ಭಾರತದ ಕೆಲ ಗಣ್ಯರ ಐಫೋನ್ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಗಳಾಗುತ್ತಿರಬಹುದು ಎಂಬ ಅಲರ್ಟ್ ಮೆಸೇಜ್ ಬಂದ ಹಿನ್ನಲೆ ಸಿಇಆರ್ಟಿ ಈ ಪ್ರಕರಣದ ತನಿಖೆ ಆರಂಭಿಸಿದ್ದು, ತನಿಖೆಯ ಭಾಗವಾಗಿ ಆಪಲ್ ಸಂಸ್ಥೆಗೆ ನೋಟೀಸ್ ಜಾರಿ ಮಾಡಿದೆ.
ದೇಶದ ಸೈಬರ್ ಭದ್ರತೆಗೆ ಅಪಾಯ ಎದುರಾಗುವ ಘಟನೆಗಳಿಗೆ ಸ್ಪಂದಿಸಲೆಂದು ಇರುವ ಕಂಪ್ಯೂಟರ್ ತುರ್ತು ಸ್ಪಂದನಾ ಸಂಸ್ಥೆ CERT-In ಈ ಪ್ರಕರಣದ ತನಿಖೆ ಆರಂಭಿಸಿದೆ. ತನಿಖೆಯ ಭಾಗವಾಗಿ ಆಪಲ್ ಸಂಸ್ಥೆಗೆ ಸಿಇಆರ್ಟಿಯಿಂದ ನೋಟೀಸ್ ಜಾರಿಯಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಇಲಾಖೆಯ ಕಾರ್ಯದರ್ಶಿ ಎಸ್ ಕೃಷ್ಣನ್, ಈ ತನಿಖೆಗೆ ಆಪಲ್ ಸಹಕಾರ ನೀಡಬಹುದು ಎಂದು ಭಾವಿಸಿರುವುದಾಗಿ ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಹುವಾ ಮೊಯಿತ್ರಾ, ಪ್ರಿಯಾಂಕಾ ಚತುರ್ವೇದಿ ಮೊದಲಾದ ನಾಯಕರ ಐಫೋನ್ಗಳಲ್ಲಿ ಅಲರ್ಟ್ ಮೆಸೇಜ್ ಬಂದಿದ್ದವು. ಸರ್ಕಾರಿ ಪ್ರಾಯೋಜಿತ ದಾಳಿಕೋರರು ಈ ಐಫೋನ್ ಅನ್ನು ಹ್ಯಾಕ್ ಮಾಡಲು ಯತ್ನಿಸುತ್ತಿವೆ ಎಂಬುದು ಆ ಅಲರ್ಟ್ ಮೆಸೇಜ್ನಲ್ಲಿರುವ ಸಾರಾಂಶ. ಈ ಸಂದೇಶದ ಸ್ಕ್ರೀನ್ಶಾಟ್ ಅನ್ನು ಮಹುವಾ ಮೊಯಿತ್ರಾ ಮೊದಲಾದವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ರಾಹುಲ್ ಗಾಂಧಿ ಪತ್ರಿಕಾಗೋಷ್ಠಿ ಕೂಡ ನಡೆಸಿ ಸರ್ಕಾರವನ್ನು ಝಾಡಿಸಿದ್ದರು.

ಈ ಘಟನೆಗಳು ನಡೆದ ಬೆನ್ನಲ್ಲೇ ಆಯಪಲ್ ಸಂಸ್ಥೆ ಹೇಳಿಕೆ ನೀಡಿ, ಐಫೋನ್ಗೆ ಬಂದ ಥ್ರೆಟ್ ನೋಟಿಫಿಕೇಶನ್ ಅನ್ನು ಸರ್ಕಾರಿ ಪ್ರಾಯೋಜಿತ ದಾಳಿಕೋರರಿಗೆ ನಿರ್ದಿಷ್ಟಪಡಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿತು.