ಬ್ರಹ್ಮಗಂಟು ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಗೀತಾ ಭಾರತಿ ಭಟ್ ಅವರು ಡಾರ್ಲಿಂಗ್ ಕೃಷ್ಣ ನಿರ್ದೇಶನದ ಲವ್ ಮಾಕ್ಟೇಲ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಪಾತ್ರ ಕೆಲ ಕ್ಷಣಗಳಷ್ಟೇ ಸ್ಕ್ರೀನ್ ಮೇಲೆ ಕಾಣಿಸಿಕೊಂಡಿರೂ ಸಹ ಪ್ರೇಕ್ಷಕರ ಗಮನ ಸೆಳೆದಿತ್ತು. ಜೊತೆಗೆ ಗೀತಾ ಭಾರತಿ ಭಟ್ ನಟಿಸಿದ್ದ ರೋಜ್ ಪಾತ್ರದ ಬಗ್ಗೆ ಚಿತ್ರದ ನಾಯಕ ಹೇಳುವ ಡೈಲಾಗ್ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.

ಇದೀಗ ಅದೇ ಪಾತ್ರದ ಅದೇ ಡೈಲಾಗ್ ಬಗ್ಗೆ ನಟಿ ಗೀತಾ ಭಾರತಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಈ ಚಿತ್ರದಲ್ಲಿ ಬಳಸಿದ ಡೈಲಾಗ್‌ನಿಂದ ನೇರ ನೇರವಾಗಿ ನನಗೆ ಬಾಡಿ ಶೇಮಿಂಗ್ ಆಗಿದೆ ಎನ್ನುವ ನೋವನ್ನು ನಟಿ ಗೀತಾ ಭಾರತಿ ತೋಡಿಕೊಂಡಿದ್ದಾರೆ.

ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ʼಲವ್ ಮಾಕ್ಟೇಲ್ ಎನ್ನುವ ಸಿನಿಮಾ ಮಾಡಿದೆ. ಸಿನಿಮಾ ಮಾಡಿದಾಗ ನನಗೆ ಅನುಭವ ಆಗಿದೆ. ಮುಖಕ್ಕೆ ಹೊಡೆದಾಗೆ ಬಾಡಿ ಶೇಮಿಂಗ್ ಅನಿಸಿತು. ಇವಳು ಹೂ ತರ ಇದ್ದಳು, ಹೂ ಕೋಸು ತರ ಆದಳು ಅಂತಾ ಡೈಲಾಗ್ ಇದೆ. ಆ ಪಾತ್ರ ಇವತ್ತಿಗೂ ಕಾಡುತ್ತದೆ. ನಾನು ಯಾಕೆ ಆ ಪಾತ್ರ ಮಾಡಬೇಕಾಗಿತ್ತು ಅಂತಾ ಈಗಲೂ ಕಾಡುತ್ತದೆ. ಬಾಡಿ ಶೇಮಿಂಗ್ ಮಾಡಲು ನಾನೇ ಅನುಮತಿ ಕೊಟ್ಟೆ ಅನಿಸುತ್ತದೆ. ಈ ಬಾಡಿ ಶೇಮಿಂಗ್ ನನ್ನ ಜೀವನದಲ್ಲಿ ಬಂದ ಅತಿಥಿ ತರ ಆಗಿದೆ. ನಿಜ ಹೇಳಬೇಕು ಅದರೆ ಈಗಲೂ ಆ ಅತಿಥಿ ನನ್ನ ಜೊತೆ ಇದೆʼ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.







