ನಾ ದಿವಾಕರ
ಭಾಗ 1
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಗಳ ಎರಡು ಅವಧಿಯನ್ನು ಅಧಿಕಾರದಲ್ಲಿ ಪೂರೈಸುವ ಯಾವುದೇ ರಾಜಕೀಯ ಪಕ್ಷವಾದರೂ, ಹಿಂತಿರುಗಿ ನೋಡುವಾಗ ಕಾಣುವ ಲೋಪ-ದೋಷ-ಕೊರತೆ ಮತ್ವು ವೈಫಲ್ಯಗಳಿಗೆ ಹಿಂದಿನ ಸರ್ಕಾರವನ್ನು ದೂಷಿಸುವುದಿಲ್ಲ. ಸ್ವಾತಂತ್ರ್ಯಾನಂತರದ ಮೊದಲ ದಶಕ ಪೂರೈಸಿದ ಹಂತದಲ್ಲಿ ನೆಹರೂ ಸರ್ಕಾರ ಬ್ರಿಟೀಷ್ ಆಳ್ವಿಕೆಯನ್ನು ಸಹ ಹೆಚ್ಚಾಗಿ ದೂಷಿಸಲಿಲ್ಲ ಬದಲಾಗಿ ತನ್ನ ಸಾಧನೆಗಳ ಸಾಫಲ್ಯ ವೈಫಲ್ಯಗಳನ್ನು ಪರಾಮರ್ಶಿಸಿ ಭವಿಷ್ಯದ ನೀಲನಕ್ಷೆಯನ್ನು ಮತ್ತಷ್ಟು ಸ್ಪಷ್ಟತೆಯಿಂದ ರೂಪಿಸಲಾರಂಭಿಸಿತ್ತು. 12 ವರ್ಷಗಳ ಆಳ್ವಿಕೆಯ ಹೊರತಾಗಿಯೂ, ಈ ಅವಧಿಯಲ್ಲಿ ಬಹುತೇಕ ಪ್ರಮುಖ ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೂ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಎನ್ಡಿಎ ಸರ್ಕಾರಕ್ಕೆ ಈ ಆಡಳಿತಾತ್ಮಕ ವಿವೇಕ (Administrative Wisdom) ಬಂದಂತೆ ಕಾಣುವುದಿಲ್ಲ.
ಮತ್ತೊಂದು ಬದಿಯಿಂದ ನೋಡಿದಾಗ, 2014ರ ನಂತರದಲ್ಲಿ ತನ್ನ ರಾಜಕೀಯ ಬುನಾದಿಯೇ ಶಿಥಿಲವಾಗುತ್ತಿರುವ ಹಂತ ತಲುಪಿರುವ ಕಾಂಗ್ರೆಸ್ ಪಕ್ಷ, ಹಲವು ಪ್ರಮುಖ ರಾಜ್ಯಗಳ ಚುನಾವಣೆಗಳಲ್ಲಿ ಪರಾಭವ ಅನುಭವಿಸಿರುವುದೇ ಅಲ್ಲದೆ, ಈ ರಾಜ್ಯಗಳಲ್ಲಿ ಸಕ್ರಿಯವಾಗಿದ್ದ ನಿಷ್ಠಾವಂತ (?) ನಾಯಕರನ್ನೂ ಕಳೆದುಕೊಳ್ಳುತ್ತಿದೆ. ಬಿಜೆಪಿಯ ರಾಜಕೀಯ-ಆಡಳಿತಾತ್ಮಕ ತೊಳೆವಯಂತ್ರ ( Politico- Administrative Washing machine) ಕಾಂಗ್ರೆಸ್ನ ನಿರ್ಣಾಯಕ ನಾಯಕರನ್ನು ತನ್ನೊಳಗೆ ಸೆಳೆದುಕೊಂಡು, ಅವರಿಗೆ ಅಂಟಿದ್ದ ಭ್ರಷ್ಟಾಚಾರದ ಕಳಂಕವೆಲ್ಲವನ್ನೂ ಅಳಿಸಿಹಾಕಿ, ಈಗ ನಿಷ್ಠಾವಂತ ಆರೆಸ್ಸೆಸ್-ಬಿಜೆಪಿ-ಹಿಂದುತ್ವದ ಮುಂದಾಳುಗಳನ್ನಾಗಿ ಮಾಡಿದೆ. ಮಾಜಿ ಸಂಸದ ದಿವಂಗತ ಶ್ರೀನಿವಾಸ್ ಪ್ರಸಾದ್ ಅವರ “ ಪಕ್ಷಾಂತರಿಯಾದರೂ ತತ್ವಾಂತರಿಯಾಗಲಾರೆ ” ಎಂಬ ಸಮಯಸಾಧಕ ತತ್ವವನ್ನೂ ಮೀರಿ ಈ ನಾಯಕರು ಪಶ್ಚಿಮಬಂಗಾಲ, ಮಧ್ಯಪ್ರದೇಶ, ಗೋವಾ, ಮಹಾರಾಷ್ಟ್ರ, ಅಸ್ಸಾಂ ಇನ್ನಿತರ ರಾಜ್ಯಗಳ ಸಾರಥ್ಯ ವಹಿಸಿದ್ದಾರೆ.
