ಚನ್ನಪಟ್ಟಣದಲ್ಲಿ ಟಿಕೆಟ್ ಯಾರಿಗೆ ಕೊಡ್ಬೇಕು ಅನ್ನೋ ಬಗ್ಗೆ ಬಿಡದಿ ತೋಟದ ಮನೆಯಲ್ಲಿ ಕುಮಾರಸ್ವಾಮಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಸಭೆಗೂ ಮುನ್ನ ಮಾತನಾಡಿದ ಕುಮಾರಸ್ವಾಮಿ, ಟಿಕೆಟ್ ನನಗೆ ಕನ್ಫರ್ಮ್ ಅಂದಿರೋ ಯೋಗೇಶ್ವರ್ ಬಗ್ಗೆ ಸಾಫ್ಟ್ ಆಗಿ ಮಾತನಾಡಿದ್ದು, ಯಾರು ಏನು ಬೇಕಾದರೂ ಹೇಳಬಹುದು. ಆದರೆ ಟಿಕೆಟ್ ಅಂತಿಮ ಮಾಡುವುದು ನಾವು ಎಂದಿದ್ದಾರೆ.
ಕೋರ್ ಕಮಿಟಿ ಅಧ್ಯಕ್ಷ ಮಾಜಿ ಸಚಿವ ಜಿ.ಟಿ ದೇವೇಗೌಡ ಜೆಡಿಎಸ್ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡ ವಿಚಾರವಾಗಿ ಮಾತನಾಡಿ, ನಾವು ಕೋರ್ ಕಮಿಟಿ ಸಭೆಯನ್ನೆ ಕರೆದಿಲ್ಲ. ಒಂದ್ ಒಂದ್ ಸಲ ಅವ್ರಿಗೆ ಹಾಗೆ ಆಗುತ್ತೆ. ಅವ್ರೆ ತೀರ್ಮಾನ ಮಾಡಿಕೊಂಡು ಯಾವ ಟೈಂಗೆ ಬರಬೇಕೋ ಬರುತ್ತಾರೆ ಎಂದು ಟಾಂಗ್ ಕೊಟ್ಟಿದ್ದಾರೆ.
ಚನ್ನಪಟ್ಟಣ JDS ತಾಲೂಕು ಅಧ್ಯಕ್ಷ ಹೆಚ್.ಸಿ.ಜಯಮುತ್ತು ಮಾತನಾಡಿ, ಚನ್ನಪಟ್ಟಣ ಕ್ಷೇತ್ರ ಮಾಜಿ ಸಿಎಂ ಕುಮಾರಸ್ವಾಮಿ ಅವರ ಕ್ಷೇತ್ರ. ಹಾಗಾಗಿ ಈ ಕ್ಷೇತ್ರವನ್ನ ಜೆಡಿಎಸ್‌ಗೆ ಉಳಿಸಿಕೊಳ್ಳಬೇಕು. ನಿಖಿಲ್ ಕುಮಾರಸ್ವಾಮಿ ಅವರೇ ಸ್ಪರ್ಧೆ ಮಾಡ್ತಾರೆ. ನಾವು ಸಹ ಇದನ್ನೇ ಒತ್ತಾಯ ಮಾಡಿದ್ದೇವೆ ಎಂದು ಬಿಡದಿ ತೋಟದ ಮನೆಯ ಬಳಿ ಜಯಮುತ್ತು ಹೇಳಿದ್ದಾರೆ.
ಚನ್ನಪಟ್ಟಣ ಉಪಚುನಾವಣೆ ಬಗ್ಗೆ ಕೋಲಾರದಲ್ಲಿ ಮಾಜಿ ಸಂಸದ ಮುನಿಸ್ವಾಮಿ, ಸಿ.ಪಿ ಯೋಗಿಶ್ವರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಸಿ.ಪಿ ಯೋಗೇಶ್ವರ್ಗೆ ಟಿಕೆಟ್ ಕೊಡಬೇಕು. ನಾನು ಸಂಸದನಾಗಿದ್ದಾಗ ಕೋಲಾರ ಕ್ಷೇತ್ರ, ಜೆಡಿಎಸ್‌ಗೆ ಬಿಟ್ಟು ಕೊಟ್ಟಿದ್ದೇವೆ. ಈಗ ಕುಮಾರಸ್ವಾಮಿ ಹಠ ಮಾಡದೇ ಯೋಗೇಶ್ವರ್ಗೆ ಬಿಟ್ಟು ಕೊಡ್ಬೇಕು. ಯೋಗೇಶ್ವರ್ ಬಂಡಾಯ ಅಭ್ಯರ್ಥಿ ಆದ್ರೆ ಅನುಕೂಲ ಆಗಲ್ಲ ಎಂದಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಒಕ್ಕಲಿಗ ನಾಯಕರನ್ನು ಹೆಚ್‌ಡಿ ಕುಮಾರಸ್ವಾಮಿ ರಾಜಕೀಯವಾಗಿ ಮುಗಿಸ್ತಿದ್ದಾರೆ ಎಂಬ ಯೋಗೇಶ್ವರ್ ಆರೋಪಕ್ಕೆ ಮಾಜಿ ಸಿಎಂ ಡಿವಿ ಸದಾನಂದಗೌಡ ಪ್ರತಿಕ್ರಿಯೆ ನೀಡಿದ್ದು, ಸಾಧಾರಣವಾಗಿ ರಾಜಕೀಯಕ್ಕೆ ಬರೋರಲ್ಲಿ ಕೆಲವರನ್ನು ಬಿಟ್ಟರೆ ಬಹುತೇಕರು ಯಾವುದಾದರೂ ಸಣ್ಣ ಕುರ್ಚಿಗಾಗಿಯೇ ಬರ್ತಾರೆ. ಈ ಕುರ್ಚಿ ಬೇಕು ಅಂತ ಪ್ರಯತ್ನ ಮಾಡುವಾಗಲೆಲ್ಲ ಇಂಥ ಹೇಳಿಕೆಗಳೆಲ್ಲ ಬರ್ತವೆ. ಆದ ಕಾರಣ ಸಿಪಿ ಯೋಗೇಶ್ವರ್ ಹೇಳಿಕೆ ದೊಡ್ಡದಾಗಿ ನೋಡೋದು ಬೇಡ ಎಂದಿದ್ದಾರೆ.