ಬೆಂಗಳೂರಿನ ಕೆ ಆರ್ ಪುರದಲ್ಲಿ ೧೫ಕ್ಕೂ ಹೆಚ್ಚು ವರ್ಷಗಳ ಕಾಲದಿಂದ ನೀರು/ ವಿದ್ಯುತ್ ಇಲ್ಲದೆ ಟೆಂಟ್ಗಳಲ್ಲಿ ವಾಸಿಸುತ್ತಿರುವ ಹಿಂದುಳಿದ ಜನಪದ ಕಲಾವಿದರ ೫೩ ಕುಟುಂಬಗಳಿಗೆ ಮನೆಗಳು ಮತ್ತು ದನ ಕರುಗಳ ಆಶ್ರಯಕ್ಕೆ ಜಾಗವನ್ನು ತಕ್ಷಣ ಒದಗಿಸುವಂತೆ ಕರ್ನಾಟಕ ಜನಪದ ಕಲಾವಿದರ ಸಮುದಾಯ, ಮಾನವ ಹಕ್ಕುಗಳ ಹೋರಾಟಗಾರರು, ಮತ್ತು ನಟ ಚೇತನ್ ಅವರು ಶಾಸಕ ಭೈರತಿ ಬಸವರಾಜ್ ಅವರನ್ನು ವಿನಂತಿಸಿದ್ದಾರೆ.
ಈ ಕುರಿತು ಪತ್ರವನ್ನು ಬರೆದು ವಿನಂತಿಸಿದ ಅವರು, ಶತಮಾನಗಳಿಂದ, ಕರ್ನಾಟಕದ ಜನಪದ ಕಲಾವಿದರು ನಮ್ಮ ರಾಜ್ಯ ಮತ್ತು ಭಾಷೆಗಳಿಗೆ, ಹೆಚ್ಚಿನ ಸಾಂಸ್ಕೃತಿಕ ಕೊಡುಗೆಯನ್ನು ನೀಡಿದ್ದಾರೆ. ಕೆ ಆರ್ ಪುರದ ಬಡ ಗ್ರಾಮಸ್ಥರು, ಇಂತಹ ಜನಪದ ಸಂಪ್ರದಾಯವನ್ನು ‘ ಕೋಲೆ ಬಸವ ‘ ಎಂಬ ಕಲಾ ಪ್ರಕಾರದ ಮೂಲಕ ಮುಂದುವರಿಸುತ್ತಿದ್ದಾರೆ. ಈ ಕಲಾ ಪ್ರಕಾರದಲ್ಲಿ ಅಲಂಕೃತವಾದ ಒಂದು ಎತ್ತು, ನಾದಸ್ವರ, ಡೋಲ್, ತಾಳವಾದ್ಯ ಮತ್ತು ಸ್ವಯಂ ಪ್ರೇರಿತ ಸಂಭಾಷಣೆಗಳನ್ನು ಮಾಡುತ್ತಾ ಪ್ರದರ್ಶಿಸುತ್ತದೆ ಎಂದು ಬರೆದಿದ್ದಾರೆ.
ನಮ್ಮ ರಾಜ್ಯಕ್ಕೆ ಸೃಜನಶೀಲತೆಯನ್ನು ನೀಡುವ ಈ ನಾಗರಿಕ ಕಲಾವಿದರು ಮತ್ತು ಕೆ ಆರ್ ಪುರದ ವಡ್ಡರಪಾಳ್ಯದಲ್ಲಿ ವಾಸಿಸುತ್ತಿರುವ ಅವರ ಕುಟುಂಬಗಳು, ಇನ್ನೂ ಇಂತಹ ಶೋಚನೀಯ ಮತ್ತು ಕಷ್ಟದ ಸ್ಥಿತಿಯಲ್ಲಿ ವಾಸಿಸುತ್ತಿರುವುದು ದುರದೃಷ್ಟಕರ. ೧೫ಕ್ಕೂ ಹೆಚ್ಚು ವರ್ಷಗಳಿಂದ ಸರಿಯಾದ ನೀರು ಮತ್ತು ವಿದ್ಯುತ್ ಸರಬರಾಜು ಇಲ್ಲದೆ, ಮೂಲಭೂತ ಹಕ್ಕುಗಳಿಲ್ಲದೆ, ಎಲ್ಲಾ ತರದ ಪ್ರತಿಕೂಲ ಹವಾಮಾನವನ್ನ ನಿವಾರಿಸುತ್ತ ಇಂತಹ ತಾತ್ಕಾಲಿಕ ಟೆಂಟ್ಗಳಲ್ಲಿ ವಾಸಿಸುತ್ತಿದ್ದಾರೆ. ಜಾಗತಿಕವಾಗಿ ‘ಹೈಟೆಕ್ ಸಿಟಿ’ ಎಂದು ಖ್ಯಾತಿ ಹೊಂದಿರುವ ಬೆಂಗಳೂರಿನಂತಹ ನಗರದಲ್ಲಿ, ಇಂತಹ ಕೆಟ್ಟ ಬಡತನವಿದೆ ಎಂದರೆ ಅದು ನಾಚಿಕೆಗೇಡು ಎಂದಿದ್ದಾರೆ.
ಕೆ ಆರ್ ಪುರದ ಸ್ಥಳೀಯ ಶಾಸಕ ಮತ್ತು ಕರ್ನಾಟಕ ನಗರಾಭಿವೃದ್ದಿ ಸಚಿವರಾದ ಶ್ರೀ ಭೈರತಿ ಬಸವರಾಜ್ ಅವರು ಈ ಹಿಂದುಳಿದ ಜನಪದ ಕಲಾವಿದರ ಪರಿಸ್ಥಿತಿಯನ್ನು ತಕ್ಷಣ ಅರಿತುಕೊಂಡು ಅವರ ೫೩ ಕುಟುಂಬಗಳಿಗೆ ಆಶ್ರಯ, ಮತ್ತು ಜಾನುವಾರುಗಳಿಗೆ ಸ್ಥಳ ನೀಡುವ ಮೂಲಕ ಪುನರ್ವಸತಿ ಕಲ್ಪಿಸಬೇಕೆಂದು ಕೇಳಿಕೊಳ್ಳುತ್ತೇವೆ ಎಂದು ಕರ್ನಾಟಕ ಜನಪದ ಕಲಾವಿದರ ಸಮುದಾಯ, ಮಾನವ ಹಕ್ಕುಗಳ ಹೋರಾಟಗಾರರು, ಮತ್ತು ನಟ ಚೇತನ್ ವಿನಂತಿಸಿದ್ದಾರೆ.