ವ್ಯವಸ್ಥೆಯೇ ಅಪಾಯದಲ್ಲಿರುವಾಗ
ಹೊರಳುಹಾದಿಯಲ್ಲಿರುವ ವಿಕಾಸಶೀಲ ಭಾರತದಲ್ಲಿ ಕಾಂಗ್ರೆಸ್ ಒಂದೊಂದೇ ರಾಜ್ಯಗಳನ್ನು ಕಳೆದುಕೊಳ್ಳುತ್ತಿರುವುದೇ ಅಲ್ಲದೆ, ಬಿಜೆಪಿಯ ಹಿಂದುತ್ವ-ಫ್ಯಾಸಿಸ್ಟ್ ರಾಜಕಾರಣಕ್ಕೆ ಪ್ರತಿಯಾಗಿ, ಪರ್ಯಾಯ ರಾಜಕಾರಣವನ್ನು ರೂಪಿಸುವುದಕ್ಕೂ ಹೆಣಗಾಡುತ್ತಿರುವುದು ವಾಸ್ತವ. ಈ ಹನ್ನೆರಡು ವರ್ಷಗಳಲ್ಲಿ ಬಿಜೆಪಿ ಎಲ್ಲ ಸಾಂವಿಧಾನಿಕ ಸಂಸ್ಥೆಗಳನ್ನೂ ದುರ್ಬಲಗೊಳಿಸಿ ಈಗ ಅಂತಿಮ ಪ್ರಹಾರಕ್ಕೆ ಮುಖ್ಯ ಚುನಾವಣಾ ಆಯೋಗವನ್ನು ಸಿದ್ಧಪಡಿಸುತ್ತಿದೆ. ಇದರ ಪರಿಣಾಮ 80 ವರ್ಷಗಳಿಂದ ಸಂವಿಧಾನದ ಆಶಯದಂತೆ ನಡೆದುಕೊಂಡು ಬಂದ ಭಾರತದ ಚುನಾವಣಾ ವ್ಯವಸ್ಥೆ (Electoral System) ಈಗ ತನ್ನ ಮೂಲ ತಾತ್ವಿಕ ನೆಲೆಯನ್ನೇ ಕಳೆದುಕೊಂಡು, ಕವಲು ಹಾದಿಯಲ್ಲಿ ಸಾಗುತ್ತಿದೆ. ಎಲ್ಲರನ್ನೂ ಒಳಗೊಳ್ಳುವ ಒಂದು ಉದಾತ್ತ ಪ್ರಜಾಪ್ರಭುತ್ವೀಯ ತತ್ವವನ್ನು ತೊರೆದು ಭಾರತದ ಚುನಾವಣಾ ವ್ಯವಸ್ಥೆ ಈಗ ಆದಷ್ಟೂ ಆಯ್ದ ಜನತೆಯನ್ನು ಹೊರಗಿಡುವ ಹಂತಕ್ಕೆ ತಲುಪಿದೆ. ಸಾಂವಿಧಾನಿಕ ಪರಿಭಾಷೆಯಲ್ಲಿ ಇದನ್ನು SIR ಎನ್ನಲಾಗುತ್ತದೆ.
ಎಸ್ಐಆರ್ ವಿರೋಧಿ ಹೋರಾಟಕ್ಕೆ ಚಾಲನೆ ನೀಡಿದ್ದು ನಾಗರಿಕ ಸಮಾಜದ ಸಂಘಟನೆಗಳು (Civil Society Organisations), ಈ ಹೋರಾಟಕ್ಕೆ ಸಮಗ್ರತೆಯ ರೂಪ ಒದಗಿಸಿದ್ದು ವಿದ್ಯಾರ್ಥಿ ಯುವಜನರ ಹೋರಾಟಗಳು, ತಾತ್ವಿಕ ತಳಹದಿಯನ್ನು ನೀಡಿರುವುದು ʼಮತವಂಚಿತʼ ಸಮುದಾಯಗಳ ಒಕ್ಕೊರಲ ಕೂಗು. ವಿಕಸಿತ ಭಾರತ ಸೃಷ್ಟಿಸಿರುವ ʼಮತವಂಚಿತ ಸಮಾಜʼ ಹೊಸತಾದರೂ, ಒಂದೇ ಪ್ರಕ್ರಿಯೆಯಲ್ಲಿ 13 ಕೋಟಿ ಜನಸಂಖ್ಯೆಯನ್ನು ಪ್ರತಿನಿಧಿಸುವಂತಾಗಿದೆ. ಈ ಸಮಾಜವನ್ನು ಒಳಹೊಕ್ಕು ನೋಡದ ಹೊರತು, ಪ್ರತಿಯೊಂದು ಬೂತ್ ಮಟ್ಟದಲ್ಲೂ ಈ ಸಮಾಜದ ಸದಸ್ಯರನ್ನು ಗುರುತಿಸದ ಹೊರತು, ಈ ಅಗಾಧ ಜನಸಂಖ್ಯೆ ಶಾಶ್ವತ ಮತವಂಚಿತ ಸಮಾಜವಾಗಿಯೇ ಉಳಿಯುತ್ತದೆ. ಈವರೆಗಿನ ಎಸ್ಐಆರ್ ಪ್ರಕ್ರಿಯೆಯಲ್ಲಿ ಸರ್ಕಾರ (ಬಿಜೆಪಿ ಮತ್ತು ಮಿತ್ರಪಕ್ಷಗಳು ) ಗುರುತಿಸಲಾದ ಅಕ್ರಮ ವಲಸೆಕೋರರ ಸಂಖ್ಯೆಯನ್ನೂ ಸಹ ಅಧಿಕೃತವಾಗಿ ಪ್ರಕಟಿಸಿಲ್ಲ.
