ಒಂದ್ಕಡೆ ಕೊರೋನಾ ಸಂಕಷ್ಟ, ಇನ್ನೊಂದ್ಕಡೆ ಬೆಲೆ ಏರಿಕೆ. ಇವೆರಡನ್ನೂ ಬ್ಯಾಲೆನ್ಸ್ ಮಾಡಿ ಸಿಎಂ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಈ ವೇಳೆ ಬೆಂಗಳೂರಿಗೆ ಸಿಎಂ ಹೆಚ್ಚು ಒತ್ತು ಕೊಟ್ಟಿರುವುದು ಈ ಬಾರಿಯ ಬಜೆಟ್ನಲ್ಲಿ ಎದ್ದುಕಾಣ್ತಿತ್ತು. ಬಿಬಿಎಂಪಿ ಚುನಾವಣೆಯ ತಯಾರಿ ಈ ಬಜೆಟ್ ಎಂಬುವುದು ಬಜೆಟ್ನ ಉದ್ದಗಲಕ್ಕೂ ಪ್ರತಿಧ್ವನಿಸುತ್ತಿತ್ತು.
ಪಾಲಿಕೆ ಚುನಾವಣೆ ಗಮನದಲ್ಲಿಟ್ಟುಕೊಂಡು ಬೆಂಗಳೂರಿಗೆ ಭರಪೂರ ಕೊಡುಗೆ ನೀಡಿದ ಬೊಮ್ಮಾಯಿ.
ಮೂರು ಮೂರು ಅಲೆಗಳಾಗಿ ಹಿಂಡಿ ಹಿಪ್ಪೆ ಮಾಡಿರುವ ಕೊರೋನಾ. ಮತ್ತೊಂದು ಕಡೆಯಿಂದ ಕುಸಿದಿರುವ ಸರ್ಕಾರದ ಆದಾಯ. ಈ ಎಲ್ಲಾ ಸವಾಲುಗಳ ನಡುವೆ ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಿದ್ದಾರೆ. ಸದ್ಯ ಬಿಬಿಎಂಪಿ ಚುನಾವಣೆ ಮಾತು ಕೇಳಿಬರ್ತಿರುವ ಕಾರಣದಿಂದ ಬೆಂಗಳೂರಿಗೆ ಬೊಮ್ಮಾಯಿ ತುಸು ಹೆಚ್ಚೇ ಲಕ್ಷ್ಯ ವಹಿಸಿರೋದು ಬಜೆಟ್ ಭಾಷಣದ ವೇಳೆ ಎದ್ದು ಕಾಣುತ್ತಿತ್ತು. ಮೆಟ್ರೋ, ರಿಂಗ್ ರಸ್ತೆ, ಮೇಲ್ಸೇತುವೆ, ಪಾದಚಾರಿ ಮಾರ್ಗ, ಕೆರೆ ಅಭಿವೃದ್ಧಿ, ಕುಡಿಯುವ ನೀರು ಹೀಗೆ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಬಸವರಾಜ ಬೊಮ್ಮಾಯಿ ಬರೊಬ್ಬರಿ 8,409 ಕೋಟಿ ರೂಪಾಯಿಯನ್ನ ಈ ಬಾರಿಯ ಬಜೆಟ್ನಲ್ಲಿ ಮೀಸಲಿರಿಸಿದ್ದಾರೆ.
ಬೆಂಗಳೂರಿಗೆ ಸಿಎಂ ಬೊಮ್ಮಾಯಿ ಕೊಟ್ಟಿದ್ದೇನು
-ಅಮೃತ್ ನಗರೋತ್ಥಾನ ಅಡಿ ಮೂಲ ಸೌಕರ್ಯಕ್ಕೆ 6,000 ಕೋಟಿ
- ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಏರ್ ಪೋರ್ಟ್ ಮೆಟ್ರೋ 2025ಗೆ ಪೂರ್ಣ
- 11,250 ಕೋಟಿ ರೂ ವೆಚ್ಚದ ಮೆಟ್ರೋ 3ನೇಹಂತ್ರಕಕ್ಕೆ ಕೇಂದ್ರದ ಅನುಮೋದನೆಗೆ ಕ್ರಮ
- ಹೆಬ್ಬಾಳದಿಂದ ಜೆಪಿ ನಗರದವರೆಗೆ 32 ಕಿಮೀ ಹೊರವರ್ತುಲ ರಸ್ತೆ
- ಹೊಸಹಳ್ಳಿಯಿಂದ ಕಡಬಗೆರೆವರೆಗೆ 13 ಕಿಮೀ ಹೊರವರ್ತುಲ ರಸ್ತೆ
- ಬನಶಂಕರಿ ಜಂಕ್ಷನ್ನಲ್ಲಿ ಪಾದಚಾರಿಗಳಿಗಾಗಿ ಸ್ಕೈವಾಕ್ಗೆ 45 ಕೋಟಿ
