ಶ್ರದ್ಧಾನಂಬಿಕೆಗಳು ವ್ಯಕ್ತಿನೆಲೆಯಂದಾಚೆ ಸಾಂಸ್ಥೀಕರಣಗೊಂಡಾಗ ಆಚರಣೆ-ಮೌಢ್ಯ ಆಕ್ರಮಿಸುತ್ತದೆ

ನಾ ದಿವಾಕರ
ಭಾಗ 2
ತಾತ್ವಿಕ ನೆಲೆಯಲ್ಲಿ ನಂಬಿಕೆ-ಆರಾಧನೆ
ಮತ್ತೊಂದೆಡೆ ಅಪಾರ ಸಂಪತ್ತನ್ನು ಕ್ರೋಢೀಕರಿಸಿ, ಐಷಾರಾಮಿ ಜೀವನ ನಡೆಸುವ ಹಾಗೂ ಉತ್ತಮ ಆದಾಯದ ಮೂಲಕ ಹಿತಕರ ಬದುಕಿಗೆ ತೆರೆದುಕೊಂಡ ಒಂದು ಸಮಾಜವೂ ಸಹ ಈ ಆರಾಧನಾ ಸಂಸ್ಕೃತಿಗೆ ಒಳಗಾಗುತ್ತದೆ. ಇಲ್ಲಿ ಶ್ರದ್ಧಾನಂಬಿಕೆಗಳು ಎಷ್ಟೇ ಗಾಢವಾಗಿದ್ದರೂ, ತಮ್ಮ ಸಂಪತ್ತಿನ ಗಳಿಕೆಯನ್ನು ರಕ್ಷಿಸುವ, ಮತ್ತಷ್ಟು ಸಂಪತ್ತನ್ನು ಅಪೇಕ್ಷಿಸುವ ಹಾಗೂ ಸುಖಕರ ಜೀವನಕ್ಕೆ ಯಾವುದೇ ಅಡೆತಡೆಗಳಿಲ್ಲದೆ, ರೋಗ ರುಜಿನಗಳಿಲ್ಲದೆ, ಜೀವನವನ್ನು ಹಸನಾಗಿಸುವ ಮಹತ್ವಾಕಾಂಕ್ಷೆ ಹೆಚ್ಚಿನವರಲ್ಲಿರುತ್ತದೆ. ಬಡ ಜನತೆಯಲ್ಲಿ ಈ ಲಕ್ಷಣಗಳು ಇಲ್ಲವಾದರೂ, ಆರಾಧಿಸುವ ಮೂಲಕ ತಮ್ಮ ನೋವು ಸಂಕಟಗಳನ್ನು ಶಮನ ಮಾಡುವ ಜವಾಬ್ದಾರಿಯನ್ನು ಈ ಅಗೋಚರ ಶಕ್ತಿಗಳಿಗೆ ಅರ್ಪಿಸುವ ಒಂದು ಪ್ರವೃತ್ತಿಯನ್ನು ಗಮನಿಸಬಹುದು. ಹೇಗೇ ನೋಡಿದರೂ ಆರಾಧನಾ ಸಂಸ್ಕೃತಿಯು ಮಾನವ ಸಮಾಜದಲ್ಲಿ ಇರಬೇಕಾದ ವೈಚಾರಿಕತೆ ಮತ್ತು ವೈಜ್ಞಾನಿಕ ಮನೋಭಾವವನ್ನು ಇಲ್ಲವಾಗಿಸುವ ಮೊದಲ ಮೆಟ್ಟಿಲಾಗಿ ಕಾಣುತ್ತದೆ.
