ರಾಜ್ಯ ಸರ್ಕಾರ ಕಸ ವಿಲೇವಾರಿಗೆ ಹೊಸ ಯೋಜನೆ ಜಾರಿ ಮಾಡಿದೆ. ಜೂನ್ 1 ರಿಂದ ಹೊಸ ಯೋಜನೆ ಜಾರಿ ಆಗಲಿದ್ದು, ಕಸ ವಿಲೇವಾರಿಗಾಗಿಯೇ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ ಅನ್ನೋ ಕಂಪನಿ ಸ್ಥಾಪನೆ ಮಾಡಲಾಗಿದೆ. ಇಷ್ಟು ದಿನಗಳ ಕಾಲ ಕಸದ ಸಮಸ್ಯೆಗೆ ಬಿಬಿಎಂಪಿಯನ್ನು ಗುರಿ ಮಾಡಲಾಗ್ತಿತ್ತು. ಆದರೆ ಇನ್ಮುಂದೆ ಘನತ್ಯಾಜ್ಯ ನಿರ್ವಹಣಾ ಕಂಪನಿ ಲಿಮಿಟೆಡ್ ಉತ್ತರದಾಯಿತ್ವ ಪಡೆದುಕೊಳ್ಳಲಿದೆ.
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಈ ಕಂಪನಿ ಸ್ಥಾಪಿಸಿದ್ದು, ಕಸ ಸಂಗ್ರಹಣೆ, ಕಸ ಸಾಗಾಣಿಕೆ ಹಾಗೂ ಕಸ ವಿಲೇವಾರಿ ಜವಾಬ್ದಾರಿ ಈ ಕಂಪನಿ ಹೆಗಲೇರಿದೆ. ಜೂನ್ 1 ರಿಂದ ಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ ಮಾಡುವುದು, ಸಂಗ್ರಹ ಮಾಡಿದ ಕಸವನ್ನ ಟಿಪ್ಪರ್ ಲಾರಿಗಳ ಮೂಲಕ ಕಸ ಸಂಸ್ಕರಣಾ ಘಟಕ ಅಥವಾ ಕ್ವಾರಿ ಗಳಿಗೆ ಸಾಗಾಣಿಕೆ ಮಾಡುವುದು ಈ ಕಂಪನಿಯ ಹೊಣೆಗಾರಿಕೆ.
ಬಿಬಿಎಂಪಿ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರೋ ಅಟೋ, ಟಿಪ್ಪರ್, ಕಾಂಪ್ಯಾಕ್ಟರ್, ಚಾಲಕರು, ಸಹಾಯಕರು ಕೂಡ ಈ ಕಂಪನಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಬೆಂಗಳೂರಿನಲ್ಲಿ 7 ಕಸ ಸಂಸ್ಕರಣಾ ಘಟಕಗಳು ಇದ್ದು, ಎಲ್ಲವೂ ಈ ಕಂಪನಿ ವ್ಯಾಪ್ತಿಗೆ ಬರಲಿವೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಪ್ರತಿ ವರ್ಷ ಕಂಪನಿಗೆ ಅನುದಾನ ಒದಗಿಸಲಿದ್ದು, ಕಸ ಸಮಸ್ಯೆ ನಿರ್ವಹಣೆಗೆ ಮುಕ್ತಿ ಸಿಗುವ ಸಾಧ್ಯತೆಯಿದೆ.