CBI ಚಂದ್ರನಾಥ್ ರಥ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಪ್ರಕರಣದ ಪ್ರಮುಖ ಶೂಟರ್ ರಾಜ್ಕುಮಾರ್ನನ್ನು ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ಬಂಧಿಸಿದೆ. ಉತ್ತರ ಪ್ರದೇಶ ಪೊಲೀಸರ ಸಹಯೋಗದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿರುವ ಸಿಬಿಐ, ಟ್ರಾನ್ಸಿಟ್ ರಿಮಾಂಡ್ ಪಡೆದು ಮಂಗಳವಾರ ಕೋಲ್ಕತ್ತಾದ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲು ಸಿದ್ಧತೆ ನಡೆಸಿದೆ.
ಚಂದ್ರನಾಥ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಆಪ್ತ ಸಹಾಯಕರಾಗಿದ್ದರು. ಮೇ 6ರ ರಾತ್ರಿ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮದ ದೋಲತಲಾ ಪ್ರದೇಶದಲ್ಲಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಅವರನ್ನು ಸಮೀಪದಿಂದ ಗುಂಡಿಕ್ಕಿ ಹತ್ಯೆ ಮಾಡಿದ್ದರು.

ಈ ಘಟನೆ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಬಳಿಕ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು.ಸಿಬಿಐ ಮೂಲಗಳ ಪ್ರಕಾರ, ಈ ಹತ್ಯೆಯ ಹಿಂದೆ ದೊಡ್ಡ ಅಂತಾರಾಜ್ಯ ಸುಪಾರಿ ಗ್ಯಾಂಗ್ ಕಾರ್ಯನಿರ್ವಹಿಸಿರುವ ಶಂಕೆ ವ್ಯಕ್ತವಾಗಿದೆ. ರಾಜ್ಕುಮಾರ್ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿದೆ.
ಈ ಮೊದಲು Buxarನಿಂದ ಮಯಾಂಕ್ ರಾಜ್ ಮಿಶ್ರಾ ಹಾಗೂ ವಿಕಿ ಮೌರ್ಯ ಬಂಧಿತರಾಗಿದ್ದು, ಮತ್ತೊಬ್ಬ ಆರೋಪಿ ರಾಜ್ ಸಿಂಗ್ನನ್ನು ಬಲ್ಲಿಯಾದಲ್ಲಿ ವಶಕ್ಕೆ ಪಡೆಯಲಾಗಿತ್ತು.ಒಟ್ಟು ಎಂಟು ಮಂದಿ ಈ ಕೊಲೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ಬದಲಾಯಿಸುತ್ತಿರುವುದಾಗಿ ತಿಳಿದುಬಂದಿದೆ.ಚಂದ್ರನಾಥ್ ರಥ್ ಹತ್ಯೆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ವಾಕ್ಸಮರ ಆರಂಭವಾಗಿದೆ.ಬಿಜೆಪಿ ನಾಯಕರು ಈ ಹತ್ಯೆಯ ಹಿಂದೆ ಟಿಎಂಸಿ ಕೈವಾಡವಿದೆ ಎಂದು ಆರೋಪಿಸಿದ್ದು, ಕೆಲವರು ಅಭಿಷೇಕ್ ಬ್ಯಾನರ್ಜಿ ಹೆಸರು ಕೂಡ ಉಲ್ಲೇಖಿಸಿದ್ದಾರೆ. ಆದರೆ ಈ ಆರೋಪಗಳನ್ನು ಟಿಎಂಸಿ ತಳ್ಳಿಹಾಕಿದ್ದು, ನಿಜವಾದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದೆ.






