ಧರ್ಮ, ಜಾತಿ , ದೇಶದ ಗಡಿಯನ್ನು ಮೀರಿ ಪ್ರೀತಿ ಹಂಚುವ ಕ್ರೀಡೆಯನ್ನು ಧರ್ಮ ಸಂಘರ್ಷಕ್ಕೆ ತಳುಕು ಹಾಕಲು ನಡೆಯುತ್ತಿರುವ ಪ್ರಯತ್ನಗಳು ಇವತ್ತಿನದೇನು ಅಲ್ಲ. ಕ್ರಿಕೆಟ್ ಎಂಬ ವಿಶ್ವವೇ ಇಷ್ಟ ಪಡುವ ಆಟವನ್ನು ಆಟವಾಗಿ ನೋಡದೆ ಒಂದು ಯುದ್ದವಾಗಿ ನೋಡುವ ಮನಸ್ಥಿತಿಯನ್ನು ನಾವಿಂದು ಬೆಳೆಸಿಕೊಂಡಿರುವುದು ನಿಜಕ್ಕೂ ಬೇಸರದ ವಿಷಯವೇ ಹೌದು.
ಈತರದ ಬೆಳವಗಿಯಿಂದಲೇ ನಿನ್ನೆ ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ವಿಶ್ವಕಪ್ ಪಂದ್ಯದಲ್ಲಿ ಆತಂಕ ಮೂಡಿಸುವ ಬೆಳವಣಿಗೆಯೊಂದು ನಡೆದಿದೆ. ಹೌದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ವೇಳೆ ಯುವಕನೊಬ್ಬ ಪಾಕ್ ಬೆಂಬಲಿಸಿದಕ್ಕೆ ಪೊಲೀಸರು ತರಾಟೆ ತೆಗೆದುಕೊಂಡಿದ್ದಾರೆ.
ಪಾಕಿಸ್ತಾನ್ ಪರ ಬೆಂಬಲಿಸಿ ಘೋಷಣೆ ಕೂಗಿದನ್ನ ಪೊಲೀಸರು ಆಕ್ಷೇಪಿಸಿದ್ದಾರೆ. ಇದಕ್ಕೆ ಯುವಕ, ನಾನು ಪಾಕಿಸ್ತಾನದಿಂದ ಬಂದಿದ್ದೇನೆ, ಪಾಕಿಸ್ತಾನ್ ಪರ ಬೆಂಬಲಿಸಿ ಘೋಷಣೆ ಕೂಗಿದ್ದೇನೆ, ಆಸ್ಟ್ರೇಲಿಯಾದವರು ಅವರ ತಂಡದ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಇದಲ್ಲದೇ ನಾವು ಭಾರತ್ ಮಾತಾಕಿ ಜೈ ಅಂತಾ ಕೂಗೋಕೆ ಆಗುತ್ತಾ ಎಂದು ಮರು ಪ್ರಶ್ನಿಸಿದ್ದಾನೆ.
ಇಷ್ಟೇ ಅಲ್ಲದೇ, ಆಸ್ಟ್ರೇಲಿಯಾ ಪರವಾಗಿ ಘೋಷಣೆ ಕೂಗಬಹುದು ಆದರೆ ಪಾಕಿಸ್ತಾನ್ ಪರ ಘೋಷಣೆ ಕೂಗಬಾರದಾ ಅಂತಾ ಪೊಲೀಸ್ ಅಧಿಕಾರಿಯನ್ನು ಪ್ರಶ್ನೆ ಮಾಡಿ ಒಂದು ಕ್ಷಣ ಪೊಲೀಸರನ್ನೇ ತಬ್ಬಿಬ್ಬು ಮಾಡಿದ್ದಾನೆ.
ಮುಂದುವರೆದು, ಪಾಕಿಸ್ತಾನ ಪರ ಘೋಷಣೆ ಕೂಗಬಾರದು ಅಂತ ಹೇಳುತ್ತಿದ್ದೀರಾ ನೀವು ಹೇಳುವುದನ್ನು ನಾನು ವೀಡಿಯೊ ಮಾಡಿಕೊಳ್ಳುತ್ತೇನೆ, ಈಗ ಹೇಳಿ, ಪಾಕ್ ಪರ ಘೋಷಣೆ ಕೂಗಬಾರದಾ ಎಂದು ಕೇಳಿದಾನೆ. ಪೊಲೀಸರು ನಮ್ಮ ಅಧಿಕಾರಿಗಳನ್ನು ಕೇಳಿ ಹೇಳುತ್ತೇವೆ ಎಂದು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದಕ್ಕೂ ಮುನ್ನ ಕ್ರೀಡಾಂಗಣಕ್ಕೆ ಪಾಕ್ ಬಾವುಟ ತರುವಂತಿಲ್ಲ ಎಂದು ಇದೇ ಯುವಕನಿಗೆ ಪೊಲೀಸರು ತಡೆದಿದ್ದು, ಆಸ್ಟ್ರೇಲಿಯಾ ಬಾವುಟ ಮಾತ್ರ ತರುವುದಕ್ಕೆ ಅವಕಾಶ ಇದೆಯ ಎಂದು ಪೊಲೀಸರಿಗೆ ಪ್ರಶ್ನಿಸಿದ್ದ ಎಂದು ತಿಳಿದುಬಂದಿದೆ.