ರಾಜಪ್ರಭುತ್ವದ ಯುಗದಲ್ಲಿ ಈ ಆರಾಧನಾ ಸಂಸ್ಕೃತಿಯ ಪರಿಣಾಮವಾಗಿಯೇ ʼ ರಾಜಾ ಪ್ರತ್ಯಕ್ಷ ದೇವತಾ ʼ ಎಂಬ ನಾಣ್ಣುಡಿಯೂ ಹುಟ್ಟಿಕೊಂಡಿತ್ತು. ತಮ್ಮ ಸಾಮ್ರಾಜ್ಯದುದ್ದಕ್ಕೂ ಪ್ರಶ್ನಾತೀತರಾಗಿ, ಅದ್ವಿತೀಯರಾಗಿ, ಅಪ್ರತಿಮ ನಾಯಕರಾಗಿ ಹಾಗೂ ಸಾಮಾನ್ಯ ಜನರು ಸಮೀಪಿಸಲಾಗದ ರೀತಿಯಲ್ಲಿ ಬಾಳಿ ಬದುಕಿದ ರಾಜಮಹಾರಾಜರು, ವಿಶ್ವದಾದ್ಯಂತ ಒಂದು ಪರಂಪರೆಯನ್ನೇ ಸೃಷ್ಟಿಸಿದ್ದಾರೆ. ಭಾರತದಲ್ಲಿ ಇದು ಇನ್ನೂ ಪರಾಕಾಷ್ಠೆ ತಲುಪಿದ್ದು ರಾಜನನ್ನು ದೈವೀಕರಿಸುವ ಪ್ರವೃತ್ತಿಯೂ ನಾಗರಿಕತೆಯೊಡನೆಯೆ ಬೆಳೆದುಕೊಂಡುಬಂದಿದೆ. ವಿಪರ್ಯಾಸವೆಂದರೆ, ಈ ಪರಂಪರೆಯ ಪಳೆಯುಳಿಕೆಗಳು ಪ್ರಜಾಪ್ರಭುತ್ವದಲ್ಲೂ ಉಳಿದುಕೊಂಡುಬಂದಿದೆ. ರಾಜಕೀಯ ನಾಯಕರನ್ನು ಈ ರೀತಿ ಆರಾಧಿಸುವ ಮನೋಭಾವ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಅಪಾಯಕಾರಿಯಾದರೂ, ವಾಸ್ತವ. ಆಗ ನಾಯಕರು ಪ್ರಶ್ನಾತೀತರಾಗಿ, ಅವರ ಸುತ್ತಲಿನ ಆಪ್ತ ಕೂಟಗಳು (Coteries) ವಂದಿಮಾಗಧ ಸಮೂಹಗಳಾಗಿ ಪರಿಣಮಿಸುತ್ತವೆ.
ಭಾರತೀಯ ಸಮಾಜದಲ್ಲಿ ಈ ಪ್ರವೃತ್ತಿ ಶತಮಾನಗಳಿಂದ ಬೇರೂರಿರುವುದನ್ನು ಗಮನಿಸಿಯೇ, ಇದರಿಂದ ಪ್ರಜಾಪ್ರಭುತ್ವಕ್ಕೆ ಸಂಚಕಾರ ಉಂಟಾಗುತ್ತದೆ ಎಂಬ ದಾರ್ಶನಿಕ ಅರಿವಿನೊಂದಿಗೇ, ಡಾ. ಬಿ. ಆರ್. ಅಂಬೇಡ್ಕರ್ ವ್ಯಕ್ತಿ ಆರಾಧನೆಯನ್ನು ತಿರಸ್ಕರಿಸುತ್ತಾರೆ. ದುರದೃಷ್ಟವಶಾತ್ ಇಂದು ಅಂಬೇಡ್ಕರ್ ಅವರಷ್ಟೇ ಅಲ್ಲದೆ, ಅವರು ಸೈದ್ಧಾಂತಿಕವಾಗಿ ಅನುಸರಿಸಿದ ಬುದ್ಧನೂ ಸಹ ಆರಾಧನೆಯ ಕೇಂದ್ರವಾಗಿದ್ದಾನೆ. “ ನಿನಗೆ ನೀನೇ ಬೆಳಕು ” ಎಂದು ಬೋಧಿಸುವ ಮೂಲಕ, ಮೂರ್ತಿಪೂಜೆಯನ್ನು ತಿರಸ್ಕರಿಸುವ ಮೂಲಕ, ಮಾನವ ಸಮಾಜಕ್ಕೆ ದಾರಿ ತೋರಿದ ಬುದ್ಧ ಮತ್ತು ಆತನ ಧಮ್ಮ ಮೂಲತಃ ಹೇಳುವುದು, ಜಗತ್ತಿನಲ್ಲಿ ಅಂತಿಮ ಸತ್ಯ ಎನ್ನುವುದಿಲ್ಲ ಎಂಬ ದಾರ್ಶನಿಕ ತತ್ವವನ್ನು. ತನ್ನನ್ನು ದಾಟಿ ನೋಡುವ ಮೂಲಕ ಮಾನವ ಸಮಾಜ ತನ್ನ ಅಭ್ಯುದಯದ ಹಾದಿಯಲ್ಲಿ ಔನ್ನತ್ಯ ಸಾಧಿಸಬೇಕು ಎನ್ನುವ ಬುದ್ಧನ ಬೋಧನೆ ಇಂದು ಆರಾಧನಾ ಸಂಸ್ಕೃತಿಗೊಳಗಾಗಿ, ಮೂರ್ತಿ ಭಂಜಕರನ್ನು ಸಮ್ಮೋಹನಕ್ಕೊಳಪಡಿಸುವಂತಾಗಿದೆ.

