ರಾಜ್ಯ ಬಿಜೆಪಿ ಸೋಲಿನ ಬಗ್ಗೆ ಕೊನೆಗೂ ಆತ್ಮಾವಲೋಕನ ಸಭೆ ನಡೆಸಿದೆ. ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಹುತೇಕ ಶಾಸಕರು ಹಾಗು ಮಾಜಿ ಶಾಸಕರ ಗೈರು ಹಾಜರಿಯಲ್ಲಿ ನಡೆದ ಸಭೆ, ಸಿಟ್ಟು ಆಕ್ರೋಶಕ್ಕೆ ಕಾರಣವಾಗಿದೆ. ಪರಾಜಿತ ಅಭ್ಯರ್ಥಿಗಳ ಸಭೆಯಲ್ಲಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಕೆಂಡಾಮಂಡಲ ಆಗಿದ್ದಾರೆ. ಬಿಜೆಪಿ ನಾಯಕರ ವಿರುದ್ಧವೇ ಎಂಟಿಬಿ ನಾಗರಾಜ್ ಗರಂ ಆಗಿದ್ದು, ಸತತ ಎರಡು ಬಾರಿ ಸೋಲಿನ ಬಗ್ಗೆ ಸಭೆಯಲ್ಲಿ ಎಂಟಿಬಿ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ನಾನು ಮೂರು ಸಲ ಗೆದ್ದಿದ್ದೆ. ಬಿಜೆಪಿಗೆ ಬಂದ ಮೇಲೆ ಎರಡೂ ಸಲ ಸೋಲಬೇಕಾಯ್ತು. ನಾನು ಬಿಜೆಪಿಗೆ ಬಂದಿದ್ದು, ಹಣ ಹಾಗು ಸಚಿವ ಸ್ಥಾನ, ಅಧಿಕಾರದ ಆಮಿಷಕ್ಕಾಗಿ ಅಲ್ಲ ಎಂದು ಗುಡುಗಿದ್ದಾರೆ. ಈ ವೇಳೆ ಮಾಜಿ ಸಚಿವ ಡಾ.ಕೆ ಸುಧಾಕರ್ ಮೇಲೂ ಎಂಟಿಬಿ ನಾಗರಾಜ್ ಕೋಪಾತಾಪ ಪ್ರದರ್ಶನ ಮಾಡಿದ್ದಾರೆ ಎನ್ನಲಾಗಿದೆ.

ಡಾ. ಕೆ ಸುಧಾಕರ್‌ನಿಂದಲೇ ನಾನು ಸೋತಿದ್ದು..!
ಚಿಕ್ಕಬಳ್ಳಾಪುರದಲ್ಲಿ ಡಾ ಸುಧಾಕರ್ ತಾನೂ ಸೋತು ನಮ್ಮನ್ನೂ ಸೋಲಿಸಿದರು. ನಾನು ಹೊಸಕೋಟೆಯಲ್ಲಿ ಸೋಲಲು ಮತ್ತು ಚಿಂತಾಮಣಿ ಅಭ್ಯರ್ಥಿ ಸೋಲಲು ಡಾ ಸುಧಾಕರ್ ಸಹ ಕಾರಣ ಎಂದು ಎಂಟಿಬಿ ನಾಗರಾಜ್ ನೇರವಾಗಿಯೇ ವಾಗ್ದಾಳಿ ಮಾಡಿದ್ದಾರೆ. ಕಾಂಗ್ರೆಸ್‌ನವರು 10 ಕೆಜಿ ಅಕ್ಕಿ ಕೊಡ್ತಿದ್ರು, ಬಿಜೆಪಿ ಸರ್ಕಾರ ಅದನ್ನು 6 ಕೆಜಿ ಅಕ್ಕಿಗೆ ಇಳಿಸಿದ್ರಿ. ಬಡವರು ಬಿಜೆಪಿ ವಿರುದ್ಧ ಸಿಟ್ಟಾಗಿದ್ರು. ನನ್ನ ಕ್ಷೇತ್ರದಲ್ಲಿ 10 ಕೆಜಿ ಉಚಿತ ಅಕ್ಕಿ ಹಾಗು ಉಳಿದ ಗ್ಯಾರಂಟಿಗಳು ನನ್ನ ಸೋಲಿಗೆ ಕಾರಣ ಎಂದಿದ್ದಾರೆ. ಸತತ ಬಿಜೆಪಿಯಲ್ಲಿ ಎರಡು ಸೋಲುಗಳನ್ನು ಕಂಡಿದ್ರಿಂದ ಸೋಲಿನ ಬಗ್ಗೆ ಹತಾಷರಾಗಿ ಬೇಸರದಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಟಿಬಿ ನಾಗರಾಜ್. ಮಾಜಿ ಸಿಎಂ ಯಡಿಯೂರಪ್ಪ ಮಾತಿಗೆ ಕಟ್ಟುಬಿದ್ದು ನಾನು ಬಿಜೆಪಿ ಸೇರಿದೆ. ಬಿಜೆಪಿಯಲ್ಲಿ ಸ್ಪರ್ಧೆ ಮಾಡಿ ಎರಡೂ ಚುನಾವಣೆ ಸೋತೆ. ಆ ಸುಧಾಕರ್‌ಗೆ ಉಸ್ತುವಾರಿ ನೀಡಿದ್ರು, ಉಸ್ತುವಾರಿಯನ್ನು ಸಮರ್ಥವಾಗಿ ಸುಧಾಕರ್ ನಿಭಾಯಿಸಲಿಲ್ಲ ಎಂದಿದ್ದಾರೆ.

ಸಿದ್ದರಾಮಯ್ಯನನ್ನು ಬೈಯ್ಯುವುದರಲ್ಲೇ ಕಾಲಹರಣ ಆಯ್ತು
ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ರು. ಕಾಂಗ್ರೆಸ್ ಆರೋಪಕ್ಕೆ ಕೌಂಟರ್ ಅಟ್ಯಾಕ್ ಮಾಡಲಿಲ್ಲ. ನಾವು ಕೇವಲ ಸಿದ್ದರಾಮಯ್ಯಗೆ ಅಷ್ಟೇ ಬೈದ್ವಿ. ನಮ್ಮಲ್ಲಿ ಮಾಜಿ ಸಚಿವರು, ಮಾಜಿ ಶಾಸಕರು ಸರಿಯಾಗಿ ಆರೋಪಕ್ಕೆ ತಿರುಗೇಟು ಕೊಟ್ಟಿಲ್ಲ. ಪಕ್ಷದ ಕಾರ್ಯಕರ್ತರನ್ನು ಸಚಿವರು ಗಣನೆಗೆ ತೆಗೆದುಕೊಂಡಿಲ್ಲ. ಕಾರ್ಯಕರ್ತರ ಆಗು ಹೋಗುಗಳನ್ನು ಉಸ್ತುವಾರಿ ಸಚಿವರು ಕೇಳಲಿಲ್ಲ, ಇದರಿಂದ ಕಾರ್ಯಕರ್ತರು ಸಿಟ್ಟಾಗಿದ್ದರು. ಇದರಿಂದ ನಮಗೆ ಸೋಲು ಆಗಿದೆ ಎಂದು ಬಿಜೆಪಿ ನಾಯಕರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ವೇಳೆ ಸಮಾಧಾನದ ಮಾತುಗಳನ್ನು ಹೇಳಿರುವ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಸೋಲಿನ ಭಯಬೇಡ, ಲೋಕಸಭಾ ಚುನಾವಣೆಗೆ ಒಟ್ಟಾಗಿ ಕೆಲಸ ಮಾಡಿ, ಸೋಲಿನಿಂದ ಯಾರು ಧೃತಿಗೆಡಬೇಡಿ ಎಂದು ಧೈರ್ಯ ಹೇಳಿದ್ದಾರೆ. ಕೇವಲ ಎರಡು ಸ್ಥಾನದಿಂದ ಇಲ್ಲಿಯವರೆಗೆ ನಾನು ಪಕ್ಷ ಕಟ್ಟಿದ್ದೇನೆ. ಸದನದಲ್ಲಿ ಒಮ್ಮೆ ಇಬ್ಬರೇ ಶಾಸಕರಿದ್ದೆವು. ವಸಂತ ಬಂಗೇರ ಪಾರ್ಟಿ ಬಿಟ್ಟು ಹೋದರು. ಆಗ ನಾನು ಒಬ್ಬನೇ ಸದನದಲ್ಲಿ ನಿಂತು ಹೋರಾಟ ಮಾಡಿದ್ದೇನೆ ಎಂದು ಚೈತನ್ಯದ ಮಾತನ್ನಾಗಿದ್ದಾರೆ.
