ಬೆಂಗಳೂರು: ನಾವು ಬ್ರ್ಯಾಂಡ್ ಬೆಂಗಳೂರು ಮಾಡುತ್ತಿದ್ದರೂ ಟ್ಯಾಕ್ಸ್ ಹೆಚ್ಚಳ ಮಾಡಲ್ಲ. ಆದರೆ, ಬೆಂಗಳೂರಿನ ಎಲ್ಲಾ ಸ್ವತ್ತುಗಳನ್ನ ಮರು ಸಮೀಕ್ಷೆ ಮಾಡಿಸುತ್ತೇವೆ. ಎಲ್ಲಿ ತೆರಿಗೆ ಸೋರಿಕೆ ಆಗುತ್ತಿದೆಯೋ ಅದನ್ನು ಸರಿಪಡಿಸಿ ಡಿಜಿಟಲೀಕರಣ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಸಮ್ಮೇಳನ ಕಾರ್ಯಕ್ರಮ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಯಾವ ದಿಟ್ಟಿನಲ್ಲಿ ಬದಲಾವಣೆ ಆಗಬೇಕು ಅನ್ನೋ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಸದ್ಯಕ್ಕೆ 1.40 ಕೋಟಿ ಜನ ವಾಸ ಮಾಡುತ್ತಿದ್ದಾರೆ. ಪ್ರತಿವರ್ಷ 3 ಲಕ್ಷ ಹೊಸ ಕುಟುಂಬಗಳು ಸೇರ್ಪಡೆ ಆಗ್ತಿವೆ. ಕುಡಿಯುವ ನೀರಿನ ಬೇಡಿಕೆ ಕೂಡ ಜಾಸ್ತಿ ಆಗ್ತಾ ಇದೆ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ತಜ್ಞರಿಂದ ಸಲಹೆ ಪಡೆದುಕೊಂಡಿದ್ದೇವೆ. ಎಲ್ಲಾ ವಲಯಗಳ ಎಂಟು ತಂಡಗಳನ್ನು ಮಾಡಿದ್ದೇವೆ. ಅವರಿಂದ ವರದಿ ಪಡೆದುಕೊಳ್ಳುತ್ತೇವೆ ಎಂದು ತಿಳಿಸಿದರು.