ಮತ್ತೊಂದೆಡೆ ಮತದಾನ ವ್ಯವಸ್ಥೆಯ ಸಾಂವಿಧಾನಿಕ ಪಾವಿತ್ರ್ಯತೆಯನ್ನು (Constitutional Sanctity) ಕಾಪಾಡಲು ದೇಶವ್ಯಾಪಿ ಆಂದೋಲನಕ್ಕೆ ಚಾಲನೆ ನೀಡಿರುವ ಕಾಂಗ್ರೆಸ್ ಮತ್ತಿತರ ಪಕ್ಷಗಳು, ಮತವಂಚಿತರ ವಿವರಗಳನ್ನೂ ಸಂಗ್ರಹಿಸಿ ಜನತೆಯ ಮುಂದಿಟ್ಟಿಲ್ಲ. ಕರ್ನಾಟಕದಲ್ಲಿ ಎಸ್ಐಆರ್ ಅಂತಿಮ ಪಟ್ಟಿ ಸಿದ್ಧವಾಗಿದ್ದು, ಹಿಂದೆ ಮತದಾರರಾಗಿದ್ದ 75 ಲಕ್ಷ ಜನರು ಈಗ ಮತವಂಚಿತರಾಗಿದ್ದಾರೆ. ಯಾವುದೇ ದೃಷ್ಟಿಯಿಂದ ನೋಡಿದರೂ ಇದು ಅಸಂಭವವೇ. ಆದರೆ ಈ ವಂಚಿತ ಜನರು ಯಾರು ? ಯಾವ ಸಮುದಾಯದಿಂದ ಹೆಚ್ಚಾಗಿ ಕಾಣುತ್ತಾರೆ ? ಸಾಮಾಜಿಕವಾಗಿ ಆರ್ಥಿಕವಾಗಿ ಯಾವ ವರ್ಗಕ್ಕೆ ಸೇರಿದವರಾಗಿದ್ದಾರೆ ? ಯಾವ ಕಾರಣಕ್ಕಾಗಿ ಹೊರಹಾಕಲ್ಪಟ್ಟಿದ್ದಾರೆ ? ಈ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ಚುನಾವಣಾ ಆಯೋಗದ ಮೇಲಿದೆಯಾದರೂ, ಇದನ್ನು ಕಂಡುಹಿಡಿದು ಜನತೆಯ ಮುಂದೆ ಮಂಡಿಸುವ ನೈತಿಕ ಹೊಣೆಗಾರಿಕೆ ಕಾಂಗ್ರೆಸ್ ಮತ್ತಿತರ ವಿರೋಧ ಪಕ್ಷಗಳ ಮೇಲಿದೆ.
ವಿವೇಕ-ವಿವೇಚನೆಯ ಕೊರತೆ
ಈ ಹಿನ್ನೆಲೆಯಲ್ಲಿ ಕಳೆದ 12 ವರ್ಷಗಳ ಕರಾಳ ರಾಜಕೀಯ ದಿನಗಳನ್ನು ಗಮನಿಸಿದಾಗ ಕಾಂಗ್ರೆಸ್ ಮತ್ತಿತರ ಪಕ್ಷಗಳು ಸೋತಿರುವುದೆಲ್ಲಿ ಎಂದು ಸ್ಪಷ್ಟವಾಗುತ್ತದೆ. ಆಡಳಿತಾರೂಢ ಬಿಜೆಪಿಯನ್ನು ವಿರೋಧಿಸುವುದು, ಮೋದಿ ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸುವುದು, ನವ ಉದಾರವಾದಿ ಆರ್ಥಿಕ ನೀತಿಯನ್ನು ಮರುವಿಮರ್ಶಿಸುವುದು ಇವೆಲ್ಲವೂ ರಾಜಕೀಯ ಚಟುವಟಿಕೆಗಳು. ಇದನ್ನೂ ಮೀರಿ ವಿರೋಧ ಪಕ್ಷಗಳು ಬಿಜೆಪಿ/ಎನ್ಡಿಎ ಒಕ್ಕೂಟದ ಸರ್ಕಾರದ ಆಡಳಿತ ನೀತಿಗಳಿಗೆ ಪರ್ಯಾಯವಾಗಿ ಯಾವ ನೀಲನಕ್ಷೆಯನ್ನು ಜನರ ಮುಂದಿರಿಸಿವೆ ? 2029ರಲ್ಲಿ ಅಧಿಕಾರಕ್ಕೆ ಬರುವುದು ರಾಜಕೀಯ ಆಕಾಂಕ್ಷೆ ಮಾತ್ರವಾದರೆ ಸಾಲದು, 12 ವರ್ಷಗಳು ಅನುಸರಿಸಲಾದ ವಿನಾಶಕಾರಿ ಆರ್ಥಿಕ ನೀತಿಗಳಿಗೆ, ಸಾಂಸ್ಥಿಕ ಸಾಂವಿಧಾನಿಕ ಅವನತಿಯ ಉಪಕ್ರಮಗಳಿಗೆ, ಜನವಿರೋಧಿ ಸಾಮಾಜಿಕ ಯೋಜನೆಗಳಿಗೆ ಪರ್ಯಾಯ ಏನು ಎನ್ನುವುದನ್ನು ಜನತೆಗೆ ಸ್ಪಷ್ಟಪಡಿಸಬೇಕು.
ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಅಥವಾ ಯುವ ಜನಾಂದೋಲನದ ಮುಂದಾಳುಗಳಿಗೆ ಈ ಆಲೋಚನೆ ಇರುವುದಿಲ್ಲ. ಅವರು ವರ್ತಮಾನದ ಸುಧಾರಣೆಯನ್ನು ಬಯಸುತ್ತಾರೆ, ನಾಳೆಯ ಸುಗಮ ಹಾದಿಯನ್ನು ಅಪೇಕ್ಷಿಸುತ್ತಾರೆ ಆದರೆ ಭವಿಷ್ಯದ ನೀತಿಯನ್ನು ರೂಪಿಸುವ ಕ್ಷಮತೆ ಅವರಲ್ಲಿರಲು ಸಾಧ್ಯವಿಲ್ಲ. ಈ ಕಾರ್ಯ ನಿರ್ವಹಿಸಬೇಕಿರುವುದು ಕಾಂಗ್ರೆಸ್ ಮತ್ತಿತರ ಪಕ್ಷಗಳು. ಈ ದೃಷ್ಟಿಯಿಂದ ನೋಡಿದಾಗ, ಕಾಂಗ್ರೆಸ್ ಮತ್ತು ಮುಖ್ಯವಾಹಿನಿಯ ಎಡಪಕ್ಷಗಳು, ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಯಾವ ಪರ್ಯಾಯವನ್ನು ಸಿದ್ಧಪಡಿಸಿವೆ ? ಅಥವಾ ನವ ಭಾರತದ ಯುವ ಪೀಳಿಗೆಗೆ ಬೇಕಿರುವುದು ಪರ್ಯಾಯ ರಾಜಕೀಯ ಅಲ್ಲ (Alternative Politics ) ಬದಲಾಗಿ ರಾಜಕೀಯ ಪರ್ಯಾಯ (Political Alternative) ಎಂಬ ಆಲೋಚನೆಯಾದರೂ ವಿರೋಧ ಪಕ್ಷಗಳ ಚಿಂತನಾ ವಲಯದಲ್ಲಿ ಚರ್ಚೆಗೊಳಗಾಗಿದೆಯೇ ? ಲಿಖಿತ ರೂಪದಲ್ಲಿ ಇಂತಹ ಯಾವುದೇ ಲಕ್ಷಣಗಳು ಕಾಣುವುದಿಲ್ಲ.
ಎಡಪಂಥೀಯ ಚಿಂತನೆಗಳ ನಡುವೆ
ಕಮ್ಯುನಿಸ್ಟ್ ಪಕ್ಷಗಳನ್ನೂ ಒಳಗೊಂಡಂತೆ ಕಾಂಗ್ರೆಸ್ ಮತ್ತಿತರ ಮುಖ್ಯವಾಹಿನಿಯ-ಪ್ರಾದೇಶಿಕ ಪಕ್ಷಗಳಲ್ಲಿ ಈ ವಿವೇಕದ ಕೊರತೆ ಎದ್ದು ಕಾಣುತ್ತಿದೆ. ಆಳುವ ಪಕ್ಷಗಳಿಗೆ ಆಡಳಿತಾತ್ಮಕ ವಿವೇಕ ಇಲ್ಲದಿರುವ ಸಮಯದಲ್ಲಿ ವಿರೋಧ ಪಕ್ಷಗಳಿಗೆ ಪರ್ಯಾಯ ವಿವೇಕವಾದರೂ (Alternative wisdom) ಇರಬೇಕಲ್ಲವೇ ? ಈ ವಿವೇಕ ಇರುವುದೇ ಆದಲ್ಲಿ ನಾವು ಪ್ರಸ್ತುತ ಅವ್ಯವಸ್ಥೆಯಿಂದ ಬಾಧಿತರಾದ ತಳಸಮಾಜದ ಜನರಿಗೆ, ಜನರೊಡನೆ, ಜನರ ನಡುವೆ ಮಾತನಾಡಬೇಕಾಗುತ್ತದೆ. ಬಿಜೆಪಿಯನ್ನು ಮನುವಾದಿ, ಫ್ಯಾಸಿಸ್ಟ್ ಎಂದು ದೂಷಿಸುವುದು ಕೇವಲ ವಾಗಾಡಂಬರ ಘೋಷವಾಕ್ಯಗಳಾಗುತ್ತವೆ (Rhetorical Slogenerring) ತಳಮಟ್ಟದ ಸಮಾಜದ ಶ್ರೀಸಾಮಾನ್ಯರಿಗೆ ಇದನ್ನು ಬಿಡಿಸಿ ಹೇಳಬೇಕಿದೆ. ಇದರ ಅಪಾಯಗಳನ್ನು ಮನದಟ್ಟು ಮಾಡಬೇಕಿದೆ. ಅದಕ್ಕಿಂತಲೂ ಮುಖ್ಯವಾಗಿ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ನಾವು ಹೇಗೆ ಭಿನ್ನ ಎನ್ನುವುದನ್ನೂ ತಿಳಿಸಿಹೇಳಬೇಕಾಗುತ್ತದೆ. ಇಲ್ಲಿ ರಾಜಕೀಯ ಪರ್ಯಾಯದ (Political Alternative) ವಾತಾವರಣ ಸೃಷ್ಟಿಯಾಗುತ್ತದೆ.
