
ರಾಜ್ಯ ಸರ್ಕಾರದ ಜೊತೆ ಕೈಜೋಡಿಸಿರುವ ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲ್ (ವಿಸಿ) ಹೂಡಿಕೆದಾರರಿಗೆ ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದನೆ
ಬೆಂಗಳೂರು, ನವೆಂಬರ್ 20: ಇಲ್ಲಿ ಮೂರು ದಿನಗಳಿಂದ ನಡೆದ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಕೊನೆಯ ದಿನ ನಡೆದ ಭವಿಷ್ಯ ರೂಪಿಸುವವರ ಸಮಾವೇಶದಲ್ಲಿ ರಾಜ್ಯ ಸರ್ಕಾರ ಮತ್ತು ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರಿಂದ (ವಿಸಿ) ಡೀಪ್ಟೆಕ್ ನವೋದ್ಯಮಗಳಿಗೆ ನೆರವಾಗಲು ₹ 400 ಕೋಟಿ ವಿತರಿಸಲಾಗಿದೆ.

ಡೀಪ್ಟೆಕ್ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನವೋದ್ಯಮಗಳಿಗೆ ಇದೇ ಮೊದಲ ಬಾರಿಗೆ ಈ ಗಮನಾರ್ಹ ಮೊತ್ತದ ನೆರವು ನೀಡಲಾಗಿದೆ.
ʼಭವಿಷ್ಯದ ಹತ್ತು ವರ್ಷಗಳು ವೈಜ್ಞಾನಿಕ ನಾವೀನ್ಯತೆ ಆಧರಿಸಿದ ತಂತ್ರಜ್ಞಾನಗಳಾದ ಕೃತಕ ಜಾಣ್ಮೆ, ರೋಬೊಟಿಕ್ಸ್, ಕ್ವಾಂಟಂ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನಗಳ ದಶಕವಾಗಿರಲಿದ್ದು, ಬೆಂಗಳೂರಿನ ಟೆಕ್ ಸಮ್ಮೇಳನವು ಅದಕ್ಕೆ ಮುನ್ನುಡಿ ಬರೆದಿದೆʼ ಎಂದು ಐಟಿ, ಬಿಟಿ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ಅಭಿಪ್ರಾಯಪಟ್ಟಿದ್ದಾರೆ.
ತುಮಕೂರು ರಸ್ತೆಯಲ್ಲಿನ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೂರು ದಿನಗಳಿಂದ ನಡೆದ ಬೆಂಗಳೂರು ಟೆಕ್ ಮೇಳದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.

ʼತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಹಾಗೂ ಮಾರುಕಟ್ಟೆಗಳನ್ನು ಸೃಷ್ಟಿಸುವಲ್ಲಿ ಡೀಪ್ಟೆಕ್ ಕ್ಷೇತ್ರಗಳಲ್ಲಿನ ಆವಿಷ್ಕಾರಗಳನ್ನು, ಮಾರುಕಟ್ಟೆ ಅವಕಾಶಗಳ ಮಹತ್ವ ಮನದಟ್ಟು ಮಾಡಿಕೊಡುವಲ್ಲಿ ತಂತ್ರಜ್ಞಾನ ಶೃಂಗಸಭೆಯು ಗಮನಾರ್ಹ ಯಶಸ್ಸು ಸಾಧಿಸಿದೆ. ಡೀಪ್ಟೆಕ್ನ ಪ್ರಯೋಜನವು ಬರೀ ಕರ್ನಾಟಕಕ್ಕೆ, ಭಾರತಕ್ಕೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದೊರೆಯಲಿದೆ. ಭವಿಷ್ಯ ರೂಪಿಸುವವರು, ವೆಂಚರ್ ಕ್ಯಾಪಿಟಲಿಸ್ಟ್ ಹೂಡಿಕೆದಾರರು ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿರುವುದು ಸ್ವಾಗತಾರ್ಹವಾಗಿದೆ. ನವೋದ್ಯಮಗಳಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಕರ್ನಾಟಕವು ಜಾಗತಿಕ ನವೋದ್ಯಮಗಳಲ್ಲಿ ಮುಂಚೂಣಿ ಐದನೆ ಸ್ಥಾನ ಗಳಿಸುವ ಮಹತ್ವಾಕಾಂಕ್ಷೆ ಸಾಕಾರಗೊಳ್ಳಲು ಭವಿಷ್ಯ ರೂಪಿಸುವವರ ಕೊಡುಗೆ ತುಂಬ ಮಹತ್ವದ್ದಾಗಿದೆʼ ಎಂದರು.
ಭವ್ಯ, ವಿಚಾರಪ್ರಚೋದಕ ಸಮಾರೋಪ:
ಶೃಂಗಸಭೆಯು ಭವಿಷ್ಯ ರೂಪಿಸುವವರ ಸಮಾವೇಶದೊಂದಿಗೆ (ಎಫ್ಎಂಸಿ) ಮುಕ್ತಾಯಗೊಂಡಿತು. ಸುಹಾನಿ ಶಾ ಅವರಿಂದ ಸಿಂಫೊನಿ ಆಫ್ ಸೌಂಡ್ ಆ್ಯಂಡ್ ಮೈಂಡ್ ಪ್ರದರ್ಶನ, ಗಗನಯಾತ್ರಿ ಶುಭಾಂಶು ಶುಕ್ಲಾ , ಲೇಖಕ ಅಂಕುರ್ ವಾರಿಕೂ ಅವರ ಸ್ಫೂರ್ತಿದಾಯಕ ಭಾಷಣಗಳು, ಕ್ವಿಕ್ ಕಾಮರ್ಸ್ ಜೆಪ್ಟೊ ಸಹ ಸ್ಥಾಪಕ ಕೈವಲ್ಯ ವೋಹ್ರಾ, ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಭಾರತದ ಮಹಿಳಾ ಕ್ರಿಕೆಟ್ ತಾರೆ ರಿಚಾ ಘೋಷ್ ಅವರ ಜೊತೆಗಿನ ಸಂವಾದ ಕಾರ್ಯಕ್ರಮವು ನವೋದ್ಯಮಗಳ ಸ್ಥಾಪಕರಿಗೆ, ಕ್ರೀಡಾಪಟುಗಳಾಗಿ ಬೆಳೆಯುವ ಕನಸು ಕಾಣುವವರಿಗೆ ಸ್ಫೂರ್ತಿದಾಯಕವಾಗಿತ್ತು.