ಪ್ರಣಾಳಿಕೆ ಮಾಡುವಲ್ಲಿಯೂ ಬಿಜೆಪಿಗೆ ಭಾರೀ ಹಿನ್ನಡೆ..!
ಸೋಲಿನ ಪರಾಮರ್ಶೆ ಸಭೆಯಲ್ಲಿ ಪರಾಜಿತ ಅಭ್ಯರ್ಥಿಗಳು ಪ್ರಣಾಳಿಕೆ ಬಗ್ಗೆಯೂ ಬೇಸರ ಹೊರ ಹಾಕಿದ್ದಾರೆ. ಸಚಿವರು ಸರ್ಕಾರ ಇದ್ದಾಗ ಸರಿಯಾಗಿ ಸ್ಪಂದಿಸಲಿಲ್ಲ. ಪಕ್ಷದ ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡಲಿಲ್ಲ. ಲಕ್ಷ್ಮಣ ಸವದಿ ಪಕ್ಷ ಬಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಡೆತ ಆಯಿತು. ನಾಯಕರು ಮಾಡಿರುವ ತಪ್ಪಿಗೆ ನಾವು ಬಲಿಯಾದೆವು ಎಂದು ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ನಮ್ಮ ಪ್ರಣಾಳಿಕೆ ಕಾಂಗ್ರೆಸ್ ಪ್ರಣಾಳಿಕೆ ರೀತಿ ಇರಲಿಲ್ಲ. ಪ್ರಣಾಳಿಕೆ ಬಿಡುಗಡೆ ಕೂಡ ತಡವಾಯಿತು. ಪ್ರಣಾಳಿಕೆಯಲ್ಲಿ ಜನರ ಮನ ಮುಟ್ಟುವಂತೆ ಸ್ಕೀಮ್‌ಗಳನ್ನು ಮಾಡಬೇಕಿತ್ತು. ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ರು. ನಮ್ಮ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿದಾಗ ಜನ ಗ್ಯಾರಂಟಿ ಬಗ್ಗೆ ಕೇಳ್ತಿದ್ರು. ಅವ್ರು 2 ಸಾವಿರ ಕೊಡ್ತಾರೆ, ನೀವು ಕೊಡ್ತೀರಾ..? ಎಂದು ಪ್ರಶ್ನೆ ಮಾಡಿದ್ರು. ಕಾಂಗ್ರೆಸ್ ಗ್ಯಾರಂಟಿಗಳನ್ನು ನಾವು ಸಮರ್ಥವಾಗಿ ಎದುರಿಸಲಿಲ್ಲ. ಹೀಗಾಗಿಯೇ ನಮಗೆ ಸೋಲು ಆಯ್ತು ಎಂದು ಬೇಸರ ಹೊರ ಹಾಕಿದ್ದಾರೆ.
ಕೃಷ್ಣಮಣಿ