
ಸರ್ಕಾರಿ ಪ್ರೌಢ ಶಾಲೆ ಶಿಕ್ಷಕರೊಬ್ಬರು ವರ್ಗಾವಣೆಯಾದ ಕಾರಣ ಮಕ್ಕಳು ಬಿಕ್ಕಿ, ಬಿಕ್ಕಿ ಅತ್ತ ಪ್ರಸಂಗ ಔರಾದ ತಾಲೂಕಿನ ಕೌಡಗಾಂವ್ ಗ್ರಾಮದಲ್ಲಿ ಸೋಮವಾರ ನಡೆದಿದೆ.2013ರಿಂದ ವರ್ಷದಿಂದ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಗೋಪಾಲ್ ರೆಡ್ಡಿ ಅವರು ಬೀದರ್ ತಾಲೂಕಿನ ಬಗದಲ್ ಸರ್ಕಾರಿ ಪ್ರೌಢ ಶಾಲೆಗೆ ವರ್ಗಾವಣೆಯಾಗಿದ್ದಾರೆ.ಶಾಲೆಯಲ್ಲಿ ಆಯೋಜಿಸಿದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ನೆಚ್ಚಿನ ಶಿಕ್ಷಕ ಬೇರೆಡೆಗೆ ಹೋಗುತ್ತಿರುವುದರಿಂದ ಬೇಸರಗೊಂಡು ವಿದ್ಯಾರ್ಥಿಗಳು ಭಾವುಕರಾಗಿ ಒಲ್ಲದ ಮನಸ್ಸಿನಿಂದ ಕಳಿಸಿಕೊಟ್ಟರು.

ದಯವಿಟ್ಟು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗ್ಬೇಡಿ ಸರ್ ಎಂದು ಮಕ್ಕಳು ಅಳುತ್ತಾ ತಬ್ಬಿಕೊಂಡರು.ಬೀಳ್ಕೊಡುಗೆ ಕಾರ್ಯಕ್ರಮ ಮುಗಿಸಿ ಕೊಠಡಿಯಿಂದ ಹೊರಬರುತ್ತಿದ್ದಂತೆಯೇ ಬಿಗಿದಪ್ಪಿಕೊಂಡು, ಕೈಮುಗಿದ ಮಕ್ಕಳು ನೀವು ಹೋಗಬೇಡಿ, ಇಲ್ಲಿಯೇ ಇರಿ ಎಂದು ಕಣ್ಣೀರು ಹಾಕಿದರು. ಇದನ್ನು ನೋಡಿ ಶಿಕ್ಷಕ ಗೋಪಾಲ ರೆಡ್ಡಿ ಅವರ ಕಣ್ಣಂಚಿನಿಂದಲೂ ನೀರು ಚಿಮ್ಮಿದವು. ಇದಕ್ಕೆ ಸಾಕ್ಷಿಯಾಗಿದ್ದ ಮುಖ್ಯಗುರು, ಸಹ ಶಿಕ್ಷಕರು ಗೋಪಾಲ್ ರೆಡ್ಡಿ ಅವರನ್ನು ಪ್ರೀತಿಯಿಂದ ಬೀಳ್ಕೊಟ್ಟರು.

ಇದು ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಯಿತು.ಮೊಟ್ಟ ಮೊದಲ ಸೇವೆ ಆರಂಭಿಸುವ ಮೂಲಕ 11 ವರ್ಷಗಳ ಕಾಲ ದೈಹಿಕ ಶಿಕ್ಷಣ ಶಿಕ್ಷಕನಾಗಿ ಸೇವೆ ಸಲ್ಲಿಸಿದ್ದೇನೆ. ಎರಡು ಬಾರಿ ಸಲ ಖೋ ಖೋ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಹಾಗೂ ಮೂರು ಸಲ ವಿಭಾಗ ಮಟ್ಟಕ್ಕೆ ಮತ್ತು ಸ್ಕೌಟ್ ಮತ್ತು ಗೈಡ್ಸ್ ನಲ್ಲಿ ರಾಜ್ಯ ಮಟ್ಟದ ಪುರಸ್ಕಾರ ಗವರ್ನರ್ ಅವಾರ್ಡ್, ಮೂರು ಬಾರಿ ರಾಜ ಭವನ ಹೋಗಲು ಅವಕಾಶ ಸೇರಿದಂತೆ ಅನೇಕ ಚಟುವಟಿಕೆಗಳಲ್ಲಿ ಸುಮಾರು 35 ವಿದ್ಯಾರ್ಥಿಗಳಿಗೆ ವಿವಿಧ ಪ್ರಶಸ್ತಿಗೆ ಗುರುತಿಸುವ ಕೆಲಸ ಮಾಡಿದ್ದಾರೆ.
ನನ್ನ 11 ವರ್ಷದ ಅವಧಿಯಲ್ಲಿ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿರುವ ಸಂತೋಷ್ ಕುಮಾರ್ ಪೂಜಾರಿ ಜಗದೇವಿ ಬೋಸ್ಲೆ ಹಾಗೂ ಪ್ರಸ್ತುತ ಸೇವೆಯನ್ನು ಸಲ್ಲಿಸುತ್ತಿರುವ ಮುಖ್ಯ ಗುರು ಬಾಲಿಕಾ ಮೇಹಕರ್ ಹಾಗೂ ಗ್ರಾಮದ ಪೋಷಕರ ಬೆಂಬಲ , ಸಹಕಾರದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.ಇಲ್ಲಿನ ಜನರ ಮತ್ತು ಮಕ್ಕಳ ಪ್ರೀತಿ, ಸ್ನೇಹ ಇಷ್ಟು ವರ್ಷ ಇಲ್ಲಿ ನೆಲೆ ನಿಲ್ಲುವಂತೆ ಮಾಡಿತು. ಮಕ್ಕಳ ಜತೆಗೆ ಮರೆಯಲಾರದಂಥ ಬಾಂಧವ್ಯ ಬೆಸೆದಿದೆ ಎಂದು ಶಿಕ್ಷಕ ಗೋಪಾಲ್ ರೆಡ್ಡಿ ಭಾವುಕರಾಗಿ ಹೇಳಿದರು.