ಬೆಂಗಳೂರು : ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲಾ ಮೇಲೆ ಗುಂಡು ಹಾರಿಸಲಾಗಿದ್ದು, ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಬುಧವಾರ ಜಮ್ಮುವಿನ ಗ್ರೇಟರ್ ಕೈಲಾಶ್ ಪ್ರದೇಶದಲ್ಲಿ ನಡೆದ ವಕೀಲರ ವಿವಾಹ ಸಮಾರಂಭದಲ್ಲಿ ಅಬ್ದುಲ್ಲಾ ಭಾಗವಹಿಸಿದ್ದರು.

ಈ ವೇಳೆ ನಡೆದ ದಾಳಿಯನ್ನು ಇಂದು ಲೋಕಸಭೆಯಲ್ಲಿ ಖಂಡಿಸಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭಾ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಇಂದು, ನೀವು ಡಾ. ಫಾರೂಕ್ ಅಬ್ದುಲ್ಲಾ ಸಾಹಿಬ್ ಮೇಲೆ ಜಮ್ಮು ಕಾಶ್ಮೀರದಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೆ ಅವರ ಭದ್ರತೆಯ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ. ಅಲ್ಲಿ ಭಯದ ವಾತಾವರಣ ಏಕೆ ಸೃಷ್ಟಿಯಾಗಿದೆ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಒಂದು ಕಾಲದಲ್ಲಿ ರಾಜ್ಯದ ಸ್ಥಾನಮಾನವನ್ನು ಹೊಂದಿದ್ದ ಜಮ್ಮು ಮತ್ತು ಕಾಶ್ಮೀರ ಭದ್ರತೆಯು ಸಂಪೂರ್ಣವಾಗಿ ಈಗ ಕೇಂದ್ರ ಸರ್ಕಾರ ಮತ್ತು ಅಮಿತ್ ಶಾ ನಿಯಂತ್ರಣದಲ್ಲಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕೇಂದ್ರದ ಕೈಯಲ್ಲಿರುವಾಗ, ಹಿರಿಯ ನಾಯಕರ ಜೀವಕ್ಕೆ ಅಪಾಯವಾಗುವಷ್ಟು ಅಲ್ಲಿನ ಪರಿಸ್ಥಿತಿಗಳು ಏಕೆ ಹದಗೆಡುತ್ತಿವೆ? ಎಂದು ಗುಡುಗಿದ್ದಾರೆ.
ಇದನ್ನೂ ಓದಿ : ಯುದ್ದ ನಿಲ್ಲಿಸುತ್ತೇವೆ ಎಂದ ಡೊನಾಲ್ಡ್ ಟ್ರಂಪ್: ಇದರ ಹಿಂದಿನ ಮರ್ಮವೇನು ?
ಒಂದು ನಿಮಿಷವಾದರೂ ವಿಳಂಬವಾಗಿದ್ದರೆ, ಫಾರೂಕ್ ಅಬ್ದುಲ್ಲಾ ಅವರ ಜೀವ ಕಳೆದುಕೊಳ್ಳಬಹುದಿತ್ತು. ಅವರನ್ನು ಉಳಿಸಿದವರು ಅವರೊಂದಿಗೆ ಇದ್ದ ಸ್ಥಳೀಯ ಭದ್ರತಾ ಸಿಬ್ಬಂದಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ನೇರವಾಗಿ ಕೇಳುತ್ತಿದ್ದೇನೆ, ಈ ಸರ್ಕಾರ ನಿಜವಾಗಿಯೂ ಫಾರೂಕ್ ಅಬ್ದುಲ್ಲಾ ಅವರಿಗೆ ಭದ್ರತೆಯನ್ನು ನೀಡಲು ಬಯಸುತ್ತದೆಯೇ? ಹಾಗಿದ್ದಲ್ಲಿ, ಪೂರ್ಣ ಭದ್ರತೆಯನ್ನು ಏಕೆ ಒದಗಿಸಲಿಲ್ಲ? ಸತ್ಯವೆಂದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯ ಸ್ಥಾನಮಾನವನ್ನು ಪುನಃಸ್ಥಾಪಿಸಿ ಪ್ರಜಾಪ್ರಭುತ್ವ ಸರ್ಕಾರ ರಚನೆಯಾಗುವವರೆಗೆ, ಅಲ್ಲಿನ ಜನರು ಸುರಕ್ಷಿತವಾಗಿರುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಶ್ಮೀರದ ಇಂದಿನ ಪರಿಸ್ಥಿತಿಯು ಪೂರ್ತಿಯಾಗಿ ಕೇಂದ್ರದ ನಿಯಂತ್ರಣದಲ್ಲಿ,ದೆ. ಕಾಶ್ಮೀರ ಜನರು ಮತ್ತು ನಾಯಕರು ಇಬ್ಬರೂ ಅಸುರಕ್ಷಿತರಾಗಿದ್ದಾರೆ ಎಂಬುವುದು ಈ ಮೂಲಕ ಸ್ಪಷ್ಟವಾಗುತ್ತದೆ. ಜಾತ್ಯತೀತತೆ, ಸಮಾಜವಾದ ಮತ್ತು ದೇಶದ ಏಕತೆಗಾಗಿ ನಿಲ್ಲುವವರನ್ನು ಭಯ ಮತ್ತು ಹಿಂಸೆಯ ವಾತಾವರಣಕ್ಕೆ ತಳ್ಳಲಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಫಾರೂಕ್ ಅಬ್ದುಲ್ಲಾ ಮೇಲಿನ ಹಲ್ಲೆಯನ್ನು ಖಂಡಿಸಿದ್ದಾರೆ.






