ಬಹುಭಾಷಾ ನಟಿ ಖುಷ್ಬೂ ಸದ್ಯ ಸಿನಿಮಾಗಳಿಗಿಂತ ರಾಜಕೀಯ ಕಾರಣಗಳಿಂದಲೇ ಹೆಚ್ಚು ಸುದ್ದಿಯಲ್ಲಿ ಇರ್ತಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಕೂಡ ಆಗಿರುವ ಖುಷ್ಬೂ ಮಹಿಳಾ ಸಬಲೀಕರಣದ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದಾರೆ. ಆದರೆ ಇದೇ ಮೊದಲಬಾರಿಗೆ ನಟಿ ಖುಷ್ಬೂ ಬಾಲ್ಯದ ಜೀವನದಲ್ಲಿ ತಮಗಾದ ಕಹಿ ಅನುಭವೊಂದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಸಂದರ್ಶನವೊಂದರಲ್ಲಿ ಬಾಲ್ಯದಲ್ಲಿ ತಮ್ಮ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ನಟಿ ಖುಷ್ಬೂ ಮನಬಿಚ್ಚಿ ಮಾತನಾಡಿದ್ದಾರೆ. ಖುಷ್ಬೂ ತಂದೆ ಯಾವಾಗಲೂ ತನ್ನ ಮಕ್ಕಳು ಹಾಗೂ ಪತ್ನಿಗೆ ಮನಬಂದಂತೆ ಥಳಿಸುತ್ತಿದ್ದರಂತೆ. ಮಕ್ಕಳು ಹಾಗೂ ಪತ್ನಿಯನ್ನು ತಾನು ಹೇಗೂ ಬೇಕಾದರೂ ನಡೆಸಿಕೊಳ್ಳಬಹುದು ಎಂಬ ಭಾವನೆ ಅವರ ತಂದೆಯದ್ದಾಗಿತ್ತಂತೆ. ಇದೇ ಬುದ್ಧಿ ಮುಂದುವರಿದು ಖುಷ್ಬೂಗೆ ಕೇವಲ 8 ವರ್ಷ ಪ್ರಾಯವಿದ್ದಾಗ ಇವರ ಸ್ವಂತ ತಂದೆಯೇ ಇವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರಂತೆ..!
ಮನೆಯಲ್ಲಿ ಈ ಬಗ್ಗೆ ಹೇಳಿಕೊಳ್ಳಬೇಕೆಂದು ಖುಷ್ಬೂ ಸಾಕಷ್ಟು ಬಾರಿ ಪ್ರಯತ್ನಿಸಿದರಾದರೂ ಅವರಿಗೆ ಅದು ಸಾಧ್ಯವಾಗಿರಲಿಲ್ಲ. ಒಂದು ಕುಟುಂಬದ ಮರ್ಯಾದೆ ಪ್ರಶ್ನೆ, ಮತ್ತೊಂದು ಕಡೆ ತಾಯಿ ಇದನ್ನೆಲ್ಲ ನಂಬುವರೇ ಎಂಬ ಪ್ರಶ್ನೆ ಇದೆಲ್ಲವೂ ಖುಷ್ಬೂಗೆ ತಂದೆಯಿಂದ ಆಗುತ್ತಿದ್ದ ಕೆಟ್ಟ ಅನುಭವವನ್ನು ಹೇಳಿಕೊಳ್ಳಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಆದರೆ 15 ವರ್ಷ ಪ್ರಾಯವಿದ್ದಾಗ ಗಟ್ಟಿಗಿತ್ತಿಯಾಗಿ ಬದಲಾದ ಖುಷ್ಬೂ ತಂದೆಯ ವಿರುದ್ಧ ಮಾತನಾಡುವ ಧೈರ್ಯ ಮಾಡಿದ್ದಾಗಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಮನೆಯಲ್ಲಿಯೇ ಸಂಬಂಧಿಗಳಿಂದ ಕಿರುಕುಳ ಅನುಭವಿಸುತ್ತಿರುವ ಅನೇಕ ಹೆಣ್ಣು ಮಕ್ಕಳಿಗೆ ಧೈರ್ಯದ ಪಾಠ ಮಾಡಿದ್ದಾರೆ.