ಬಾಂಗ್ಲಾದೇಶದಲ್ಲಿ(Bangladesh) ಸಾರ್ವತ್ರಿಕ ಚುನಾವಣೆಗೆ ಇಂದು ಮತದಾನ ಆರಂಭವಾಗಿದೆ. ಆದರೆ ಚುನಾವಣೆಗೆ ಕೇವಲ ಒಂದು ದಿನ ಬಾಕಿ ಇರುವಾಗ ಅಂದರೆ ನಿನ್ನೆ ಮತ್ತೊಬ್ಬ ಹಿಂದೂ ವ್ಯಕ್ತಿಯ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದ ಮೌಲ್ವಿಬಜಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ರತನ್ ಸಾಹುಕರ್ ಹತ್ಯೆಯಾದ ದುರ್ದೈವಿ ಎಂದು ಗುರುತಿಸಲಾಗಿದೆ.

ರತನ್ ಸಾಹುಕರ್ ಚಹಾ ತೋಟದಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ಆತನ ಶವ ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ದೇಹದ ಮೇಲೆ ಗಾಯಗಳ ಗುರುತುಗಳಿದ್ದು, ಇದೊಂದು ಪೂರ್ವನಿಯೋಜಿತ ಕೊಲೆ ಇರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.

ಸದ್ಯ ಮೌಲ್ವಿಬಜಾರ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೊಲೆ ಚುನಾವಣೆಗೆ ಸಂಬಂಧಿಸಿದ್ದೇ ಅಥವಾ ಬೇರೆ ಕಾರಣವಿದೆಯೇ ಎನ್ನುವುದನ್ನು ತನಿಖೆ ನಡೆಸಲಾಗುತ್ತಿದೆ. ಆದರೆ ಈ ಪ್ರಕರಣದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಸದ್ಯ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಸುರಕ್ಷತೆ ಇಲ್ಲ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದ್ದು, ಇತ್ತೀಚಿಗಷ್ಟೇ ಮೈಮೆನ್ಸಿಂಗ್ ಜಿಲ್ಲೆಯಲ್ಲಿ ಸುಶೇನ್ ಚಂದ್ರ ಸರ್ಕಾರ್ (62) ಎಂಬ ಹಿಂದೂ ಉದ್ಯಮಿಯನ್ನು ಹತ್ಯೆ ಮಾಡಲಾಗಿತ್ತು. ಈ ಘಟನೆಗಳ ಹಿನ್ನೆಲೆ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆ ಬಗ್ಗೆ ಮತ್ತೆ ಆತಂಕ ವ್ಯಕ್ತವಾಗಿದೆ.






