ಚುನಾವಣೆಗೆ ದಿನಗಣನೆ ಆರಂಭವಾಗಿರುವಾಗ ಬಿಜೆಪಿಯಲ್ಲಿ ಮುಂದಿನ ಸಿಎಂ ಯಾರಾಗಬೇಕೆಂಬ ಚರ್ಚೆ ಜೋರಾಗಿದೆ. ಈಗಾಗಲೇ ಲಿಂಗಾಯತ ಮತಬ್ಯಾಂಕ್ ಒಡೆದು ಹೋಗುವ ಭೀತಿಯಲ್ಲಿದ್ದರೂ ಅಮಿತ್ ಶಾ ಲಿಂಗಾಯತ ಮುಖ್ಯಮಂತ್ರಿಯನ್ನು ಘೋಷಿಸಲು ಹಿಂದೇಟು ಹಾಕಿದ್ದಾರೆ. ಈ ನಡುವೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ಹೆಸರು ಸಿಎಂ ಸ್ಥಾನಕ್ಕೆ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಸಿಟಿ ರವಿ ಅವರೇ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಈಶ್ವರಪ್ಪ, ಸಿಟಿ ರವಿ ಮುಂದಿನ ಸಿಎಂ ಆಗಲಿ, ಅವರಿಗೆ ಮತ ನೀಡಿ ಅವರನ್ನು ಗೆಲ್ಲಿಸಿ ಎಂದು ಬಹಿರಂಗವಾಗಿ ಕರೆ ನೀಡಿದ್ದಾರೆ.
ಬಿಜೆಪಿಯಲ್ಲಿ ಲಿಂಗಾಯತರನ್ನು ಹೊರತುಪಡಿಸಿ ಬೇರೆ ಸಮುದಾಯದವರನ್ನು ಮುಖ್ಯಮಂತ್ರಿ ಮಾಡುವುದಿಲ್ಲ ಎಂಬ ಮಾತನ್ನು ತೊಡೆದು ಹಾಕಲು ಬಿಜೆಪಿ ಈಗಾಗಲೇ ತೊಡೆದು ಹಾಕಲು ಬಿಜೆಪಿ ಹೈಕಮಾಂಡ್ ಪ್ರಯತ್ನ ಪಡುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ ಸಮಾವೇಶ ಒಂದರಲ್ಲಿ ಮಾತನಾಡುತ್ತಾ ಮುಂದಿನ ಸಿಎಂ ನಾನೇ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದರು. ಸಂಸದ ತೇಜಸ್ವಿ ಸೂರಯ ಕೂಡಾ ಬೊಮ್ಮಾಯಿಯೇ ಮುಂದಿನ ಸಿಎಂ ಎಂದು ಸಮರ್ಥಿಸಿದ್ದರು.
ಆದರೆ, ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಸ್ಪೋಟಗೊಳ್ಳುವ ಎಲ್ಲಾ ಲಕ್ಷಣಗಳನ್ನು ಕಾಣಿಸುತ್ತಿದೆ. ಮೈಸೂರಿನಲ್ಲಿ ಮಾತನಾಡಿದ್ದ ಸಿಟಿ ರವಿ, ಮುಖ್ಯಮಂತ್ರಿ ಆಗುವ ತಮ್ಮ ಇಂಗಿತವನ್ನು ವ್ಯಕ್ತಪಡಿಸಿದ್ದರು. ತಮ್ಮ ಕ್ಷೇತ್ರದಲ್ಲಿ ನಾನು ಸಿಎಂ ಆಗಬೇಕೆಂಬ ಕೂಗು ಇದೆ, ರಾಜ್ಯದ ಇತರೆಡೆಯಲ್ಲೂ ಇದೇ ಕೂಗು ಕೇಳಿ ಬಂದರೆ ನನ್ನನ್ನು ಸಿಎಂ ಮಾಡಿ ಎಂದು ಹೈಕಮಾಂಡಿಗೆ ಹೇಳುತ್ತೇನೆ ಎಂದು ಸಿಟಿ ರವಿ ಹೇಳಿಕೆ ನೀಡಿದ್ದರು.
ಆರಂಭದಲ್ಲಿ ಸಿಟಿ ರವಿ ಮಾತನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ಈಶ್ವರಪ್ಪ ಕೂಡಾ ಸಿಟಿ ರವಿ ಪರ ಬ್ಯಾಟಿಂಗ್ ಮಾಡಿದ ಬಳಿಕ ಸಿಎಂ ಸ್ಥಾನದ ಬಗ್ಗೆ ಗಂಭೀರ ಚರ್ಚೆಗಳಾಗುತ್ತಿವೆ. ಒಂದು ಕಡೆ ಬೊಮ್ಮಾಯಿ ತಮ್ಮ ಖುರ್ಚಿಯ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಇನ್ನೊಂದೆಡೆ ಪಕ್ಷಕ್ಕೆ ಲಿಂಗಾಯತರೊಳಗೆ ಆಗಿರುವ ಡ್ಯಾಮೇಜ್ ಅನ್ನು ಸರಿ ಪಡಿಸುವ ಯಾವ ಕಾರ್ಯಗಳೂ ನಡೆಯುತ್ತಿಲ್ಲ ಎನ್ನುವುದು ಪಕ್ಷದೊಳಗಿನ ಲಿಂಗಾಯತ ಮುಖಂಡರ ತಲೆಬಿಸಿಗೆ ಕಾರಣವಾಗಿದೆ.
ಬಿಎಸ್ ಯಡಿಯೂರಪ್ಪರನ್ನು ಸಿಎಂ ಗಾದಿಯಿಂದ ಕೆಳಗಿಳಿಸಿ ಮತ್ತೊಬ್ಬ ಲಿಂಗಾಯತ ನಾಯಕರಾಗಿರುವ ಬಸವರಾಜ ಬೊಮ್ಮಾಯಿಯವರನ್ನು ಕೂರಿಸಿ ಲಿಂಗಾಯತರ ಅಸಮಾಧಾನವನ್ನು ಕಡಿಮೆಗೊಳಿಸಲಾಗಿತ್ತು, ಇದೀಗ, ಅವರ ಬದಲು ಲಿಂಗಾಯತರಲ್ಲದವರಿಗೆ ಸಿಎಂ ಸ್ಥಾನ ನೀಡುತ್ತದೆ ಎಂಬ ಅಸಮಾಧಾನ ಸಮುದಾಯದಲ್ಲಿ ತೋರಬಹುದು. ಈಗಾಗಲೇ ಸವದಿ ಹಾಗೂ ಶೆಟ್ಟರ್ ನಿರ್ಗಮನದಿಂದ ಉಂಟಾಗಿರುವ ಗೊಂದಲವೇ ಶಮನವಾಗದಿರುವಾಗ ಸಿಎಂ ಆಕಾಂಕ್ಷಿ ಚರ್ಚೆ ಲಿಂಗಾಯತ ಬಿಜೆಪಿಗರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಸವದಿ ಹಾಗೂ ಶೆಟ್ಟರ್ ಕಾಂಗ್ರೆಸ್ ಸೇರಿರುವುದರ ಡ್ಯಾಮೇಜ್ ಕಂಟ್ರೋಲ್ ಗೆ ಲಿಂಗಾಯತ ಸಿಎಂ ಆಕಾಂಕ್ಷಿಯನ್ನು ಘೋಷಿಸುವಂತೆ ಅಮಿತ್ ಶಾ ಬಳಿ ಲಿಂಗಾಯತ ಮುಖಂಡರು ಬೇಡಿಕೆ ಇಟ್ಟಿದ್ದು, ಅವರು ಅದನ್ನು ನಿರಾಕರಿಸಿದ್ದರು ಎನ್ನುವುದು ಕೂಡಾ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.