ಈಗಾಗಲೇ ಗಾಂಧಿನಗರದಲ್ಲಿ ಸಾಕಷ್ಟು ಸುದ್ದಿ ಮಾಡಿರುವ “ದಿ” ಚಿತ್ರ ಇದೀಗ ತನ್ನ ಟೀಸರ್ ಬಿಡುಗಡೆ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ. ಕಾಡಿನಲ್ಲಿ ನಡೆಯುವ ಈ ಕಥೆಯ/ಚಿತ್ರದ “ಕರಡಿ”ಯ ಒಂದು ವಿಶೇಷ ಟೀಸರ್ ಅನ್ನು ಚಿತ್ರ ತಂಡ ಬಿಡುಗಡೆ ಮಾಡಿರುವುದು ವಿಶೇಷವಾಗಿದೆ.

“ದಿ” ಕಾಡಿನಲ್ಲಿ ನಡೆಯುವ ಒಂದು ಹುಡುಕಾಟದ ಕಥೆ. ಕಾಡಿಗೆ ವಿಹಾರಕ್ಕಾಗಿ ತೆರಳುವ ಜೋಡಿಯ ಜೀವನದಲ್ಲಿ ನಡೆಯುವ ಆಕಸ್ಮಿಕ ಘಟನೆಗಳ ಸುತ್ತ ಕಥೆಯನ್ನು ಕುತೂಹಲಕಾರಿಯಾಗಿ ಹೆಣೆಯಲಾಗಿದೆ.
ಈಗಾಗಲೇ ಚಿತ್ರ ತಂಡ ಒಂದು ಪ್ರೋಮೋ ವಿಡಿಯೋ/ತುಣುಕನ್ನು ಬಿಡುಗಡೆ ಮಾಡಿದ್ದು, ಇದೀಗ ಕಾಡು ಪ್ರಾಣಿಗಳ CG (ಕಲರ್ ಗ್ರೇಡಿಂಗ್) ತುಣುಕುಗಳನ್ನು ಟೀಸರ್ ಮೂಲಕ ಬಿಡುಗಡೆ ಮಾಡಿ ಸಿನಿ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.
ಕರಡಿ ಹಾಗೂ ಇತರೆ ಪ್ರಾಣಿಗಳ CG ಕೆಲಸವನ್ನು ಉಜ್ಬೇಕಿಸ್ತಾನ್ ಹಾಗೂ ನ್ಯೂಯಾರ್ಕಿನಲ್ಲಿ ಮಾಡಿಸಿರುವುದು ಗಮನಾರ್ಹ ಸಂಗತಿ, ಹಾಗೂ ಇದೊಂದು ವಿಭಿನ್ನ ರೀತಿಯ ಪ್ರಯತ್ನ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ವಿನಯ್ ವಾಸುದೇವ್ ನಿರ್ದೇಶನದ “ದಿ” ಚಿತ್ರದಲ್ಲಿ ವಿನಯ್ ವಾಸುದೇವ್, ದಿಶಾ ರಮೇಶ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಾಗೇಂದ್ರ ಅರಸ್, ಹರಿಣಿ ಶ್ರೀಕಾಂತ್, ಬಲ ರಾಜ್ವಾಡಿ ಮುಂತಾದವರು ನಟಿಸಿದ್ದಾರೆ. ಸಿದ್ದಾರ್ಥ್ ಆರ್ ನಾಯಕ್ ಅವರು ಚಿತ್ರದ ಸಂಕಲನಕಾರರಾಗಿದ್ದು, ಅಲೆನ್ ಭರತ್ ಛಾಯಾಗ್ರಹಣ ಮಾಡಿದ್ದಾರೆ. ಸ್ಟೀವನ್ ಸತೀಶ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ ಮತ್ತು ಈ ಚಿತ್ರವನ್ನು ವಿಡಿಕೆ ಗ್ರೂಪ್ಸ್ ನಿರ್ಮಿಸಿದೆ. “ದಿ” ಚಿತ್ರ ಇದೇ ಬೇಸಿಗೆ ಸಮಯದಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.