ಮೂರ್ತಿ ಭಂಜಕ ಅಂಬೇಡ್ಕರರ ಮೂರ್ತಿಕರಣ ಮತ್ತು ಅವರ ಸುತ್ತಲಿನ ಆರಾಧನಾ ಭಾವನೆಯನ್ನು, ವರ್ತಮಾನ ಭಾರತದ ನೆಲದ ವಾಸ್ತವಗಳ ನಡುವೆ ಇಟ್ಟು ನೋಡಿದಾಗ, ಇಂದಿಗೂ ಶೋಷಣೆ, ದೌರ್ಜನ್ಯ, ತಾರತಮ್ಯಗಳಿಂದ ಮುಕ್ತರಾಗದ ತಳಸಮುದಾಯದ ಶೋಷಿತರಿಗೆ ಇದು ಸಾಂತ್ವನದ ನೆಲೆಯಾಗಿಯೂ ಕಾಣುತ್ತದೆ. ಹಾಗಾಗಿ ಇದನ್ನು ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಮನೋಭಾವದ ಮೂಲಕ ಕ್ರಮೇಣ ಹೋಗಲಾಡಿಸಬೇಕೇ ಹೊರತು, ಏಕಾಏಕಿ ತಿರಸ್ಕರಿಸಿ, ಖಂಡಿಸಲಾಗುವುದಿಲ್ಲ. ಸಂವಿಧಾನವೂ ತಮ್ಮ ರಕ್ಷಣೆಗೆ ಬರುವುದಿಲ್ಲ ಎಂಬ ಒಂದು ಸೂಚನೆಯೇ ತಳಸಮುದಾಯಗಳನ್ನು ಅಂಬೇಡ್ಕರರನ್ನು ಆರಾಧಿಸುವ ಮನಸ್ಥಿತಿಗೆ ದೂಡುತ್ತದೆ. ಮತ್ತೊಂದು ಮಗ್ಗುಲಿನಲ್ಲಿ ನೋಡಿದಾಗ, ಭಾರತೀಯ ಸಂಸ್ಕೃತಿಯಲ್ಲಿ ಶತಮಾನಗಳಿಂದ ಬೇರೂರಿರುವ ಆರಾಧನಾ ಸಂಸ್ಕೃತಿಯಿಂದ ಹೊರಬರಲಾಗದ ಒಂದು ಸನ್ನಿವೇಶವನ್ನೂ ಇಲ್ಲಿ ಗುರುತಿಸಬೇಕಿದೆ.
ಮೂರ್ತಿ ಪೂಜೆಯಿಂದ ಹೊರತಾದ ಕ್ರೈಸ್ತ ಹಾಗೂ ಇಸ್ಲಾಂ ಧರ್ಮಗಳಲ್ಲೂ ಭಿನ್ನ ಧಾರೆಗಳಲ್ಲಿ ಈ ಆರಾಧನಾ ಸಂಸ್ಕೃತಿ ಇರುವುದನ್ನು ಗಮನಿಸಬಹುದು. ಕ್ರೈಸ್ತರ ಒಂದು ಗುಂಪು ಆರೋಗ್ಯ ಮೇರಿ ಉತ್ಸವ, ಜಾತ್ರೆ ನಡೆಸುವುದು, ಇಸ್ಲಾಂ ಧರ್ಮವು ಪೂರ್ಣವಾಗಿ ಸ್ವೀಕರಿಸಿದ ಸೂಫೀ ಸಂತರ ದರ್ಗಾಗಳ ಮೇಲೆ ಧರ್ಮಾಧಾರಿತ ಸಾಂಸ್ಥಿಕ ಚೌಕಟ್ಟುಗಳನ್ನು ನಿರ್ಮಿಸುವುದು ಆರಾಧನಾ ಸಂಸ್ಕೃತಿಯ ಮತ್ತೊಂದು ಆಯಾಮವಾಗಿ ಕಾಣುತ್ತದೆ. ಈ ಎರಡೂ ನೆಲೆಗಳಲ್ಲಿ ಗಾಢವಾದ ಶ್ರದ್ಧೆ, ಅಪಾರ ನಂಬಿಕೆ ಇರುವುದನ್ನು ಗುರುತಿಸಬಹುದು. ಇಲ್ಲಿ ಆರಾಧನಾ ವಿಧಾನಗಳು ಭಿನ್ನವಾಗಿರುತ್ತವೆಯಾದರೂ, ವ್ಯಕ್ತಿಗತ ನೆಲೆಯಲ್ಲಿ, ಸಾಮುದಾಯಿಕವಾಗಿ ಇದು ಪ್ರಭಾವಿಸುವ ಜನಸಮುದಾಯಗಳ ನಡುವೆ ಅತೀತತೆಯನ್ನು ಅಥವಾ ಅತೀಂದ್ರಿಯತೆಯನ್ನು ಮಾನ್ಯ ಮಾಡುವ ಕ್ರಿಯೆಯಾಗಿ, ಅಸ್ಮಿತೆಯ ನೆಲೆಯಾಗಿ ಪರಿವರ್ತನೆಯಾಗುತ್ತದೆ. ನಾಗರಿಕ ಜಗತ್ತಿನಲ್ಲಿ ರಾಜಕೀಯ-ಧಾರ್ಮಿಕ ಹಿತಾಸಕ್ತಿಗಳು ಇಲ್ಲಿ ಸೃಷ್ಟಿಸುವ ಒಂದು ಯಜಮಾನಿಕೆಯ ನೆಲೆಗಟ್ಟು ಸದಾ ಪ್ರಬಲವಾಗಿರುವುದನ್ನು ಗಮನಿಸಬಹುದು.

ಆಚರಣಾತ್ಮಕ ನೆಲೆಯಲ್ಲಿ ನಂಬಿಕೆಗಳು
ಈ ಆರಾಧನಾ ಸಂಸ್ಕೃತಿಯ ಭಿನ್ನ ಆಯಾಮಗಳ ಚೌಕಟ್ಟಿನೊಳಗೇ ಧಾರ್ಮಿಕ ಆಚರಣೆಗಳೂ, ಸಹಜ ಪ್ರಕ್ರಿಯೆಯಾಗಿ ರೂಪುಗೊಳ್ಳುವುದನ್ನು ಚಾರಿತ್ರಿಕವಾಗಿಯೂ ಗಮನಿಸಬಹುದು. ಸ್ಥಾವರಗಳನ್ನು, ಸಾಂಸ್ಥೀಕರಣಗೊಂಡ ಧಾರ್ಮಿಕ ನೆಲೆಗಳನ್ನು ನಿರ್ದೇಶಿಸುವ ನಿರ್ದಿಷ್ಟ ಧರ್ಮಗಳ ಒಂದು ಪ್ರಬಲ ವರ್ಗ ಈ ಆಚರಣೆಗಳನ್ನು, ವಿಧಿವಿಧಾನಗಳನ್ನು ನಿರೂಪಿಸಿ, ನಿರ್ವಹಿಸಿ, ನಿಯಂತ್ರಿಸುತ್ತವೆ. ಹಿಂದೂ ಧರ್ಮದಲ್ಲಿ ವೈದಿಕಶಾಹಿಯು ಇದರ ಪ್ರಬಲ ಶಕ್ತಿಯಾಗಿ ಕಂಡರೆ, ಇಸ್ಲಾಂ ಧರ್ಮದಲ್ಲಿನ ಮೌಲ್ವಿಗಳು, ಕ್ರೈಸ್ತರಲ್ಲಿನ ಪ್ಯಾಸ್ಟರ್, ಬಿಷಪ್, ಪಾದ್ರಿ ಮೊದಲಾದ ಶ್ರೇಣೀಕರಣಗೊಂಡ ಒಂದು ವ್ಯವಸ್ಥೆಯು ತನ್ನ ಪ್ರಾಬಲ್ಯ, ಆಧಿಪತ್ಯ ಸಾಧಿಸಿರುತ್ತದೆ. ಆದರೆ ವೈದಿಕ ಪರಂಪರೆಯಲ್ಲಿ ಸಮಾಜದ ಒಂದು ವರ್ಗವನ್ನು, ಜಾತಿ ಶ್ರೇಣೀಕಣರಕ್ಕೊಳಪಡಿಸಿ, ಹೊರಗಿಡುವ ಪ್ರವೃತ್ತಿ ಇದ್ದರೆ, ಅನ್ಯ ಧರ್ಮಗಳ ಆರಾಧನೆಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಧೋರಣೆ ಇರುತ್ತದೆ. ಸಾಮಾಜಿಕ ಪಿರಮಿಡ್ಡಿನಲ್ಲಿ ತಳಸ್ತರದಲ್ಲಿರುವ, ಕೆಳಸ್ತರದ ಸ್ಥಾನಮಾನವನ್ನು ಹೊಂದಿರುವ ತಳಸಮುದಾಯಗಳು, ಈ ಆರಾಧನಾ ಸಂಸ್ಕೃತಿಯ ಒಂದು ಅಂಶಿಕ ಭಾಗವಾಗಿರುವುದು ಅಪರೂಪ ಎನ್ನಬಹುದು. ಇದು ಹಿಂದೂ ಧರ್ಮದ-ವೈದಿಕ ಪರಂಪರೆಯ ಒಂದು ಪರಿಣಾಮ ಎನ್ನಲೂಬಹುದು.
