ಬೆಂಗಳೂರು: ಇತ್ತೀಚೆಗೆ ಶಿಡ್ಲಘಟ್ಟದ(Sidlaghatta) ನೆಹರೂ ಮೈದಾನದಲ್ಲಿ ನಡೆದ ‘ಕಲ್ಟ್’(Cult )ಸಿನಿಮಾದ ಈವೆಂಟ್ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಕಾರ್ಯಕ್ರಮದ ಪ್ರಚಾರಕ್ಕಾಗಿ ಕೋಟೆ ವೃತ್ತದ ಸಮೀಪ ದಾರಿಗೆ ಅಡ್ಡಲಾಗಿ ಅಕ್ರಮವಾಗಿ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿತ್ತು. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದ್ದು, ವಾಹನ ಸವಾರರು ಮತ್ತು ಪಾದಚಾರಿಗಳು ಕಿರಿಕಿರಿ ಅನುಭವಿಸಿದ್ದಾರೆ.

ಈ ಕುರಿತು ನಗರಸಭೆಗೆ ಸಾರ್ವಜನಿಕರಿಂದ ದೂರುಗಳು ಸಲ್ಲಿಕೆಯಾಗಿದ್ದು, ದೂರುಗಳ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ. ಆದರೆ ಈ ಕ್ರಮದ ನಂತರ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಕೆಪಿಸಿಸಿ ಸಂಯೋಜಕ ರಾಜೀವ್ ಗೌಡ(Rajeev Gowda) ಅವರು ಪೌರಾಯುಕ್ತೆ ಅಮೃತಾ ಗೌಡ(Amrutha Gowda) ಅವರಿಗೆ ದೂರವಾಣಿ ಕರೆ ಮಾಡಿ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಘಟನೆ ರಾಜಕೀಯ ಹಾಗೂ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ‘ಕಲ್ಟ್’ ಸಿನಿಮಾದ ನಾಯಕ ನಟ ಝೈದ್ ಖಾನ್(Zaid Khan) ಈ ವಿವಾದದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಈ ಘಟನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ʼ ಈ ಘಟನೆ ಬಗ್ಗೆ ನನ್ನ ಅಭಿಮಾನಿಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಸಾರ್ವಜನಿಕರಿಗೆ ತೊಂದರೆ ಉಂಟಾಗಿರುವುದು ಬೇಸರ ತಂದಿದೆ. ಇಂತಹ ಘಟನೆ ನಡೆಯಬಾರದಿತ್ತುʼ ಎಂದು ಹೇಳಿದ್ದಾರೆ. ಅಲ್ಲದೇ ಸಿನಿಮಾ ಪ್ರಚಾರದ ವೇಳೆ ಕಾನೂನು ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Mangaluru: ʼವಾಟ್ಸಾಪ್ ಯೂನಿವರ್ಸಿಟಿʼ ಸುಳ್ಳು ಸುದ್ದಿಗೆ ಹಿರಿಯರೇ ಬಲಿ: ಮಂಗಳೂರಿನಲ್ಲಿ ಆಗಿದ್ದೇನು..?












