ಚಿತ್ರದುರ್ಗ: ಕುಡಿದ ಮತ್ತಿನಲ್ಲಿ ಆಟೋ ಚಾಲಕನೊಬ್ಬ ಪೊಲೀಸ್ ತಪಾಸಣೆ ವೇಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆಯ ಮಹಾತ್ಮ ಗಾಂಧಿ ವೃತ್ತದ ಬಳಿ ನಡೆದಿದೆ. ಮಾಳಪ್ಪನಹಟ್ಟಿಯ ತಿಪ್ಪೇಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ ಆಟೋ ಚಾಲಕ ಎಂದು ಗುರುತಿಸಲಾಗಿದೆ.

ಶನಿವಾರ ರಾತ್ರಿ ಮಹಾತ್ಮ ಗಾಂಧಿ ವೃತ್ತದ ಬಳಿ ಪೊಲೀಸರು ಡ್ರಂಕ್&ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಬಂದ ತಿಪ್ಪೇಸ್ವಾಮಿಗೂ ತಪಾಸಣೆ ಮಾಡಲು ಹೇಳಿದ್ದಾರೆ. ಪೊಲೀಸರ ತಪಾಸಣೆಗೆ ನಿರಾಕರಿಸಿದ ಆಟೋ ಚಾಲಕ ವಾಗ್ವಾದಕ್ಕಿಳಿದ್ದಿದ್ದಾನೆ. ಈ ವೇಳೆ ಪೊಲೀಸರು 500 ರೂಪಾಯಿ ದಂಡ ಕಟ್ಟುವಂತೆ ಹೇಳಿದ್ದಾರೆ ಎನ್ನಲಾಗಿದೆ.
ಇದರಿಂದ ಸಿಟ್ಟಿಗೆದ್ದ ತಿಪ್ಪೇಸ್ವಾಮಿ ಏಕಾಏಕಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಸ್ಥಳೀಯರು ಆತನನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಆಟೋ ಚಾಲಕ ತಿಪ್ಪೇಸ್ವಾಮಿ ದೇಹದ ಶೇ.50ರಷ್ಟು ಭಾಗ ಸುಟ್ಟು ಹೋಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ತಿಪ್ಪೇಸ್ವಾಮಿ ಕುಡಿದ ಮತ್ತಿನಲ್ಲಿ ಆಟೋ ಚಲಾಯಿಸುತ್ತಿದ್ದ ಏನ್ನುವ ಆರೋಪ ಒಂದೆಡೆಯಾದರೆ, ಪೊಲೀಸರು ಆತನ ಕಾಲರ್ ಹಿಡಿದು ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಮತ್ತೊಂದೆಡೆ ಕೇಳಿಬರುತ್ತಿದೆ.