ಆದರೂ ಹಿಂದೂ ಧರ್ಮದ ಸಾಂಸ್ಕೃತಿಕ ಸಂಕಥನಗಳಲ್ಲಿ ಹಲವು ವಿಭಿನ್ನ ಧಾರೆಗಳು ಆರಂಭದಿಂದಲೂ ಹುಟ್ಟಿಕೊಂಡಿರುವ ಕಾರಣ, ಶರಣ ಬಸವರಾದಿಯಾಗಿ, ಬ್ರಹ್ಮ ಸಮಾಜ, ಆರ್ಯ ಸಮಾಜ ಇತರ ಸಾಂಸ್ಥಿಕ ನೆಲೆಗಳಲ್ಲಿ, ವಿವೇಕಾನಂದ, ನಾರಾಯಣಗುರು ಮೊದಲಾದ ದಾರ್ಶನಿಕರ ಚಿಂತನಾ ವಾಹಿನಿಗಳಲ್ಲಿ ಎಲ್ಲರನ್ನೊಳಗೊಳ್ಳುವ ಧಾರೆಗಳೂ ನಿರ್ಮಿತವಾಗಿರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ಸಮಾಜದ ಮೇಲೆ ಯಜಮಾನಿಕೆ ಅಥವಾ ಆಧಿಪತ್ಯವನ್ನು ಸಾಧಿಸಲು ಬೇಕಾದ ರಾಜಕೀಯ ಸ್ಥಾನಮಾನ, ಆರ್ಥಿಕ ಪ್ರಾಬಲ್ಯ ಮತ್ತು ಸಾಂಸ್ಥಿಕ ನೆಲೆಗಟ್ಟುಗಳು ದುರ್ಬಲವಾಗಿರುವುದರಿಂದ, ಇಂದಿಗೂ ಮೇಲ್ಜಾತಿಯ ಪಾರಮ್ಯ ಬಹುಪಾಲು ಯಥಾಸ್ಥಿತಿಯಲ್ಲಿ ಮುಂದುವರೆದಿದೆ. ಅಧ್ಯಾತ್ಮ ಕೇಂದ್ರಗಳು ಇದರಿಂದಾಚೆಗೆ ಆಲೋಚನೆ ಮಾಡುವುದಾದರೂ, ಆಚರಣೆಯ ನೆಲೆಯಲ್ಲಿ ಪುನಃ ಪ್ರಾಚೀನ ಸಂಪ್ರದಾಯ ಮತ್ತು ಪರಂಪರೆಗಳಿಗೇ ಆತುಕೊಳ್ಳುವುದನ್ನೂ ಕೆಲವು ವಿಧಿ ವಿಧಾನಗಳಲ್ಲಿ, ಆಚರಣೆಗಳಲ್ಲಿ ಗುರುತಿಸಬಹುದು.