ಗಗನಯಾನಿ ಶುಭಾಂಶು ಶುಕ್ಲಾ ಅವರು ಮಾತನಾಡಿ, ತಮ್ಮ ಗಗನಯಾನದ ವಿಶಿಷ್ಟ ಅನುಭವಗಳನ್ನು ಸಭಿಕರ ಜೊತೆ ಹಂಚಿಕೊಂಡರು. ಗಗನಯಾನ ಹಾಗೂ ಶೂನ್ಯ ಗುರುತ್ವಾಕರ್ಷಣೆ ಸಂದರ್ಭದಲ್ಲಿ ದೇಹದಲ್ಲಿ ಆಗುವ ಬದಲಾವಣೆ, ಎದುರಾಗುವ ದೈಹಿಕ ಹಾಗೂ ಮಾನಸಿಕ ಸವಾಲುಗಳನ್ನು ವಿವರಿಸಿದರು.
ʼಮುಂಬರುವ ವರ್ಷಗಳಲ್ಲಿ ಭಾರತವು ಬಾಹ್ಯಾಂತರಿಕ್ಷ ಕಾರ್ಯಕ್ರಮಗಳಲ್ಲಿ ಗಮನಾರ್ಹವಾಗಿ ತೊಡಗಿಕೊಳ್ಳಲಿದೆ. ಈ ಕ್ಷೇತ್ರದಲ್ಲಿನ ಭಾರತದ ಭವಿಷ್ಯ ಪ್ರಖರವಾಗಿದೆ. ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಗಗನಯಾನ ಕೈಗೊಳ್ಳಿದ್ದಾರೆ. ಈ ಕ್ಷೇತ್ರದಲ್ಲಿನ ನವೋದ್ಯಮಗಳಿಗೆ ಉಜ್ವಲ ಭವಿಷ್ಯ ಇದೆ. ದೇಶದ 300 ನವೋದ್ಯಮಗಳು ಈಗಾಗಲೇ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮುಂಬರುವ ವರ್ಷಗಳಲ್ಲಿ ಇಂತಹ ನವೋದ್ಯಮಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಲಿದೆʼ ಎಂದರು.
ಅಮೆರಿಕದ ನಾಸಾ -ಏಮ್ಸ್ ಎನ್ಎಸ್ಎಸ್ ನಡೆಸಿದ ಸ್ಪೇಸ್ ಸೆಟಲ್ಮೆಂಟ್ ಡಿಸೈನ್ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿರುವ ಕಲಬುರಗಿಯ ಎಸ್ಆರ್ಎನ್ ಮೆಹತಾ ಸಿಬಿಎಸ್ಇ ಶಾಲೆಯ ವಿದ್ಯಾರ್ಥಿಗಳು ಶುಭಾಂಶು ಶುಕ್ಲಾ ಅವರ ಜೊತೆ ಸಮೂಹ ಚಿತ್ರ ತೆಗೆದುಕೊಂಡರು.

