ಚಾಮರಾಜನಗರ ವಿಜಯ ಸಂಕಲ್ಪ ಯಾತ್ರೆಗೆ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ ನೀಡಿದ್ದಾರೆ. ಆದರೆ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಗೈರು ಹಾಜರಿ ಎದ್ದು ಕಾಣಿಸುತ್ತಿತ್ತು. ತನ್ನದೇ ಉಸ್ತುವಾರಿ ಜಿಲ್ಲೆಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಬಂದಿದ್ದರೂ ವಿ ಸೋಮಣ್ಣ ಬರಲಿಲ್ಲ ಅನ್ನೋದು ಕೇಸರಿ ಪಾಳಯದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಬಿಜೆಪಿ ನಾಯಕರ ಗಮನ ಸೆಳೆಯುವ ಕೆಲಸ ಮಾಡಿದ್ದಾರೆ. ಈ ನಡುವೆ ಬೆಂಗಳೂರಿನಲ್ಲಿ ಕಾರ್ಯಕ್ರಮ ಮಾಡಿರುವ ವಿ ಸೋಮಣ್ಣ ಮೌನಕ್ಕೆ ಶರಣಾಗಿದ್ದಾರೆ. ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಕೆ.ಎಸ್ ಈಶ್ವರಪ್ಪ ನೇತೃತ್ವದ ತಂಡದಲ್ಲಿರುವ ಸಚಿವ ವಿ.ಸೋಮಣ್ಣ ಹನೂರು ಹಾಗು ಕೊಳ್ಳೇಗಾಲ ಸಮಾವೇಶಕ್ಕೂ ಗೈರು ಹಾಜರಾಗಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ವಿ ಸೋಮಣ್ಣ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಕಡೆಗೆ ದಾಪುಗಾಲು ಹಾಕುವುದಕ್ಕೆ ಸಜ್ಜಾಗಿದ್ದಾರೆ ಎನ್ನುವ ಮಾತುಗಳು ಸೋಮಣ್ಣ ಆಪ್ತ ವಲಯದಲ್ಲಿ ಕೇಳಿಬರುತ್ತಿದೆ.
ಕಾಂಗ್ರೆಸ್ ಗೆ ಸೇರುವ ಮನಸ್ಸು ಮಾಡಿರೋದು ಯಾಕೆ..?
ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಸಚಿವ ವಿ ಸೋಮಣ್ಣ ಲಿಂಗಾಯತ ಸಮುದಾಯದ ನಾಯಕರಾದರೂ ಸೋಮಣ್ಣಗೆ ಬಿಜೆಪಿಯಲ್ಲಿ ಮಾನ್ಯತೆ ಕಡಿಮೆ. ಬಿ.ಎಸ್ ಯಡಿಯೂರಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡಿರುವ ವಿ ಸೋಮಣ್ಣ, ಕಳೆದ ಬಾರಿಯೇ ಹಾಸನದ ಅರಸೀಕೆರೆ ಅಥವಾ ಚಾಮರಾಜನಗರದ ಹನೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಗೋವಿಂದರಾಜನಗರ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರುವ ಸೋಮಣ್ಣ, ಜನರ ಮನಸ್ಸನ್ನೂ ಗೆದ್ದಿದ್ದಾರೆ. ಹೀಗಾಗಿ ಗೋವಿಂದರಾಜನಗರವನ್ನು ತಮ್ಮ ಪುತ್ರ ಡಾ ಅರುಣ್ ಸೋಮಣ್ಣಗೆ ಬಿಟ್ಟು ಕೊಡುವ ಬಗ್ಗೆ ಚರ್ಚೆ ನಡೆಸಿದ್ದರು. ಆದರೆ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರೇ ಅವಕಾಶ ಮಾಡಿಕೊಡಲಿಲ್ಲ. ಆದರೂ ಎಲ್ಲರ ವಿರೋಧ ಕಟ್ಟಿಕೊಂಡರೂ ಸಚಿವ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾದ ಸೋಮಣ್ಣ, ಇದೀಗ ಮಗನ ಭವಿಷ್ಯವನ್ನು ಕಾಂಗ್ರೆಸ್ನಲ್ಲಿ ಕಟ್ಟಿಕೊಡುವ ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.
ಕಾಂಗ್ರೆಸ್’ನಿಂದ ಆಫರ್.. ಬಿಜೆಪಿಯಲ್ಲೇ ಉಳಿಸಿಕೊಳ್ಳೋ ಯತ್ನ..!