ದುರದೃಷ್ಟವಶಾತ್ ಕಾಂಗ್ರೆಸ್ ನಾಯಕತ್ವ ಈ ವಿವೇಕವನ್ನು ಪ್ರದರ್ಶಿಸಿಲ್ಲ. ಆಡಳಿತಾರೂಢ ಸರ್ಕಾರದ ವಿರುದ್ಧ ಹೋರಾಡಲು ದೇಶವ್ಯಾಪಿ ಆಂದೋಲನವನ್ನು ರೂಪಿಸುವ ಹಂತದಲ್ಲೇ ಜನತೆಯ ಮುಂದೆ ಭವಿಷ್ಯದ ಪರ್ಯಾಯವೊಂದನ್ನು ಸ್ಪಷ್ಟವಾಗಿ ಮಂಡಿಸಬೇಕು. NEET ವಿರೋಧಿ ಹೋರಾಟದಲ್ಲಿ ಸಿಜೆಪಿ ಮತ್ತಿತರ ವಿದ್ಯಾರ್ಥಿ ಯುವ ಸಂಘಟನೆಗಳಿಂದ ಇಂತಹ ಪರ್ಯಾಯ ನಿರೀಕ್ಷಿಸಲೂ ಆಗುವುದಿಲ್ಲ. ಇದು ಕಾಂಗ್ರೆಸ್ ಮತ್ತು ಸಂಸದೀಯ ಎಡಪಕ್ಷಗಳ ಜವಾಬ್ದಾರಿಯಾಗುತ್ತದೆ. ಶಿಕ್ಷಣದ ಖಾಸಗೀಕರಣ, ಕಾರ್ಪೋರೇಟೀಕರಣ ಹಾಗೂ ಶೈಕ್ಷಣಿಕ ವ್ಯವಸ್ಥೆಯನ್ನು ಔದ್ಯಮಿಕ ಮಾರುಕಟ್ಟೆಯನ್ನಾಗಿ ಮಾಡುವ ವಿಶಾಲ ಹುನ್ನಾರದ (Broader Conspiracy) ಒಂದು ಭಾಗ NEET ಪ್ರವೇಶ ಪರೀಕ್ಷೆಗಳು. ಈ ವ್ಯವಸ್ಥೆಯನ್ನು ಸುಧಾರಿಸುವುದರಿಂದ ತಾತ್ಕಾಲಿಕ ಸಾಂತ್ವನ ದೊರೆಯುತ್ತದೆ. ಆದರೆ ವಿರೋಧ ಪಕ್ಷಗಳ ಗುರಿ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ ಆಗಬೇಕು.
ಅರ್ಥವ್ಯವಸ್ಥೆಯ ಅನರ್ಥಗಳು
ಇಡೀ ಅರ್ಥವ್ಯವಸ್ಥೆ (Economy), ಶೈಕ್ಷಣಿಕ ವಾತಾವರಣ ಹೀಗೆ ಅಮೂಲಾಗ್ರ ಬದಲಾವಣೆಗೆ ಒಳಗಾಗಬೇಕು ನಿಜ. ಆದರೆ ಬದಲಾದ ಆರ್ಥಿಕತೆ ಮತ್ತು ಶೈಕ್ಷಣಿಕ ವ್ಯವಸ್ಥೆಯ ರೂಪ ಹೇಗಿರಬೇಕು ? ಭಾರತದ ಸಂವಿಧಾನವನ್ನು ಆಚರಣಾತ್ಮಕ ಪ್ರದರ್ಶನ ವಸ್ತು (Ritualistic Show piece) ಎಂದು ಭಾವಿಸುವ ಬದಲು, ಅನುಸರಿಸಬೇಕಾದ-ಅಳವಡಿಸಿಕೊಳ್ಳಬೇಕಾದ ನೈತಿಕ ಆಡಳಿತ ಸಂಹಿತೆ ಎಂದು ಪರಿಗಣಿಸಿದರೆ, ಬದಲಾದ ವಾತಾವರಣದಲ್ಲಿ ತಳಮಟ್ಟದ ಸಮಾಜದ ಜನತೆಯ ವರ್ತಮಾನ ಮತ್ತು ಭವಿಷ್ಯ ನಿರ್ಣಾಯಕವಾಗುತ್ತದೆ. ವಿಕಾಸದ ಹಾದಿಯಲ್ಲಿ ಅತ್ಯಂತ ಅಪಾಯಕಾರಿ ದಾಳಿಯನ್ನು ಎದುರಿಸುತ್ತಿರುವ ಜನಸಂಖ್ಯೆ , ಮತವಂಚಿತರನ್ನೂ ಸೇರಿದಂತೆ ಈ ಸಮಾಜಗಳಲ್ಲಿದೆ. ಈ ಸಮಾಜಗಳ ಒಳಗೇ ಅಲ್ಪಸಂಖ್ಯಾತರು, ವಲಸೆ ಕಾರ್ಮಿಕರು, ಮಹಿಳೆಯರು, ಗ್ರಾಮೀಣ ಬಡವರು, ಆದಿವಾಸಿಗಳು, ದುಡಿಯುವ ವರ್ಗಗಳು ಹಾಗೂ ಅನಿಶ್ಚಿತ ನಾಳೆಗಳನ್ನು ಎದುರಿಸುವ ಎಲ್ಲ ಸಮುದಾಯಗಳೂ ಕಾಣುತ್ತವೆ.
