ಗದಗ: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ನಿರಂತರ ಒಲೈಕೆ ರಾಜಕಾರಣ ಮಾಡುತ್ತಾ ಬಂದಿದ್ದು, ಜನ ವಿರೋಧಿ ನೀತಿಯನ್ನು ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ(Basavaraj Bommai) ಆರೋಪಿಸಿದರು.

ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರ ಹಿಂದುಳಿದವರು, ಬಡವರು, ರೈತರ ಸಾಲ ಮನ್ನಾ ಮಾಡಬೇಕಿತ್ತು. ರಾಜ್ಯದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಆತ್ಮಹತ್ಯೆಗೆ ಸರಿಯಾಗಿ ಪರಿಹಾರ ಕೊಡುತ್ತಿಲ್ಲ. ಇನ್ಶೂರೆನ್ಸ್ ಕೊಡುತ್ತಿಲ್ಲ. ಬಡ್ಡಿ ಮನ್ನಾ ಕೂಡ ಮಾಡುತ್ತಿಲ್ಲ. ಶೇ 80%ರಷ್ಟು ಜನರು ಸಂಕಷ್ಟದಲ್ಲಿದ್ದಾರೆ. ಜನ ವಿರೋಧಿ ನೀತಿಯನ್ನು ಈ ಸರ್ಕಾರ ಮಾಡುತ್ತಿದೆ ಎಂದು ಗುಡುಗಿದರು.

ರಾಜ್ಯ ಸರ್ಕಾರ ಸ್ಥಳಿಯ ಸಂಸ್ಥೆಗಳ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲು ಮುಂದಾಗಿರುವ ಕುರಿತು ಮಾತನಾಡಿದ ಅವರು, ಕರ್ನಾಟಕ ಪ್ರಗತಿಪರ ರಾಜ್ಯ, ಐಟಿ ಬಿಟಿ ರಾಜ್ಯ, ಇದನ್ನು ಮತ್ತೆ ಪ್ರಾಚೀನತೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಚುನಾವಣಾ ಆಯೋಗ ಹ್ಯಾಕ್ ಮಾಡುವ ಬಗ್ಗೆ ತೋರಿಸಿ ಎಂದು ಕರೆದರೂ ಕಾಂಗ್ರೆಸ್ ಭಾಗವಹಿಸುತ್ತಿಲ್ಲ. ಯಾವ ಇವಿಎಂ ಚುನಾವಣೆ ಮೂಲಕ ಗೆದ್ದಿದ್ದಾರೆ ಅದನ್ನೇ ತಿರಸ್ಕಾರ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಮೊದಲು ರಾಜಿನಾಮೆ ಕೊಟ್ಟು ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ.

ನಮ್ಮ ಮೆಟ್ರೊ ದರ ಏರಿಕೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಸಂಸದ ಬಸವರಾಜ ಬೊಮ್ಮಾಯಿ, ಮೆಟ್ರೊ ದರ ಏರಿಕೆಗೂ ಕೇಂದ್ರಕ್ಕೆ ಸಂಬಂಧ ಇಲ್ಲ. ಅದು ಒಂದು ಕಂಪನಿ. ಅದರ ಮುಖ್ಯಸ್ಥರೇ ಅದನ್ನು ತೀರ್ಮಾನ ಮಾಡುತ್ತಾರೆ. ರಾಜ್ಯ ಸರ್ಕಾರ ಹೆಚ್ಚಳ ಮಾಡಿರುವ ತೀರ್ಮಾನವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.