ಸೋಮಣ್ಣ ಹಾಗು ಡಾ ಅರುಣ್ಗೆ ಈಗಾಗಲೇ ಬಿಜೆಪಿಯಲ್ಲಿ ಟಿಕೆಟ್ ಕೇಳಿದ್ದು, ಬಿಜೆಪಿ ನಾಯಕರು ಒಂದೇ ಮನೆಯ ಇಬ್ಬರಿಗೆ ಟಿಕೆಟ್ ನೀಡುವುದಿಲ್ಲ ಎನ್ನುವ ಮಾತುಗಳು ಬಂದಿವೆ ಎನ್ನಲಾಗಿದೆ. ಆದರೆ ಕಾಂಗ್ರೆಸ್ನಲ್ಲಿ ಸೊಮಣ್ಣ ಪಕ್ಷಕ್ಕೆ ಬರುವುದಾದರೆ ಇಬ್ಬರಿಗೂ ಟಿಕೆಟ್ ನೀಡ್ತೇವೆ. ಗೋವಿಂದರಾಜನಗರ ಹಾಗು ರಾಜಾಜಿನಗರ ಅಥವಾ ಗೋವಿಂದರಾಜನಗರ ಹಾಗು ವಿಜಯನಗರದಿಂದ ಟಿಕೆಟ್ ಕೊಡ್ತೇವೆ. ಒಂದು ವೇಳೆ ಎಂ ಕೃಷ್ಣಪ್ಪ ಅಥವಾ ಪ್ರಿಯಾ ಕೃಷ್ಣ ವಿರೋಧ ವ್ಯಕ್ತವಾದರೆ ಒಬ್ಬರನ್ನು ಲೋಕಸಭೆ ಕಳುಹಿಸುವ ಚಿಂತನೆಯೂ ನಡೆದಿದೆ ಎನ್ನಲಾಗಿದೆ. ಗೋವಿಂದರಾಜನಗರದಿಂದ ಟಿಕೆಟ್ ಸಾಧ್ಯವಾಗದಿದ್ದರೆ ವಿಧಾನ ಪರಿಷತ್ ಸ್ಥಾನಕ್ಕೆ ಕಳುಹಿಸಲು ವ್ಯವಸ್ಥೆ ಮಾಡ್ತೇವೆ ಎನ್ನುವ ಭರವಸೆಯೂ ಸಿಕ್ಕಿದೆಯಂತೆ. ಆದರೆ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಸೋಮಣ್ಣ ಅವರನ್ನು ಉಳಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ. ಕಾರ್ಯಕ್ರಮಕ್ಕೆ ಗೈರು ಹಾಜರಾದರೆ ಕೆಟ್ಟ ಸಂದೇಶ ಹೋಗುತ್ತದೆ. ಕಾರ್ಯಕ್ರಮಕ್ಕೆ ಬರುವಂತೆ ಸಿಎಂ ತಿಳಿಸಿದ್ದರು ಎನ್ನಲಾಗಿದ್ದು, ಸೋಮನ್ಣ ಒಲ್ಲದ ಮನಸ್ಸಿನಿಂದ ಕಾರ್ಯಕ್ರಮಕ್ಕೆ ಹಾಜರಾಗಲು ಸಿದ್ಧರಿರಲಿಲ್ಲ ಎನ್ನಲಾಗಿದೆ.
ವಿಜಯೇಂದ್ರ & ಯಡಿಯೂರಪ್ಪ ಯೋಜನೆಗೆ ಸಿಡಿಮಿಡಿ..!
ಸಚಿವ ಸೋಮಣ್ಣ, ಹನೂರು ಹಾಗು ಅರಸೀಕೆರೆಯಲ್ಲಿ ಹೆಚ್ಚಿನ ಲಿಂಗಾಯತ ಸಮುದಾಯದ ಮತದಾರರು ಇರುವ ಕಾರಣಕ್ಕೆ ತಮ್ಮ ಪುತ್ರನನ್ನು ಕಣಕ್ಕೆ ಇಳಿಸುವ ನಿರ್ಧಾರ ಮಾಡಿದ್ದರು. ಆದರೆ ಅರಸೀಕೆರೆ ಕ್ಷೇತ್ರದಲ್ಲಿ ಬಿ.ಎಸ್ ಯಡಿಯೂರಪ್ಪ ಅವರ ತಂಗಿ ಪುತ್ರ ಸಂತೋಷ್ ಅಭ್ಯರ್ಥಿ ಆಗಿ ಕಣಕ್ಕಿಳಿಯುವ ತಯಾರಿ ಮಾಡಿಕೊಂಡಿದ್ದಾರೆ. ಇನ್ನು ಚಾಮರಾಜನಗರದ ಹನೂರು ಕ್ಷೇತ್ರದಲ್ಲಿ ರಾಮನಗರ ಜಿಲ್ಲೆ ಬಿಜೆಪಿ ನಾಯಕ ರುದ್ರೇಶ್ ಅವರನ್ನು ಚಾಮರಾಜನಗರದ ಹನೂರು ಕ್ಷೇತ್ರದಲ್ಲಿ ಕಣಕ್ಕಿಳಿಸಲು ಸಿದ್ಧತೆಗಳು ನಡೆದಿವೆ. ಅಂದರೆ ವಿಜಯೇಂದ್ರ ಹಾಗು ಬಿ.ಎಸ್ ಯಡಿಯೂರಪ್ಪ ಉದ್ದೇಶ ಪೂರ್ವಕವಾಗಿಯೇ ನನ್ನ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎನ್ನುವ ಭಾವನೆ ವಿ ಸೋಮಣ್ಣ ಅವರಲ್ಲಿ ಮನೆ ಮಾಡಿದೆ. ಅದೂ ಅಲ್ಲದೆ ಒಂದೇ ಕುಟುಂಬದ ಇಬ್ಬರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಬಿಜೆಪಿ ಪಾಳಯದಲ್ಲಿ ಬಂದಿದ್ದು, ಈ ಎರಡೂ ಕಾರಣಗಳಿಂದ ಬಿಜೆಪಿಯಿಂದ ದೂರವಾಗಲು ಸೋಮಣ್ಣ ನಿರ್ಧಾರ ಮಾಡಿದ್ದಾರೆ ಎನ್ನುವುದು ಖಚಿತವಾಗಿದೆ. ಆದರೆ ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.