ಲೇಖಕ ಅಂಕೂರ್ ವಾರಿಕು ಅವರು ಮಾತನಾಡಿ, ʼನವೋದ್ಯಮಗಳಿಗೆ ವಿಶ್ವಾಸಾರ್ಹತೆಯೇ ಮುಖ್ಯ . ಉದ್ಯೋಗಿಗಳು, ಗ್ರಾಹಕರು, ಸರ್ಕಾರದ ಜೊತೆ ವಿಶ್ವಾಸಾರ್ಹತೆಯಿಂದ ವರ್ತಿಸುವುದನ್ನು ರೂಢಿಸಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಟಾಟಾ ಬ್ರ್ಯಾಂಡ್ನ ಯಶಸ್ಸಿಗೆ ಅದರ ವಿಶ್ವಾಸಾರ್ಹತೆ ಮಂತ್ರವೇ ಮುಖ್ಯ ಕಾರಣ. ಉದ್ಯಮ ವಹಿವಾಟಿನಲ್ಲಿ ವಿಶ್ವಾಸಾರ್ಹತೆ ರೂಢಿಸಿಕೊಂಡರೆ ಹಣ – ಸಂಪತ್ತು ಯಶಸ್ಸು ತನ್ನಷ್ಟಕ್ಕೆ ತಾವೇ ಹಿಂಬಾಲಿಸಿಕೊಂಡು ಬರುತ್ತವೆʼ ಎಂದು ವಾರಿಕು ಅವರು ನವೋದ್ಯಮ ಸ್ಥಾಪಕರಿಗೆ ಕಿವಿಮಾತು ಹೇಳಿದರು.
ಜೆಫ್ಟೊ ಸಹ ಸ್ಥಾಪಕ ಕೈವಲ್ಲ ವೋಹ್ರಾ ಅವರ ಜೊತೆಗೆ ವಾಕೂರ್ ಅವರು ನಡೆಸಿಕೊಟ್ಟ ಸಂವಾದದಲ್ಲಿ ಸಂಪತ್ತು ಮತ್ತು ಮೌಲ್ಯ ಸೃಷ್ಟಿಸುವಲ್ಲಿ ಕ್ವಿಕ್ ಕಾಮರ್ಸ್ನ ಜೆಪ್ಟೊ ಉತ್ತಮ ನಿದರ್ಶನವಾಗಿರುವುದು ಚರ್ಚೆಯ ಕೇಂದ್ರಬಿಂದುವಾಗಿತ್ತು

ʼಭಾರತದ ಮಹಿಳಾ ಕ್ರಿಕೆಟ್ ತಂಡವು ಏಕದಿನ ವಿಶ್ವ ಕಪ್ ಗೆದ್ದ ನಂತರ ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ನತ್ತ ಆಕರ್ಷಿತರಾಗುತ್ತಿದ್ದಾರೆ. ಕ್ರೀಡಾಂಗಣಕ್ಕೆ ಮಹಿಳೆಯರು, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆʼ ಎಂದು ಕ್ರಿಕೆಟ್ ಆಟಗಾರ್ತಿ ರಿಚಾ ಘೋಷ್ ನುಡಿದರು. ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮಾತನಾಡಿ, ʼಕ್ರೀಡಾಂಗಣದಲ್ಲಿ ಒತ್ತಡವನ್ನು ಸಮಚಿತ್ತದಿಂದ ಎದುರಿಸಿದರೆ ಸೋಲನ್ನೂ ಗೆಲುವಾಗಿ ಬದಲಾಯಿಸಬಹುದು. ಕ್ರೀಡೆಯಲ್ಲಿನ ಸೋಲು ಹಲವಾರು ಪಾಠ ಕಲಿಸುತ್ತದೆ. ಯಾವುದೇ ಕ್ಷೇತ್ರದಲ್ಲಿರಲಿ ಸೋಲಿನಿಂದ ಧೃತಿಗೆಡಬಾರದುʼ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಿಯೊನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಎನ್.ಮಂಜುಳ, ನಿರ್ದೇಶಕ ರಾಹಲ್ ಸಂಕನೂರ್ ಇದ್ದರು.











