ಬೆಂಗಳೂರು (Bengaluru): ನಮ್ಮ ಸರ್ಕಾರ ಯುವ ನಿಧಿ ಕೊಡುವ ಜತೆಗೆ ಉದ್ಯೋಗ ಸೃಷ್ಟಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರು ಘೋಷಿಸಿದರು.
ಇಂದು ಅರಮನೆ ಮೈದಾನದಲ್ಲಿ ಬೃಹತ್ ಯುವ ಸಮೃದ್ಧಿ ಸಮ್ಮೇಳನ ಮತ್ತು ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾವು ಯುವ ನಿಧಿಯನ್ನೂ ಕೊಡ್ತೀವಿ. ಉದ್ಯೋಗವನ್ನೂ ಸೃಷ್ಟಿಸುತ್ತೇವೆ, ಉದ್ಯೋಗಕ್ಕೆ ಬೇಕಾದ ಕೌಶಲ್ಯ ತರಬೇತಿಯನ್ನೂ ನೀಡುತ್ತೇವೆ. ಇದು ನಮ್ಮ ಸರ್ಕಾರ ನಿರುದ್ಯೋಗ ಯುವಜನರಿಗೆ ನೀಡುವ ಅಭಯ ಎಂದು ಹೇಳಿದರು.

ಹೊಸ ಹೊಸ ಉದ್ಯೋಗ ಸೃಷ್ಟಿ ಮತ್ತು ತರಬೇತಿಗಾಗಿ ಈಗಿರುವ GTDC ಗಳ ಜತೆಗೆ ಹೊಸದಾಗಿ ಇನ್ನಷ್ಟು GTDC ಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಮಹತ್ವದ ಘೋಷಣೆ ಮಾಡಿದರು.
ನಿರುದ್ಯೋಗ ದೇಶದ ಪ್ರಮುಖ ಸಮಸ್ಯೆಯಾಗಿದೆ. ಕಳೆದ 10 ವರ್ಷಗಳಲ್ಲಿ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆದಿದೆ. 2014 ರಲ್ಲಿ ಪ್ರಧಾನಿ ಮೋದಿ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೀನಿ ಎಂದು ಭರವಸೆ ನೀಡಿ ಯುವ ಸಮೂಹದ ಮತ ಗಳಿಸಿದರು. ಈ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಸಬೇಕಿದ್ದ ಮೋದಿಯವರು, ಇರುವ ಉದ್ಯೋಗಗಳನ್ನೂ ಕಸಿದುಕೊಂಡಿದ್ದಾರೆ. ಹೀಗಾಗಿ ಪ್ರತೀ ವರ್ಷ ನಿರುದ್ಯೋಗ ಪ್ರಮಾಣ ಬೃಹತ್ತಾಗಿ ಬೆಳೆಯುತ್ತಾ ಶೇ.8.40 ಏರಿಕೆಯಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದರು.
ವೈದ್ಯಕೀಯ ಶಿಕ್ಷಣ ಸಚಿವರಾದ ಶರಣಪ್ರಕಾಶ್ ಪಾಟೀಲ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೌಶಲ್ಯ ಅಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಗಳು, ನೂರಾರು ಉದ್ಯಮಿಗಳು, ಸುಮಾರು 80 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
#karnataka #bengaluru #siddaramaiah #jobmela #congressgovt






