ಮುಡಾ ಸೈಟ್ ಹಗರಣದ ಬಗ್ಗೆ ಲೋಕಾಯುಕ್ತರು ವಿಚಾರಣೆಗೆ ನೋಟಿಸ್ ಕೊಟ್ಟಿದ್ದು, ನಾಳೆ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರೆ. ಶಿಗ್ಗಾವಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟಿದ್ದಾರೆ, ವಿಚಾರಣೆಗೆ ಹಾಜರಾಗ್ತೇನೆ ಎಂದಿದ್ದಾರೆ.
ಲೋಕಾಯುಕ್ತ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳುವ ಮುನ್ನ ಹುಬ್ಬಳ್ಳಿಯಲ್ಲಿ ನಿನ್ನೆ ರಾತ್ರಿ ಕಾನೂನು ಸಚಿವ ಹೆಚ್.ಕೆ ಪಾಟೀಲ್ ಜೊತೆಗೆ ಸಭೆ ನಡೆಸಿದ್ದಾರೆ. ಸೋಮವಾರ ರಾತ್ರಿ ಹುಬ್ಬಳ್ಳಿಯ ಖಾಸಗಿ ಹೋಟೆಲ್ನಲ್ಲಿ ಸಿಎಂ ಸಿದ್ದರಾಮಯ್ಯ ಕಾನೂನು ಸಚಿವ ಹೆಚ್.ಕೆ ಪಾಟೀಲ್ ನೋಟಿಸ್ ಬಗ್ಗೆ ಚರ್ಚೆ ನಡೆಸಿ ವಿಚಾರಣೆಗೆ ಹಾಜರಾಗುವುದು ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ.
ಹಾವೇರಿಯ ಶಿಗ್ಗಾವಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನೇನು ತಪ್ಪು ಮಾಡಿಲ್ಲ. ನನ್ನ ಕುಟುಂಬವರೂ ಯಾವುದೇ ತಪ್ಪು ಮಾಡಿಲ್ಲ ಎಂದಿದ್ದಾರೆ. 14 ಸೈಟ್ಗಾಗಿ ರಾಜಕಾರಣ ಮಾಡಬೇಕಾ..? ಎಂದು ಪ್ರಶ್ನೆ ಮಾಡಿರುವ ಸಿಎಂ ಸಿದ್ದರಾಮಯ್ಯ, ವಿನಾಕಾರಣ ನನ್ನ ತೇಜೋವಧೆ ಮಾಡಲಾಗ್ತಿದೆ. ಬಿಜೆಪಿಯಿಂದ ಹಸಿ ಸುಳ್ಳು ಹೇಳುವ ಕೆಲಸ ನಡೀತಿದೆ ಎಂದಿದ್ದಾರೆ. ಸುಳ್ಳು ಹೇಳೋಕೆ ಅಂತಾ ಗೊಬೆಲ್ಸ್ನನ್ನ ಹಿಟ್ಲರ್ ಮಂತ್ರಿ ಮಾಡಿಕೊಂಡಿದ್ದ. ಅದೇ ರೀತಿ ಬಿಜೆಪಿಯಲ್ಲಿ ಸುಳ್ಳು ಹೇಳೋಕೆ ಕೆಲವರನ್ನ ನೇಮಕ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಕಾನೂನು ಸಚಿವ ಎಚ್.ಕೆ ಪಾಟೀಲ ಪ್ರತಿಕ್ರಿಯೆ ನೀಡಿ, ನಾಳೆ ವಿಚಾರಣೆಗೆ ಹಾಜರಾಗುವುದಾಗಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ, ವಿಚಾರಣೆಗೆ ಹೋಗ್ತಾರೆ ಎಂದಿದ್ದಾರೆ. ಇನ್ನು ಇದೇ ವಿಚಾರವಾಗಿ ಸತೀಶ್ ಜಾರಕಿಹೊಳಿ ಮಾತನಾಡಿ, ನೋಟಿಸ್ ಕೊಟ್ಟ ಮೇಲೆ ವಿಚಾರಣೆಗೆ ಹೋಗಲೇಬೇಕು. ಅದರಲ್ಲಿ ಬೇರೆ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಲೋಕಾಯುಕ್ತ ಎಲ್ಲರಗಿಂತ ದೊಡ್ಡದು. ನೋಟಿಸ್ ಕೊಟ್ಟ ಬಳಿಕ ಯಾರೇ ಆಗಲಿ ಹೋಗಲೇಬೇಕು ಎಂದಿದ್ದಾರೆ.
ಮೈಸೂರಿಗೆ ನಾಳೆ ಸಿಎಂ ಸಿದ್ದರಾಮಯ್ಯ ಆಗಮನ ಹಿನ್ನೆಲೆ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ನೇತೃತ್ವದಲ್ಲಿ ಡಿಸಿಪಿ ಮುತ್ತುರಾಜ್ ಹಾಗು ಜಾಹ್ನವಿ ಸೇರಿ ಎಸಿಪಿಗಳಿಂದ ಪರಿಶೀಲನೆ ಕಾರ್ಯ ಮಾಡಲಾಗಿದೆ. ದೇವರಾಜ ಪೊಲೀಸ್ ಠಾಣೆ ಅನತಿ ದೂರದಲ್ಲಿರುವ ಮೈಸೂರಿನ ಶೇಷಾದ್ರಿ ಅಯ್ಯರ್ ರಸ್ತೆಯ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿದ್ದಾರೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ಬಂದೋಬಸ್ತ್ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.