ದೇಶಕ್ಕೆ ಸ್ವಾತಂತ್ರ್ಯ ದೊರೆತದ್ದು ಗಾಂಧೀಜಿಯವರ ನಾಯಕತ್ವದಲ್ಲಿ ಹಾಗೂ ಕಾಂಗ್ರೆಸ್ ಪಕ್ಷದಿಂದ. 1925 ರಲ್ಲಿ ಆರ್.ಎಸ್.ಎಸ್ ನ ಸ್ಥಾಪನೆಯಾಗಿದ್ದರೂ ದೇಶದ ಸ್ವಾತಂತ್ರ್ಯಕ್ಕೆ ಬಿಜೆಪಿಯವರ ಕೊಡುಗೆ ಶೂನ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಹರಿಹಾಯ್ದರು.
ಮೈಸೂರು ತಾಲ್ಲೂಕಿನ ತಮ್ಮ ಸ್ವಗ್ರಾಮ ಸಿದ್ದರಾಮನಹುಂಡಿಯಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ, ಬಿಜೆಪಿಯವರು ಸಾವರ್ಕರ್ ಬಹಳ ದೊಡ್ಡ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ ಎಂದೆಲ್ಲಾ ಹೇಳುತ್ತಾರೆ. ನಿಜವಾಗಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಜೈಲು ಸೇರಿಲ್ಲ. ಸಾವರ್ಕರ್ ನಕಲಿ ದೇಶಭಕ್ತ ಎಂದು ಟೀಕಿಸಿದರು.
ನಿಜಕ್ಕೂ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿ ಆಸ್ತಿ ಪಾಸ್ತಿ ಕಳೆದುಕೊಂಡವರು ಕಾಂಗ್ರೆಸ್ ನವರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಇವತ್ತು ನಮಗೆ ದೇಶಪ್ರೇಮದ ಪಾಠ ಮಾಡಲು ಬರುತ್ತಾರೆ. ನರೇಂದ್ರ ಮೋದಿ, ಅಡ್ವಾಣಿ, ವಾಜಪೇಯಿ ಇವರಾರು ಸ್ವಾತಂತ್ರ್ಯ ಹೋರಾಟಗಾರರಲ್ಲ; ಇವರೆಲ್ಲ ಸ್ವಾತಂತ್ರ್ಯದ ಫಲಾನುಭವಿಗಳು ಅಷ್ಟೇ ಎಂದರು.
ಬಿಜೆಪಿ ಸಮಾಜದ ಕೆಳ ವರ್ಗದ ಜನರ ಪಕ್ಷವಲ್ಲ. ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿರುವುದು ಸಂವಿಧಾನಕ್ಕೆ ಅಪಚಾರ ಮಾಡಿದಂತೆ. ಕಾರಜೋಳ, ನಾರಾಯಣಸ್ವಾಮಿ, ಜಿಗಜಿಣಗಿಯಂತವರು ಸ್ವಾರ್ಥಕ್ಕಾಗಿ ಬಿಜೆಪಿ ಸೇರಿದ್ದಾರೆ ಎಂದಿದ್ದೆ. ಆದರೆ ಇದಕ್ಕೆ ಛಲವಾದಿ ನಾರಾಯಣಸ್ವಾಮಿ ನನ್ನನ್ನು ದಲಿತ ವಿರೋಧಿ ಎಂದು ಹುಸಿ ಆರೋಪ ಮಾಡಿದರು ಎಂದು ಕಿಡಿಕಾರಿದರು.

ಜೆಡಿಎಸ್ ವಿಚಾರವಾಗಿಯೂ ಮಾತನಾಡಿ, ಕೇವಲ ಮೂರ್ನಾಲ್ಕು ಜಿಲ್ಲೆಗಳಿಗೆ ಮಾತ್ರ ಜೆಡಿಎಸ್ ಸೀಮಿತವಾಗಿದೆ. ಆದರೂ 2023 ರ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೆ ಅನ್ನುವುದು ಅವರ ಭ್ರಮೆ. ನಾನು ಜೆಡಿಎಸ್ ಅಧ್ಯಕ್ಷನಾಗಿದ್ದಾಗ 59 ಸೀಟು ಗೆದ್ದಿತ್ತು, ನನ್ನನ್ನು ಪಕ್ಷದಿಂದ ಹೊರಹಾಕಿದ ಮೇಲೆ ಅವರ ಪಕ್ಷದ ಸೀಟುಗಳು ನಿರಂತರವಾಗಿ ಕೆಳಗಿಳಿಯುತ್ತಿವೆ ಎಂದು ಹೇಳಿದರು.
ಈ ದೇಶದಲ್ಲಿ ಎಲ್ಲ ಜಾತಿ, ಧರ್ಮದ ಜನರಿದ್ದಾರೆ. ಸರ್ವರನ್ನೂ ಪ್ರೀತಿಸುವುದೇ ಕಾಂಗ್ರೆಸ್ನ ತತ್ವ ಮತ್ತು ಸಿದ್ದಾಂತ. ಈ ದಿನ ನಾವು ಸದಸ್ಯತ್ವ ಅಭಿಯಾನ ಆರಂಭಿಸಿದ್ದೇವೆ. ಪ್ರತಿಯೊಬ್ಬರು ಕೇವಲ 5 ರೂ. ಶುಲ್ಕ ನೀಡುವ ಮೂಲಕ ಪಕ್ಷದ ಸದಸ್ಯತ್ವ ಪಡೆಯಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.