ಈ ನಿರ್ಲಕ್ಷಿತ ಜನತೆಗೆ ರಾಜಕೀಯ ಪರ್ಯಾಯದ (Political Alternative) ಅವಶ್ಯಕತೆ ಇದೆ. ಆದರೆ ಈ ಪರ್ಯಾಯದ ಹರಿಕಾರರು ಯಾರಾಗಬೇಕು ? ಕಾಂಗ್ರೆಸ್ ಒಳಗೊಂಡಂತೆ ಯಾವುದೇ ಬಂಡವಾಳಿಗ ಪಕ್ಷಗಳು (Bourgeous Parties) ಈ ಕಲ್ಪನೆಗೆ ನಿಲುಕುವುದೂ ಇಲ್ಲ. ಏಕೆಂದರೆ ಆರ್ಥಿಕತೆಯ ದೃಷ್ಟಿಯಿಂದ ಎಲ್ಲ ಪಕ್ಷಗಳೂ ನವ ಉದಾರವಾದವನ್ನೇ ಪ್ರತಿಪಾದಿಸುತ್ತವೆ. ಈ ಪಕ್ಷಗಳಿಗೆ ಬಿಜೆಪಿಯನ್ನು ಪಲ್ಲಟಗೊಳಿಸಿ ತಾವು ಅಧಿಕಾರ ಗಳಿಸುವುದು ಆತ್ಯಂತಿಕ ಗುರಿ (Final Goal post) ಆಗಿರುತ್ತದೆ. ಇದು ಅಗತ್ಯವೇ ಆದರೂ ನಿರ್ಣಾಯಕವಾದ ಬದಲಾವಣೆಗೆ ಪೂರಕವಾಗುವುದಿಲ್ಲ. ಇಲ್ಲಿ ಸಂಸದೀಯ ಎಡಪಕ್ಷಗಳ ಪಾತ್ರ ಮಹತ್ವ ಪಡೆದುಕೊಳ್ಳುತ್ತದೆ. INDIA ಒಕ್ಕೂಟದ ಭಾಗವಾಗಿರುವ ಸಿಪಿಐ, ಸಿಪಿಎಂ, ಸಿಪಿಐ-ಎಂಎಲ್ ಲಿಬರೇಷನ್ , ಫಾರ್ವರ್ಡ್ ಬ್ಲಾಕ್ ಮತ್ತು ಆರ್ಎಸ್ಪಿ ಹಾಗೂ ಇದರ ಹೊರಗಿರುವ ಎಸ್ಯುಸಿಐ (ಕಮ್ಯುನಿಸ್ಟ್) ಇನ್ನಿತರ ಎಡಪಂಥೀಯ ರಾಜಕೀಯ ಪಕ್ಷಗಳು ಈ ನೊಗ ಹೊರಬೇಕಾಗುತ್ತದೆ.
ದುಡಿಯುವ ವರ್ಗಗಳ ನಡುವೆ
\ಸಂಘಟಿತ/ಅಸಂಘಟಿತ ವಲಯದ ಕಾರ್ಮಿಕರು, ಗಿಗ್ (ಅಮೆಜಾನ್-ಸ್ವಿಗಿ-ಝಮೋಟೋ-ಓಲಾ-ಊಬರ್) ಮತ್ತಿತರ ವಿತರಣಾ ವಲಯದ (Delivery Sector) ಕಾರ್ಮಿಕರು, ಮಾಹಿತಿ ತಂತ್ರಜ್ಞಾನ (IT)ಕಾರ್ಮಿಕರು, ಕ್ಷೇತ್ರ, ಕೃಷಿ ಕಾರ್ಮಿಕರು, ಮಹಿಳಾ ಕಾರ್ಮಿಕರು, ಆಶಾ-ಅಂಗನವಾಡಿ ಮೊದಲಾದ ಯೋಜನಾ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ರೈತರು, ಕಟ್ಟಡ ಕಾರ್ಮಿಕರು, ಗಾರ್ಮೆಂಟ್ ನೌಕರರು ಹೀಗೆ ದೇಶದ ಸಮಸ್ತ ದುಡಿಯುವ ಜನತೆಯ ನಡುವೆ ಎಡಪಕ್ಷಗಳ ಅಸ್ತಿತ್ವ ಇದೆ. ಎಡಪಂಥೀಯ ಹೋರಾಟಗಳ ದನಿಯೂ ಈ ದುಡಿಮೆಗಾರರ ನಡುವೆ ಧ್ವನಿಸುತ್ತಲೇ ಇದೆ. ವಿದ್ಯಾರ್ಥಿ-ಯುವ ಜನರ ನಡುವೆಯೂ ಕೆಂಬಾವುಟದ ಅಸ್ತಿತ್ವವಿದೆ (ಜಂತರ್ ಮಂತರ್ 1.0 ಮತ್ತು 2.0 ಇದನ್ನು ನಿರೂಪಿಸಿದೆ). ಅಂದರೆ ದೇಶದ ಶೇಕಡಾ 60ಕ್ಕೂ ಹೆಚ್ಚು ಜನಸಂಖ್ಯೆಯ ನಡುವೆ ಎಡಪಂಥೀಯ ಆಲೋಚನೆಗಳು ಅಂತರ್ಗಾಮಿನಿಯಾಗಿ ಹರಿದಾಡುತ್ತಲೇ ಇರುತ್ತದೆ.
ಎಡಪಕ್ಷಗಳು ದುರ್ಬಲವಾಗಿವೆ ಎಂದು ಆರೋಪಿಸುವ ಮುನ್ನ ಈ ಅಂಶಗಳನ್ನು ಗಂಭೀರವಾಗಿ ಪರಾಮರ್ಶಿಸಬೇಕಿದೆ. ಆದರೆ ನಿಜವಾಗಿ ದುರ್ಬಲವಾಗಿರುವುದು ಸಂಸದೀಯ ಎಡಪಕ್ಷಗಳ (Parliamentary Left parties) ರಾಜಕೀಯ ತಳಪಾಯ. ಅಂದರೆ ದೇಶ ಕಟ್ಟುವ ದುಡಿಮೆಯ ಜನರಿಗೆ ಒಂದು ರಾಷ್ಟ್ರಮಟ್ಟದ ಗಟ್ಟಿ ದನಿಯನ್ನು ಒದಗಿಸುವ ಎಡಪಕ್ಷಗಳು ಅದೇ ಜನರ ನಡುವೆ ರಾಜಕೀಯವಾಗಿ ನೆಲೆ ಸ್ಥಾಪಿಸಲು ಸಾಧ್ಯವಾಗಿಲ್ಲ. ಶಾಸನ ಸಭೆಗಳಿಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಈ ದುಡಿಮೆಗಾರರ ಜಗತ್ತಿನಲ್ಲಿ ಎಡಪಕ್ಷಗಳು ನಿರ್ಣಾಯಕ ಸ್ಥಾನ ಪಡೆಯಲಾಗುತ್ತಿಲ್ಲ. ಈ ದ್ವಂದ್ವ (Dichotomy) ಅಥವಾ ವಿರೋಧಾಭಾಸವನ್ನು (Contradiction) ಎಡಪಂಥೀಯ ಚಿಂತನಾ ವಲಯಗಳಲ್ಲಿ ಚರ್ಚೆಗೊಳಪಡಿಸಬೇಕಿದೆ. ಶತಮಾನದ ಇತಿಹಾಸ ಇರುವ ಕಮ್ಯುನಿಸ್ಟ್ ಕಾರ್ಮಿಕ ಚಳುವಳಿಯೂ ಇದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಥವಾ ಗಂಭೀರವಾಗಿ ಈ ಕುರಿತು ಮುಕ್ತ ಸಂವಹನಕ್ಕೆ ಮುಂದಾಗುತ್ತಿಲ್ಲ.
ಕಮ್ಯುನಿಸ್ಟ್ ಚಳುವಳಿಯ ಗೊಂದಲಗಳು
ಏಕೆ ಹೀಗೆ ? ಈ ಪ್ರಶ್ನೆಯೇ ನೂರಾರು ಉತ್ತರಗಳನ್ನು ಬಯಸುತ್ತದೆ. ಕಮ್ಯುನಿಸಂ ಅಥವಾ ಸಮತಾವಾದ ಮತ್ತು ಸಮಾಜವಾದ ಕೆಂಬಾವುಟದಲ್ಲಿಲ್ಲ. ಅದು ಸಾಂಕೇತಿಕ ಸಾಂಘಿಕ ಅಭಿವ್ಯಕ್ತಿ ಮಾತ್ರ. ಕಮ್ಯುನಿಸ್ಟ್ ಅಥವಾ ಮಾರ್ಕ್ಸ್ವಾದಿ ಚಿಂತನಾ ಧಾರೆ ಜೀವಂತವಾಗಿ ಇರಬೇಕಾದ್ದು ದೇಶದ ದುಡಿಯುವ ಜನತೆಯ ನಡುವೆ. ಭಾರತದ ಯಾವುದೇ ಸಮಾಜದ ಒಳಹೊಕ್ಕು ಅಲ್ಲಿನ ಶೋಷಿತ, ಅವಕಾಶವಂಚಿತ, ನಿರ್ಲಕ್ಷಿತ ಜನತೆಯ ನಡುವೆ ನಿಲ್ಲುವಾಗ ಸ್ವಾಭಾವಿಕವಾಗಿ , ಅನಿವಾರ್ಯವಾಗಿ ಮಾರ್ಕ್ಸ್—ಂಗೆಲ್ಸ್ನೊಂದಿಗೇ ಅಂಬೇಡ್ಕರ್, ಲೋಹಿಯಾ, ಕೆಲವೆಡೆ ಗಾಂಧಿ ಮತ್ತಿತರರ ಭಾರತೀಯ ಚಿಂತನಾಧಾರೆಗಳು