- ಆಧುನಿಕ ಸ್ಮಾರ್ಟ್ ಸಿಟಿಯಾಗಿ ಕೆಂಪೇಗೌಡ ಬಡಾವಣೆ ಅಭಿವೃದ್ಧಿ
- ಬನಶಂಕರಿ 6ನೇ ಹಂತ, ಅಂಜನಾಪುರ ನೀರು ಸಂಸ್ಕರಣಾ ಘಟಕಕ್ಕೆ 404 ಕೋಟಿ
- 2026ರ ವೇಳೆಗೆ 15,267 ಕೋಟಿ ವೆಚ್ಚದಲ್ಲಿ ಉಪನಗರ ರೈಲು ಯೋಜನೆ ಜಾರಿ
- 1500 ಕೋಟಿ ವೆಚ್ಚದಲ್ಲಿ 20 ತ್ಯಾಜ್ಯ ಘಟಕಗಳ ಪುನರುಜ್ಜೀವನ
- ತಿಪ್ಪಗೊಂಡನಹಳ್ಳಿ ಜಲಾಶಯ ಅಭಿವೃದ್ಧಿಗೆ 312 ಕೋಟಿ
- ರಾಜಾಕಾಲುವೆ ಅಭಿವೃದ್ಧಿಗೆ 1500 ಕೋಟಿ
- ಪೀಣ್ಯ ಕೈಗಾರಿಕೆ ಪಾರ್ಕ್ಗೆ ಪೂರಕವಾಗಿ ಸಣ್ಣ ಕೈಗಾರಿಕಾ ಪಾರ್ಕ್ ಸ್ಥಾಪನೆ
- ನಗರದ ನಾಲ್ಕು ಭಾಗಗಳಲ್ಲಿ 500 ಹಾಸಿಗೆ ಸಾಮರ್ಥ್ಯದ 4 ಆಸ್ಪತ್ರೆ
- 89 ಕೋಟಿ ವೆಚ್ಚದಲ್ಲಿ 20 ‘ಬೆಂಗಳೂರು ಪಬ್ಲಿಕ್ ಶಾಲೆ’ ಅಭಿವೃದ್ಧಿ
- ಬೆಂಗಳೂರು ಸಮಗ್ರ ಅಭಿವೃದ್ಧಿಗೆ 8,409 ಕೋಟಿ ರೂ
ಈ ಬಾರಿಯ ಬಜೆಟ್ನಲ್ಲಿ ಮೆಟ್ರೋಗೆ ನೀಡಿರುವ ಒತ್ತಿಗೆ BMRCL ಹರ್ಷ ವ್ಯಕ್ತಪಡಿಸಿದೆ. ಸೆಂಟ್ರಲ್ ಸಿಲ್ಕ್ ಬೋರ್ಡ್ ನಿಂದ ಏರ್ ಪೋರ್ಟ್ ಗೆ ಸಂಪರ್ಕ ಕಲ್ಪಿಸುವ 58.19 ಕಿ.ಮೀ ಉದ್ದದ ಮೆಟ್ರೋ ಕಾಮಗಾರಿಯನ್ನ 2025 ರೊಳಗೆ ಪೂರ್ಣಗೊಳಿಸುವುದಾಗಿ ಸಿಎಂ ಘೋಷಿಸಿದ್ದಾರೆ. ಹಾಗೇ ಮೆಟ್ರೋ 3ನೇ ಹಂತದ ಯೋಜನೆಗಾಗಿ 11,250 ಕೋಟಿ ವೆಚ್ಚ ನಿರೀಕ್ಷಿಸಲಾಗಿದ್ದು ಇದರ ಅನುಮೋದನೆಗಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಸಿಎಂ ಘೋಷಿಸಿದ್ದಾರೆ.
ಒಟ್ಟಿನಲ್ಲಿ ಸಿಎಂ ಬೊಮ್ಮಾಯಿ ತನ್ನ ಚೊಚ್ಚಲ ಬಜೆಟ್ ಮಂಡಿಸುವ ಮೂಲಕ ಪಾಲಿಕೆ ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮೂಲಕ ಬೆಂಗಳೂರಿಗರ ನಿರೀಕ್ಷೆಗೆ ತಕ್ಕ ಬಜೆಟ್ ಮಂಡಿಸಿದ್ದಾರೆ. ಸದ್ಯ ಬೆಳೆಯುತ್ತಿರುವ ಬೆಂಗಳೂರಿಗೆ ಹತ್ತು ಹಲವು ಹೊಸ ಯೋಜೆಯನ್ನು ಘೋಷಿಸಿದ್ದಾರೆ. ಆದರೆ ಬೊಮ್ಮಾಯಿ ಇದನ್ನ ಬಿಬಿಎಂಪಿ ಎಲೆಕ್ಷನ್ ಮನಸಿನಲ್ಲಿಟ್ಟುಕೊಂಡು ಮಾಡಿದ್ದಾದ್ದರೂ ಯೋಜನೆಗಳು ಯತಾಪ್ರಕಾರ ಜಾರಿಯಾದರೆ ಬೆಂಗಳೂರು ಮತ್ತಷ್ಟು ವಿಕಾಸಗೊಳ್ಳಲಿದೆ. ಇದು ಕೇವಲ ಪಾಲಿಕೆ ಚುನಾವಣೆಯ ಸಿದ್ಧತೆಗೆ ಮಾತ್ರ ಸೀಮಿತವಾಗದೆ ಇದ್ದರೆ ಸಾಕು ಎಂಬ ಆಶಯ ಜನರದ್ದು.