ಕೊರೋನಾ ನಿಭಾಯಿಸಲು ಸರ್ಕಾರ ಬಿದ್ದ ಪಾಡು ಅಕ್ಷರಶಃ ಪರದಾಟ. ಆರೋಗ್ಯ ಸೇವೆ ನೀಡಲು ಸಾಧ್ಯವಾದ ರೀತಿಯಲ್ಲೆಲ್ಲಾ ಪ್ರಯತ್ನಿಸುತ್ತಿದ್ದ ಸರ್ಕಾರ ಹಾಗೂ ಬಿಬಿಎಂಪಿಯ ಕೈ ಹಿಡಿದಿದ್ದು ಆಯುಷ್ ವೈದ್ಯರು. ಹೌದು, ಆಯುಷ್ ವೈದ್ಯರು ಕೋವಿಡ್ ಸಮಯದಲ್ಲಿ ನುರಿತ ವೈದ್ಯರಂತೆ ಆಖಾಡಕ್ಕಿಳಿದು ತಮ್ಮ ಜೀವವನ್ನೇ ಒತ್ತೆ ಇಟ್ಟು ಸೇವೆ ಸಲ್ಲಿಸಿದ್ದರು. ಆದರೀಗ ಕೋವಿಡ್ ಟೈಮ್ ನಲ್ಲಿ ಪಾಲಿಕೆ ಕೈ ಹಿಡಿದಿದ್ದ ಆಯುಷ್ ವೈದ್ಯರ ಕೈ ಬಿಡುತ್ತಾ ಬಿಬಿಎಂಪಿ ಎಂಬ ಪ್ರಶ್ನೆ ಉದ್ಭವವಾಗಿದೆ.
ಮೂರು ಅಲೆಗಳನ್ನು ನೋಡಿ ದಂಗಾದ ಜನರು ಮತ್ತೆಂದೂ ಇಂಥಾ ಬದುಕು ಬೇಡಪ್ಪಾ ಎಂದು ಬೇಡಿಕೊಳ್ಳದೆ ಇರದವರಿಲ್ಲ. ಅಷ್ಟು ಭೀಕರವಾಗಿತ್ತು ಕೊರೋನಾ ಕಾಲ. ಅಂಥಾ ಸಮಯದಲ್ಲಿ ಬೆಂಗಳೂರಿನಂಥಾ ಕೊರೋನಾ ಹಾಟ್ ಸ್ಪಾಟ್ನಲ್ಲಿ ಬಿಬಿಎಂಪಿ ಹೆಗಲಿಗೆ ಹೆಗಲು ಕೊಟ್ಟು ದುಡಿದ್ದು ಆಯುಷ್ ವೈದ್ಯರು. ನುರಿತ ವೈದ್ಯರಂತೆ ಜನರ ನಡುವೆ ಇದ್ದು ಜನರ ಸೇವೆಯನ್ನು ಆಯುಷ್ ವೈದ್ಯರು ಮಾಡಿದ್ದರು. ಇದೀಗ ಅವರ ಬದುಕೇ ಅತಂತ್ರವಾಗಿ ಬಿಡುವ ಹಂತದಲ್ಲಿದೆ. ಆಯುಷ್ ವೈದ್ಯರನ್ನು ಗುತ್ತಿಗೆ ಆಧಾರದ ಮೇರೆಗೆ ಸೇವೆಗೆ ತೆಗೆದುಕೊಳ್ಳಲಾಗಿತ್ತು. ಇದೀಗ ಅವರ ಗುತ್ತಿಗೆ ಅವಧಿ ಈ ತಿಂಗಳಿಗೆ ಕೊನೆಗೊಳ್ಳಲಿದ್ದು, ಸೇವೆಯಿಂದ ತೆಗೆದುಹಾಕುವ ಸಾಧ್ಯತೆ ಇದೆ. ಇದಕ್ಕೆ ಈಗ ಆಯುಷ್ ವೈದ್ಯರು ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದ್ದಾರೆ.
ಹಗಲಿರುಳು ಕೊರೋನಾ ವಿರುದ್ಧ ಹೋರಾಡಿದ ಗುತ್ತಿಗೆ ವೈದ್ಯರ ಸಮಯ ಈ ತಿಂಗಳು ಮುಕ್ತಾಯವಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಸುಮಾರು 1 ಸಾವಿರ BAMS ವೈದ್ಯರನ್ನ ಸೇವೆಗೆ ತೆಗೆದುಕೊಂಡಿತ್ತು ಪಾಲಿಕೆ. ಮೂರು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸೇವೆಗೆ ನೇಮಕ ಮಾಡಲಾಗಿತ್ತು. ಬಳಿಕ ಕೋವಿಡ್ 2ನೇ, 3ನೇ ಅಲೆ ಹಿನ್ನೆಲೆ ಅವರ ಸೇವೆಯನ್ನ ಮುಂದುವರಿಸಲಾಗಿತ್ತು. ಸದ್ಯ ರಾಜಧಾನಿಯಲ್ಲಿ ಕೋವಿಡ್ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಆಯುರ್ವೇದ ವೈದ್ಯರ ಸ್ಥಿತಿ ಅತಂತ್ರವಾಗಿದೆ. ಈ ಎಲ್ಲಾ ವೈದ್ಯರ ಸೇವೆಯನ್ನ ಮುಂದುವರಿಸದಿರಲು ಪಾಲಿಕೆ ನಿರ್ಧಾರಿಸಿದಂತಿದೆ. ಈ ಕುರಿತು ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಬಾಲ ಸುಂದರ್ ಮಾಹಿತಿ ನೀಡಿದ್ದು, ಈ ಸಂಬಂಧ ಮುಖ್ಯ ಆಯುಕ್ತ ಗೌರವ್ ಗುಪ್ತಾಗೆ ವರದಿ ನೀಡಲಾಗಿದೆ. ಸರ್ಕಾರದ ಸೂಚನೆ ಮೇರೆಗೆ, ಈ ವೈದ್ಯರನ್ನ ಸೇವೆಯಲ್ಲಿ ಉಳಿಸಿಕೊಳ್ಳ ಬೇಕಾ ಅಥವಾ ಬೇಡವಾ ಎಂಬ ನಿರ್ಧಾರಕ್ಕೆ ಪಾಲಿಕೆ ಬರಲಿದೆ ಎಂದು ಹೇಳಿದ್ದಾರೆ.

