ಪಾಟ್ನಾ: ದೇಶದ ರಾಜಕೀಯ ಪ್ರತಿಷ್ಠೆಯ ಕಣವಾದ ಬಿಹಾರ ವಿಧಾನಸಭಾ ಚುನಾವಣೆ ಮೊದಲ ಹಂತದ ಮತದಾನ ಇಂದು ನಡೆಯಲಿದೆ. ಈಗಾಗಲೇ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತಗಟ್ಟೆಗಳ ಸುತ್ತಲೂ ಪೊಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ಇನ್ನು ನವೆಂಬರ್ 11ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ನವೆಂಬರ್ 14ರಂದು ಫಲಿತಾಂಶ ಹೊರಬೀಳಲಿದೆ.

ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮೈತ್ರಿಕೂಟ ಹಾಗೂ ತೇಜಸ್ವಿ ಯಾದವ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟಗಳು ಮತದಾರರನ್ನು ಸೆಳೆಯಲು ಈ ಬಾರಿ ಅನೇಕ ಗ್ಯಾರಂಟಿಗಳನ್ನು ಘೋಷಣೆ ಮಾಡಿವೆ. ಒಟ್ಟು 243 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಮೈತ್ರಿಕೂಟಗಳು ಅಧಿಕಾರಕ್ಕೆ ಬರಲು 122 ಸ್ಥಾನ ಗೆಲ್ಲಬೇಕಿದೆ. ಎರಡೂ ಹಂತಗಳಲ್ಲಿ 2,616 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಅಧಿಕಾರ ವಿರೋಧಿ ಅಲೆಯಿಂದ ಎನ್‌ಡಿಎ ಮೈತ್ರಿಕೂಟ ಈ ಬಾರಿ ಸೋಲು ಕಾಣಲಿದೆ ಎನ್ನುವ ಭರವಸೆಯಲ್ಲಿ ಮಹಾಘಟಬಂಧನ್ ಇದ್ದರೆ, ಚುನಾವಣಾ ಪೂರ್ವ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟ ಮತ್ತೆ ಅಧಿಕಾರವನ್ನು ಉಳಿಸಿಕೊಳ್ಳಲಿದೆ ಎಂದು ವರದಿ ಮಾಡುತ್ತಿದ್ದೆ. ಆದರೆ ಬಿಹಾರದ ಮತದಾರರು ಯಾವ ಪಕ್ಷದ ಕೈಹಿಡಿಯಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.