ವಿಶ್ವಕಪ್ ಗೆಲ್ಲುವುದಕ್ಕೆ ವಿಶ್ವದ ಅಷ್ಟು ದೇಶಗಳು ಹೆಮ್ಮೆಯಿಂದ ಸೆಣೆಸಾಡುತ್ತಿದ್ದು, ಇತ್ತ ಕ್ರೀಡೆಯಲ್ಲು ಭೇದಭಾವ ಮಾಡುತ್ತಿರುವುದು ನಿಜಕ್ಕೂ ಭಾರತಕ್ಕೆ ಹೆಮ್ಮೆ ತರವ ವಿಷಯವಲ್ಲ. ಅದರಲ್ಲೂ ಕ್ರೀಡೆ ಜಾತಿ ಧರ್ಮ ಗಡಿಯನ್ನು ಮೀರಿ ಬೆಳೆದು ನಿಂತಿದೆ. ಇಲ್ಲಿಯ ಭಾರತೀಯ ಕ್ರಿಕೆಟ್ ಆಟಗಾರರಿಗೆ ವಿಶ್ವಾದ್ಯಾಂತ ಅಭಿಮಾನಿಗಳು, ಅನುಯಾಯಿಗಳು ಇದ್ದಾರೆ. ಯಾವ ತಂಡವನ್ನು ನೀವು ಬೆಂಬಲಿಸಬೇಕು, ಯಾವ ತಂಡವನ್ನು ನೀವು ಬೆಂಬಲಿಸಬಾರದು ಎಂಬ ತೀರ್ಮಾನವನ್ನು ಮಾಡುವುದು ಕ್ರೀಡಾಲೋಕಕ್ಕೆ ಮಾಡುವ ದೊಡ್ಡ ಸಂಚಕಾರ.
ಅವರವರ ದೇಶವನ್ನು, ಅವರಿಷ್ಟದ ಆಟಗಾರರನ್ನು ಬೆಂಬಲಿಸುವ ಹಾಗೂ ಕೂಗಿ ಪ್ರೇರೇಪಿಸುವ ಎಲ್ಲಾ ಹಕ್ಕುಗಳು ವಿಶ್ವದ ಎಲ್ಲಾ ಮನುಷ್ಯನಿಗೂ ಇದೆ ಎಂಬ ಸಣ್ಣ ಮಾಹಿತಿ ಪೊಲೀಸರು ಸಹ ತಿಳಿಯಬೇಕಿದೆ.
ಲೇಖನದಲ್ಲಿ ಹೇಳಬೇಕಾದ ಎಲ್ಲವನ್ನೂ ಆ ಯುವಕ ತುಂಬಾ ಸರಳವಾಗಿಯೇ ಹೇಳಿದ್ದಾನೆ. ಪಾಕ್-ಆಸಿಸ್ ಪಂದ್ಯದಲ್ಲಿ ಎರಡೂ ತಂಡಗಳ ಅಭಿಮಾನಿಗಳು ಇದ್ದೇ ಇರುತ್ತಾರೆ. ಆಸ್ಟ್ರೇಲಿಯಾ ತಂಡವನ್ನು ಬೆಂಬಲಿಸಿ ಕೂಗಿ ಕೇಕೆ ಹಾಕಿ ಪ್ರೇರೆಪಿಸುವುದು ಸರಿ ಆದರೆ ಪಾಕಿಸ್ತಾನ್ ತಂಡಕ್ಕೆ ಆತರ ಮಾಡಬಾರದು ಎಂಬುವ ಮನಸ್ಥಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಅಂದು ಯಾವ ತಂಡಗಳು ಆಡುತ್ತವೊ ಆ ತಂಡಗಳ ಅಭಿಮಾನಿಗಳು ಸೇರಿ ಕೂಗಿ ಪ್ರೊತ್ಸಾಗಿಸುವುದು ಅವರ ನೈತಿಕ ಹಕ್ಕು ಕೂಡ.
ವಿಶ್ವಕಪ್ ಪಂದ್ಯದಲ್ಲಿ ಏಷಿಯಾ ಖಂಡದಿಂದ ಇರುವುದೇ ಭಾರತ, ಶ್ರೀಲಂಕಾ, ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ ಅದರಲ್ಲಿ ಬಾಂಗ್ಲಾದೇಶ ಶ್ರೀಲಂಕಾ ಕ್ವಾಲಿಫೈ ಆಗುವುದು ಡೌಟು. ಇನ್ನುಳಿದ ಭಾರತ ಮತ್ತು ಪಾಕಿಸ್ತಾನ್ ಮಾತ್ರ ಎರಡೂ ತಂಡಗಳು ಫೈನಲ್ಗೆ ಬರಬೇಕು ಎಂಬ ಮನೋಭಾವ ಯಾರಿಗೂ ಇಲ್ಲವಾಗಿದೆ. ಇಂತಹ ಗಳಿಗೆ ಬರಲಿ. ಒಂದೇ ಕ್ರೀಡಾಂಗಣದಲ್ಲಿ ಇಂಡಿಯಾ ಮತ್ತು ಪಾಕಿಸ್ತಾನ್ ಅಭಿಮಾನಿಗಳು ಸೇರಿ ಆ ಪಂದ್ಯವನ್ನು ಹಬ್ಬದಂತೆ ಆಚರಿಸಲಿ. ಗೆದ್ದ ತಂಡದ ಅಭಿಮಾನಿಗಳು ಸೋತ ತಂಡದ ಅಭಿಮಾನಿಗಳನ್ನು ಸಂತೈಸಲಿ. ಸೋತವರಿಗೆ ಗೆದ್ದವರು ಹಬ್ಬದೂಟ ಹಾಕಿಸಿ ಮುಂದೆ ಸಾಗಲಿ…