ಆಯುಷ್ ವೈದ್ಯರನ್ನು ಸೇವೆಯಿಂದ ತೆಗೆದು ಹಾಕದಂತೆ ಕರ್ನಾಟಕ ಆಯುಷ್ ವೈದ್ಯರ ಸಂಘ ಒತ್ತಾಯಿಸಿದೆ. ಕೊರೋನಾ ಸಮಯದಲ್ಲಿ MBBS ವೈದ್ಯರಂತೆ ಬದುಕು ಒತ್ತೆ ಇಟ್ಟು ಜನರ ಹಾಗೂ ಸರ್ಕಾರದ ಸೇವೆ ಮಾಡಿದ್ದೇವೆ. ಈಗ ಕೆಲಸ ಮುಗಿದ ಬಳಿಕ ಏಕಾಏಕಿ ನಮ್ಮನ್ನು ತೆಗೆದು ಹಾಕಿದರೆ ಹೇಗೆ.!? ನಮ್ಮ ಬದುಕಿಗೆ ಭದ್ರತೆ ಒದಗಿಸಿ ಬೇಕಿದ್ದರೆ ತೆಗೆದು ಹಾಕಿ. ನಮ್ಮ ಕ್ಲಿನಿಕ್, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆಗಳು ಹೀಗೆ ನೂರಾರು ಅವಕಾಶಗಳಿವೆ. ಇಲ್ಲಿ ಎಲ್ಲಾದರು ಆಯುಷ್ ವೈದ್ಯರಿಗೆ ಸ್ಥಳನಿಯೋಜನೆ ಮಾಡಿ ಬೇಕಿದ್ದರೆ ಕಿತ್ತು ಹಾಕಿ. ಕೊರೋನಾ ಸಮಯದಲ್ಲಿ ಬೆಂಗಳೂರಿನಲ್ಲಿ ಆಯುಷ್ ವೈದ್ಯರು ಎಲ್ಲರಂತೆ ಬದುಕನ್ನು ಒತ್ತೆ ಇಟ್ಟು ಕೆಲಸ ಮಾಡಿದ್ದಾರೆ. ಅದನ್ನಾದರೂ ಬಿಬಿಎಂಪಿ ಹಾಗೂ ಸರ್ಕಾರ ಗಮನದಲ್ಲಿಟ್ಟುಕೊಂಡು ಪರ್ಯಾಯ ಕಲ್ಪಿಸಬೇಕು ಎಂದು ಕರ್ನಾಟಕ ಆಯುಷ್ ವೈದ್ಯರ ಸಂಘದ ಕಾರ್ಯದರ್ಶಿ ಈರಣ್ಣ ಆಕ್ರೋಶ ಹೊರ ಹಾಕಿದ್ದಾರೆ.
ಹೀಗೆ ಇದೀಗ ಆಯುಷ್ ವೈದ್ಯರ ಬದುಕು ಅತಂತ್ರವಾಗಿದೆ. ಮುಂದೆ ನಾಲ್ಕನೇ ಅಲೆ ಬರಬಹುದು ಎಂಬ ಅಭಿಪ್ರಾಯ ಹಿರಿಯ ತಜ್ಞ ವೈದ್ಯರ ವಲಯದಲ್ಲಿ ಇದ್ದರೂ ಕೂಡ ಅಷ್ಟೊಂದು ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಯುಷ್ ವೈದ್ಯರ ಸೇವೆಯನ್ನು ಕೊನೆಗೊಳಿಸಲು ಪಾಲಿಕೆ ತೀರ್ಮಾನಿಸಿದಂತೆ. ಆದರೆ ಕೆಲಸ ಮುಗಿದ ಬಳಿಕ ಸೇವೆಯಿಂದ ತೆಗೆದು ಹಾಕುವುದು ನೈತಿಕ ನೆಲೆಗಟ್ಟಿನಲ್ಲಿ ಸರಿಯೇ ಎಂಬ ಪ್ರಶ್ನೆ ಸದ್ಯದ್ದು.






