ಬೆಂಗಳೂರು: ಸಹಪಾಠಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದಡಿ ನಟ ‘ದುನಿಯಾ’ ವಿಜಯ್ ಅವರ ಪುತ್ರ ಸಾಮ್ರಾಟ್ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮನೀಶ್ ಗೌಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೀಶ್ ಗೌಡ ಹಾಗೂ ಸಾಮ್ರಾಟ್ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೋಮವಾರ ಸಂಜೆ ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಕಾರಿನಲ್ಲಿ ರಾಜರಾಜೇಶ್ವರಿ ನಗರದಲ್ಲಿ ತೆರಳುತ್ತಿದ್ದಾಗ, ಮನೀಶ್ ಹಾಗೂ ಆತನ ಸ್ನೇಹಿತರು ಕಾರನ್ನು ಹಿಂದಿಕ್ಕಿ ಮುಂದೆ ಸಾಗಿದ್ದಾರೆ ಎನ್ನಲಾಗಿದೆ. ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಸಣ್ಣ ಮಟ್ಟಿನ ಜಗಳ ನಡೆದಿದ್ದು, ಬಳಿಕ ಎರಡೂ ಗುಂಪುಗಳು ಅಲ್ಲಿಂದ ತೆರಳಿದ್ದವು ಎಂದು ತಿಳಿದುಬಂದಿದೆ.ಆದರೆ ಮಂಗಳವಾರ ಮಧ್ಯಾಹ್ನ ಸಾಮ್ರಾಟ್ ಹಾಗೂ ಆತನ ಸ್ನೇಹಿತರು ಮನೀಶ್ ಗೌಡನನ್ನು ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹಲ್ಲೆಯಿಂದ ಗಾಯಗೊಂಡಿರುವ ಮನೀಶ್ ಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಕೆಂಗೇರಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.