ಸೇರಿಕೊಳ್ಳುತ್ತವೆ. ಈ ವಿಚಾರಧಾರೆಗಳೊಡನೆ ಅನುಸಂಧಾನ ಮಾಡುತ್ತಲೇ ಸಮಾಜದ ಒಳಸುಳಿಗಳನ್ನು, ಸೂಕ್ಷ್ಮಗಳನ್ನು ಅರಿತು, ಒಳಬಿರುಕುಗಳನ್ನು (Faultlines) ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಸಾಧ್ಯವಾಗುತ್ತಿದೆ ಆದರೆ ರಾಜಕೀಯವಾಗಿ ಧ್ವನಿಸುವಾಗ ಕ್ಷೀಣವಾಗುತ್ತಿದೆ. ಈ ದನಿ ಗಟ್ಟಿಯಾಗಬೇಕಾದರೆ ಸಮಗ್ರ ಜನದನಿಗೆ ಹೊಸ ರೂಪ ಕಲ್ಪಿಸುವ ರಾಜಕೀಯ ಚಿಂತನಾಧಾರೆ ಬೇಕಾಗುತ್ತದೆ. ಸೈದ್ಧಾಂತಿಕ ನೆಲೆಯಲ್ಲಿ ನೋಡಿದಾಗ ಮಾರ್ಕ್ಸ್ವಾದಿ ವಿಚಾರಧಾರೆಗಳಿಗೆ ಈ ತಾತ್ವಿಕ ಶಕ್ತಿ ಇದೆ.
ಆದರೆ ಭಾರತದ ದುರಂತ ಎಂದರೆ ಸಂಸದೀಯ ರಾಜಕಾರಣವನ್ನು (Constitutional Polity) ಪ್ರತಿನಿಧಿಸುವ ಎಡಪಕ್ಷಗಳ ರಾಜಕೀಯ ದನಿ ಒಡೆದ ಕನ್ನಡಿಯಂತಾಗಿದೆ. ಬಿಕ್ಕಟ್ಟುಗಳು ಎದುರಾದಾಗ ಸಾಂಕೇತಿಕವಾಗಿ ಒಂದಾಗುವ ಎಡ ಚಿಂತನೆ, ಆ ಸಂದರ್ಭವನ್ನು ದಾಟಿದ ಕೂಡಲೇ ಭಿನ್ನ ಹಾದಿಗಳನ್ನು ಕ್ರಮಿಸುತ್ತವೆ. ಕಮ್ಯುನಿಸ್ಟ್ ಪಕ್ಷಗಳಲ್ಲೂ ಬೇರೂರಿರುವ ಪ್ರಾದೇಶಿಕತೆಯ ಲಕ್ಷಣಗಳು ಸಮಗ್ರತೆಯನ್ನು ಸಾಧಿಸಲು ಬಹುದೊಡ್ಡ ಕಂಟಕವಾಗಿ ಕಾಣುತ್ತದೆ. ಇದನ್ನು ನಿವಾರಿಸಬಹುದಾದರೂ ಮೇಲ್ಮಟ್ಟದಲ್ಲಿ ಸೃಷ್ಟಿಯಾಗಿರುವ ʼ ಆಲೋಚನಾ ವಿಧಾನಗಳ ʼ (Line of Thought ) ಭಿನ್ನತೆ ಕಮ್ಯುನಿಸ್ಟ್ ಪಕ್ಷಗಳ ನಡುವೆ ಅಭೇದ್ಯ ಗೋಡೆಗಳನ್ನು ನಿರ್ಮಿಸಿವೆ. ಈ ಭಿನ್ನ ಆಲೋಚನಾ ವಿಧಾನಗಳನ್ನು ವಿಸರ್ಜಿಸಿ (Dissolve) ವರ್ತಮಾನದ ಭಾರತಕ್ಕೆ ಅಗತ್ಯವಾದ ವಿಚಾರಧಾರೆಯನ್ನು ಮಾರ್ಕ್ಸ್ವಾದದ ಚೌಕಟ್ಟಿನಲ್ಲೇ ನಿರ್ವಚಿಸುವ ಸಾಧ್ಯತೆಗಳಿವೆ. ಆದರೆ ಇದು ಸಾಧ್ಯವಾಗಬೇಕಾದರೆ ಕಮ್ಯುನಿಸ್ಟ್ ಪಕ್ಷಗಳ ಐಕ್ಯತೆ ಮುಖ್ಯವಾಗುತ್ತದೆ.
ಆದರೆ ಐಕ್ಯತೆಯ ಕೂಗು ಗಟ್ಟಿಯಾಗುತ್ತಿಲ್ಲ ! ಏಕೆ ?
(ಮುಂದಿನ ಭಾಗದಲ್ಲಿ)






