕಾಲ ಪರಿಶಿಷ್ಟರ ಮತಗಳನ್ನು ಪಡೆದ ಕಾಂಗ್ರೆಸ್ (Congress) ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಿದ ಕೊಡುಗೆ ಕೇವಲ ಶೂನ್ಯ ಎಂದು ಸಚಿವ ಡಾ.ಕೆ.ಸುಧಾಕರ್ (Dr. K. Sudhakar) ಆಕ್ರೋಶ ವ್ಯಕ್ತಪಡಿಸಿದ್ರು. ಬಿಜೆಪಿ (BJP) ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿಯನ್ನು ಹೆಚ್ಚಿಸಿದೆ. ಈ ಭಾಗದ ರೈತರು ಹೂ ಬೆಳೆಯಲು ನೀರಿನ ಸಮಸ್ಯೆ ಹಿಂದೆ ಎಷ್ಟಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಬಿಜೆಪಿ ನೀಡಿದ ಭರವಸೆಯಂತೆ ಎರಡು ವರ್ಷದಲ್ಲಿ ಕ್ಷೇತ್ರದ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದಾಗಿ ರೈತರು ಸಮೃದ್ಧಿಯಾಗಿ ಬೆಳೆಗಳನ್ನು ಬೆಳೆಯಲು ಅನುಕೂಲವಾಗಿದೆ ಎಂದರು. ಚಿಕ್ಕಬಳ್ಳಾಪುರದಿಂದ (Chikkaballapur) ಕೇತೇನಹಳ್ಳಿವರೆಗೂ ಹೋಗಲು ಈ ಹಿಂದೆ ಸಾಹಸ ಪಡಬೇಕಿತ್ತು. ಈ ಅಲ್ಪ ದೂರವನ್ನು ಕ್ರಮಿಸಲು ಸುಮಾರು ಒಂದು ಗಂಟೆ ಸಮಯ ಬೇಕಿತ್ತು. ಅಂತಹ ಕೆಟ್ಟ ರಸ್ತೆಯನ್ನು ಈಗ ದುರಸ್ತಿ ಮಾಡಲಾಗಿದೆ. ಇದೇ ದೂರವನ್ನು ಈಗ ಕೇವಲ 15 ನಿಮಿಷದಲ್ಲಿ ಸೇರಬಹುದಾಗಿದೆ. ಅಲ್ಲದೆ ಈ ಪ್ರದೇಶದ ರೈತರು ಕೃಷಿಯನ್ನು ಬಿಡುವ ಸ್ಥಿತಿಗೆ ತಲುಪಿದ್ದರು. ಆದರೆ ಈಗ ಗತ ವೈಭವಕ್ಕೆ ಮರಳುವ ಕಾಲ ಇಲ್ಲಿನ ರೈತರಿಗೆ ಬಂದಿದೆ ಅಂಡ ಡಾ.ಕೆ.ಸುಧಾಕರ್ ಹೇಳಿದ್ರು.












