ಬೆಂಗಳೂರಿನ ಬೇಗೂರು ಕೆರೆಯಲ್ಲಿ ಪ್ರತಿಷ್ಟಾಪಿಸಿರುವ ಶಿವನ ಮೂರ್ತಿ ಪ್ರಕರಣದ ಕುರಿತಂತೆ ತನಿಖೆ ನಡೆಸಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡುವಂತೆ ಬೆಂಗಳೂರು ಸೌತ್ ಈಸ್ಟ್ ವಿಭಾಗದ ಡಿಸಿಪಿಗೆ ಕರ್ನಾಟಕ ಹೈಕೋರ್ಟ್ ಬುಧವಾರ ಆದೇಶ ನೀಡಿದೆಯೆಂದು ಕನ್ನಡ ಬಾರ್ & ಬೆಂಚ್ ವರದಿ ಮಾಡಿದೆ.
ಪ್ರಕರಣದ ಕುರಿತಂತೆ ಅರ್ಜಿ ಸಲ್ಲಿಸಿರುವ ಪರಿಸರವಾದಿ ಸಂಸ್ಥೆಯ ಮನವಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠವು ಬೆಂಗಳೂರಿನ ಸೌತ್ ಈಸ್ಟ್ ವಿಭಾಗ ಡಿಸಿಪಿಗೆ ತನಿಖೆಯ ಹೊಣೆ ನೀಡಿದೆ.
ವಿಚಾರಣೆ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ಬಿಬಿಎಂಪಿ ನಿಲುವಿಗೆ ಆಕ್ಷೇಪ ಸಲ್ಲಿಸಿದ್ದಾರೆ. ಆಗ, “ಬಿಬಿಎಂಪಿ ಇದುವರೆಗೆ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿಲ್ಲ. ಒಂದೊಮ್ಮೆ ಹಾಗೆ ಮಾಡಿದರೆ ಅದರ ಪರಿಣಾಮ ಏನು ಎಂಬುದು ಬಿಬಿಎಂಪಿಗೆ ಗೊತ್ತಿದೆ. ನ್ಯಾಯಾಂಗ ನಿಂದನೆ ವಿಚಾರವನ್ನು ನಮಗೆ ಬಿಡಿ” ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಹೇಳಿದ್ದಾರೆ.
ನ್ಯಾಯಾಲಯದ ಆದೇಶದಂತೆ ಯಥಾಸ್ಥಿತಿ ಕಾಪಾಡಲಾಗಿದೆ, ಶಿವನ ಪ್ರತಿಮೆಗೆ ಪರದೆ ಹಾಕಲಾಗಿದೆ ಎಂದು ಸರ್ಕಾರಿ ಅಧಿಕಾರಿ ವಿಜಯ್ ಕುಮಾರ್ ಪಾಟೀಲ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಕ್ರಮ ಕೈಗೊಳ್ಳಲಾಗುತ್ತಿರುವ ಮಾಹಿತಿಯನ್ನು ಬೆಂಗಳೂರು ಪೊಲೀಸ್ ಆಯುಕ್ತರು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ಈ ಪ್ರಕರಣದ ಸಂಬಂಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಪಂತ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಸೆಪ್ಟೆಂಬರ್ 2 ಕ್ಕೆ ಮುಂದೂಡಿದೆ.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಬೇಗೂರು ಕೆರೆಯಲ್ಲಿ ಕೃತಕ ದ್ವೀಪ ಸೃಷ್ಟಿಸಿ ಶಿವನ ಮೂರ್ತಿ ಪ್ರತಿಷ್ಠಾಪಿಸಿರುವವರ ವಿರುದ್ಧ ಕ್ರಮಕೈಗೊಳ್ಳಬೇಕು. ಅಲ್ಲದೇ, ಕೆರೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವಂತೆಯೂ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿತ್ತು.
ಕೆರೆಯಲ್ಲಿ ಈ ರೀತಿಯ ಚಟುವಟಿಕೆಗಳನ್ನು ನಡೆಸಬಾರದು ಎಂದು ಹಲವು ಆದೇಶಗಳನ್ನು ಹೊರಡಿಸಲಾಗಿದ್ದರೂ ಹೀಗೆ ಮಾಡುತ್ತಿರುವುದು ಆಘಾತ ಉಂಟು ಮಾಡುತ್ತದೆ. ನ್ಯಾಯಾಲಯದ ಆದೇಶಗಳನ್ನು ಸಲೀಸಾಗಿ ನಿಷೇಧಿಸಲಾಗಿದೆ. ಒಂದುವೇಳೆ, ನ್ಯಾಯಾಲಯದ ಆದೇಶದಿಂದ ಯಾರಿಗಾದರೂ ಸಮಸ್ಯೆಯಾದರೆ ಅದಕ್ಕೆ ಶಾಸನಬದ್ಧವಾದ ಪರಿಹಾರಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತ್ತು.
ಬೇಗೂರಿನ ಕೆರೆಯಲ್ಲಿ ಬಿಬಿಎಂಪಿ ಅಕ್ರಮವಾಗಿ ಮಣ್ಣು ತುಂಬಿ ಕೃತಕ ದ್ವೀಪ ಸೃಷ್ಟಿಸಿ, ಅಲ್ಲಿ ಶಿವನ ಮೂರ್ತಿ ಪ್ರತಿಷ್ಟಾಪಿಸಿದೆ, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ಲಿಯೊ ಸಲ್ದಾನ ಎನ್ನುವವರು ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯವು ಶಿವನ ಮೂರ್ತಿ ಮುಚ್ಚುವಂತೆ ನಿರ್ದೇಶನ ನೀಡಿತ್ತು. ಆದರೆ, ಕೆಲವು ದಿನಗಳ ಹಿಂದೆ ಹಿಂದುತ್ವವಾದಿ ಕಾರ್ಯಕರ್ತರು ನ್ಯಾಯಾಲಯದ ಆದೇಶವನ್ನು ಮೀರಿ ಮೂರ್ತಿಗೆ ಸುತ್ತಿದ್ದ ಟರ್ಪಾಲನ್ನು ಬಿಚ್ಚಿದ್ದರು. ಅಲ್ಲದೆ, ಅರ್ಜಿದಾರರ ವಿರುದ್ಧ ಕೋಮು ನಿಂದಕ ಸಂದೇಶಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಕೆಲವು ಬೆದರಿಕೆಗಳೂ ಬಂದಿದೆಯೆಂದು ಎಂದು ಮೂಲಗಳು ಪ್ರತಿಧ್ವನಿಗೆ ತಿಳಿಸಿದೆ.