ಬೆಂಗಳೂರು: ಬಹುನಿರೀಕ್ಷಿತ ಬಿಜೆಪಿ(BJP Karnataka) ಜಿಲ್ಲಾಧ್ಯಕ್ಷರ ನೇಮಕದ ಕುತೂಹಲಕ್ಕೆ ಕಡೆಗೂ ತೆರೆಬಿದ್ದಿದ್ದು, 39 ಸಂಘಟನಾತ್ಮಕ ಜಿಲ್ಲೆಗಳಿಗೆ ಬಿಜೆಪಿಯ ನೂತನ ಜಿಲ್ಲಾಧ್ಯಕ್ಷರುಗಳನ್ನು ನೇಮಿಸಿದ್ದು, ಇವರಲ್ಲಿ 9 ಜಿಲ್ಲೆಗಳಿಗೆ ಹಿಂದಿನ ಜಿಲ್ಲಾಧ್ಯಕ್ಷರುಗಳಿಗೆ ಮತ್ತೊಂದು ಅವಧಿಗೆ ಮುಂದುವರಿಕೆಗೆ ಅವಕಾಶ ನೀಡಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(BY Vijayendra) ಆದೇಶ ಹೊರಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆ ನಂತರದ ರಾಜ್ಯ ಬಿಜೆಪಿಯ ಕ್ಯಾಪ್ಟನ್ ಆಗಿ ಬಿ.ವೈ. ವಿಜಯೇಂದ್ರ ನೇಮಕವಾದ ದಿನದಿಂದಲೂ ರಾಜ್ಯದ ಎಲ್ಲಾ ಜಿಲ್ಲೆಗಳ ಬಿಜೆಪಿ ಜಿಲ್ಲಾಧ್ಯಕ್ಷರ ನೇಮಕದ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಎಲ್ಲಾ ಸಂಘಟನಾತ್ಮಕ ಜಿಲ್ಲೆಗಳ ಬಿಜೆಪಿಯ ಸ್ಥಳೀಯ ಮುಖಂಡರು, ಮಾಜಿ ಶಾಸಕರುಗಳು ಸೇರಿದಂತೆ ಹಲವು ಮಂದಿ ನಗರ ಹಾಗೂ ಜಿಲ್ಲಾಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದರು. ಅಲ್ಲದೇ ಇದಕ್ಕಾಗಿ ತಮ್ಮದೇ ಲಾಬಿ ನಡೆಸುವ ಮೂಲಕ ಸ್ಥಳೀಯವಾಗಿ ಪಕ್ಷದ ಅಧಿಕಾರದ ಗದ್ದುಗೆ ಏರುವ ಪ್ರಯತ್ನಗಳನ್ನು ನಡೆಸಿದ್ದರು. ಈ ಎಲ್ಲ ನಿರೀಕ್ಷೆ ಹಾಗೂ ಕುತೂಹಲಗಳಿಗೆ ಕಡೆಗೂ ತೆರೆಬಿದಿದ್ದು, ರಾಜ್ಯ ಬಿಜೆಪಿಯ 30 ಸಂಘಟನಾತ್ಮಕ ಜಿಲ್ಲೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಿಸಲಾಗಿದ್ದು, ಉಳಿದ 9 ಜಿಲ್ಲೆಗಳಿಗೆ ಹಾಲಿ ಇದ್ದಂತಹ ಅಧ್ಯಕ್ಷರುಗಳನ್ನೇ ಮುಂದುವರಿಸಲಾಗಿದೆ.

ನೂತನ ಬಿಜೆಪಿ ಜಿಲ್ಲಾಧ್ಯಕ್ಷರುಗಳ ನೇಮಕದಲ್ಲಿ ಇಬ್ಬರು ಶಾಸಕರಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆ ನೀಡಲಾಗಿದ್ದು, ರಾಯಚೂರು ನಗರದ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಜಯನಗರದ ಶಾಸಕ ಸಿ.ಕೆ. ರಾಮಮೂರ್ತಿ ಅವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲಾಗಿದ್ದರೆ. ಮಾಜಿ ಶಾಸಕರುಗಳಾದ ಎಲ್. ನಾಗೇಂದ್ರ, ಸಿ.ಎಸ್. ನಿರಂಜನ್ ಕುಮಾರ್ ಮತ್ತು ಅರುಣ್ ಕುಮಾರ್ ಪೂಜಾರ ಅವರುಗಳಿಗೆ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆ ನೀಡಲಾಗಿದೆ. ಇದಲ್ಲದೇ ಬಿಜೆಪಿ ಪ್ರಕೋಷ್ಠಗಳ ರಾಜ್ಯ ಸಂಚಾಲಕರಾಗಿ ಎಸ್. ದತ್ತಾತ್ರಿ ಹಾಗೂ ಬಿಜೆಪಿ ರಾಜ್ಯ ಕಾರ್ಯಾಲಯ ಕಾರ್ಯದರ್ಶಿಯಾಗಿ ಲೋಕೇಶ್ ಅಂಬೆಕಲ್ಲು, ಸಹ ಕಾರ್ಯದರ್ಶಿಯಾಗಿ ಬಿ.ಹೆಚ್. ವಿಶ್ವನಾಥ ಅವರನ್ನು ನೇಮಿಸಲಾಗಿದೆ.

9 ಜಿಲ್ಲೆಗಳಿಗೆ ಹಿಂದಿನ ಜಿಲ್ಲಾಧ್ಯಕ್ಷರು ಮತ್ತೊಂದು ಅವಧಿಗೆ ಮುಂದುವರಿಕೆ
ಚಿತ್ರದುರ್ಗ
ಚಿಕ್ಕಬಳ್ಳಾಪುರ
ವಿಜಯಪುರ
ತುಮಕೂರು
ಶಿವಮೊಗ್ಗ
ಬಾಗಲಕೋಟೆ
ಕಲಬುರ್ಗಿ ಗ್ರಾಮಾಂತರ
ವಿಜಯನಗರ
ಕೋಲಾರ











