ಅರ್ಜೆಂಟೀನಾದ ಫುಟ್‌ಬಾಲ್(Football) ಮಾಂತ್ರಿಕ ಲೆಜೆಂಡ್ ಲಿಯೋನೆಲ್ ಮೆಸ್ಸಿ (Lionel Messi) ಭಾರತಕ್ಕೆ ಭೇಟಿ ನೀಡಿದ್ದಾರೆ. ಗೋಟ್ ಇಂಡಿಯಾ ಟೂರ್ 2025 (GOAT India Tour) ಅಡಿಯಲ್ಲಿ ಭಾರತ ಪ್ರವಾಸದಲ್ಲಿರುವ ಲೆಜೆಂಡ್ ಲಿಯೋನೆಲ್ ಮೆಸ್ಸಿ ಇಂದು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ಭೇಟಿಯಾಗಲು ಆಗಮಿಸಿದರು.

ಮೆಸ್ಸಿ ಭೇಟಿ ಹಿನ್ನೆಲೆಯಲ್ಲಿ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಸಂಘಟಕರು 78,000 ಆಸನಗಳನ್ನು ತೆರೆದಿದ್ದು, 45 ನಿಮಿಷಗಳ ಕಾಲ ಮೆಸ್ಸಿ ಕ್ರೀಡಾಂಗಣದಲ್ಲಿ ಇರಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದರು. ಹಾಗೂ ಇಂದಿನ ಸಾಲ್ಟ್ ಲೇಕ್ ಕ್ರೀಡಾಂಗಣದ ಟಿಕೆಟ್ ಬೆಲೆ 7,000 ರೂಪಾಯಿಗೆ ಏರಿಕೆ ಆಗಿತ್ತು. ಸಾವಿರಾರು ಅಭಿಮಾನಿಗಳು ಲೆಜೆಂಡ್ ಲಿಯೋನೆಲ್ ಮೆಸ್ಸಿ ನೋಡಲು ಕ್ರೀಡಾಂಗಣದಲ್ಲಿ ನೆರೆದಿದ್ದರು. ಈ ವೇಳೆ ಮೆಸ್ಸಿ ಜೊತೆ ಫೋಟೋ ತೆಗೆದುಕೊಳ್ಳುವ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ಅಭಿಮಾನಿಗಳು ಏಕಾಏಕಿ ಕ್ರೀಡಾಂಗಣದೊಳಗೆ ಮುಗಿಬಿದ್ದಿದ್ದಾರೆ.

ಹಣ ಕೊಟ್ಟು ಬಂದ ಫ್ಯಾನ್ಸ್‌ಗೆ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಲಿಲ್ಲ. ಬದಲಾಗಿ ಸಿನಿಮಾ ತಾರೆಯರಿಗೆ ಹಾಗೂ ರಾಜಕಾರಣಿಗಳ ಕುಟುಂಬಸ್ಥರಿಗೆ ಮಾತ್ರ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಿದ ಆಯೋಜಕರ ಮೇಲೆ ಮೆಸ್ಸಿ ಫ್ಯಾನ್ಸ್ ಮುಗಿಬಿದ್ದಿದ್ದು, ಕ್ರೀಡಾಂಗಣದೊಳಗೆ ಕುರ್ಚಿಗಳನ್ನು ಎಸೆದಿದಷ್ಟೇ ಅಲ್ಲದೇ ಕ್ರೀಡಾಂಗಣದೊಳಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಈ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ.