ಆಚರಣೆಗಳ ಪ್ರಭಾವ ಮತ್ತು ವ್ಯಾಪ್ತಿ
ಮಾನವ ಸಮಾಜವನ್ನು ಸಾಂಪ್ರದಾಯಿಕವಾಗಿ ನಿರ್ದೇಶಿಸುವ ಜಾತಿ-ಧರ್ಮಗಳ ನೆಲೆಗಟ್ಟಿನಲ್ಲಿ ನಾಲ್ಕನೆಯ ಹಂತವಾಗಿ ನಾವು ಆಚರಣೆಗಳನ್ನು ಗಮನಿಸಬೇಕಾಗುತ್ತದೆ. ಇದು ಎಲ್ಲ ಧರ್ಮಗಳಲ್ಲೂ ವಿಭಿನ್ನ ಮಾದರಿಗಳಲ್ಲಿ ವ್ಯಕ್ತವಾದರೂ, ಹಿಂದೂ ಧರ್ಮದ ಒಳಗೆ ಆಚರಣೆಗಳನ್ನು, ನಿರ್ದಿಷ್ಟ ವಿಧಿವಿಧಾನಗಳ ಮುಖಾಂತರ, ಕಡ್ಡಾಯವಾಗಿ ಅನುಸರಿಸಲೇಬೇಕಾದ ಕಾರ್ಯ ಮತ್ತು ಕ್ರಿಯಾದಿಗಳ ಮೂಲಕ ನಿಗದಿಪಡಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಮನುಸ್ಮೃತಿಯನ್ನು ಆದಿಮ ಗ್ರಾಂಥಿಕ ಮೂಲ ಎಂದು ಪರಿಗಣಿಸಲಾಗುತ್ತದೆ. ವೇದೋತ್ತರ ಕಾಲದಲ್ಲಿ ರೂಪುಗೊಂಡ ಜಾತಿ ಶ್ರೇಣೀಕರಣ ಮತ್ತು ಅದನ್ನು ಕಾಪಾಡಲು ರೂಪಿಸಿದಂತಹ ನೀತಿ ಸಂಹಿತೆಗಳಿಗೆ ಪ್ರಧಾನ ಆಕರವಾಗಿರುವ ಮನುಸ್ಮೃತಿ, ಆಚರಣಾತ್ಮಕ ನೆಲೆಯಲ್ಲೂ ಸಮಾಜದ ಎಲ್ಲ ಸ್ತರಗಳನ್ನೂ ಆಕ್ರಮಿಸಿದೆ. ಪ್ರಾಚೀನ ಧರ್ಮಶಾಸ್ತ್ರಗಳು, ದರ್ಶನಗಳು, ಬ್ರಾಹ್ಮಣಗಳು ಸೃಷ್ಟಿಸಿರುವ ಆಚರಣೆಗಳೇ ಇಂದಿಗೂ ವೈದಿಕ ಪರಂಪರೆಯ ಒಂದು ಪ್ರಧಾನ ಧಾರೆ ಆಗಿರುವುದನ್ನು ಗಮನಿಸಬಹುದು.
ಮೌಢ್ಯ ಎಂದು ನಾವು ಸಾಮಾನ್ಯವಾಗಿ ಪರಿಭಾವಿಸುವ ಮನೋಭಾವ, ಮೂಲತಃ ಸೃಷ್ಟಿಯಾಗುವುದು ಶ್ರದ್ಧೆ-ನಂಬಿಕೆ-ಆರಾಧನೆಗಳ ನೆಲೆಯಲ್ಲೇ ಆದರೂ, ಅದು ಸಮಾಜದ ಎಲ್ಲ ವರ್ಗಗಳನ್ನೂ ಆವರಿಸಿ, ಜೀವನ ವಿಧಾನದ ಒಂದು ಭಾಗವಾಗಿ, ವ್ಯವಸ್ಥಿತವಾಗಿ, ಗಟ್ಟಿಯಾಗುವುದು ಈ ಅಚರಣೆಗಳ ನೆಲೆಯಲ್ಲಿ ಎನ್ನುವುದು ಗಮನಾರ್ಹ ಸಂಗತಿ. ಅತೀತ-ಅತೀಂದ್ರಿಯ ಶಕ್ತಿಗಳಲ್ಲಿನ ಶ್ರದ್ಧಾ ನಂಬಿಕೆಗಳಿಗೆ ಮತ್ತಷ್ಟು ಪುಷ್ಟಿ ನೀಡುವ ಸಲುವಾಗಿ ಪ್ರಾಚೀನ-ಮಧ್ಯಕಾಲೀನ ಸಮಾಜದಲ್ಲಿ ರೂಪಿಸಲಾದ ಸಾಂಸ್ಥಿಕ ಆರಾಧನಾ ಸಂಸ್ಕೃತಿಯನ್ನು ಬೆಳೆಸುವ ಸಲುವಾಗಿ, ಆ ಕಾಲಘಟ್ಟದಲ್ಲೇ ನಿರ್ವಚಿಸಲಾದ ಹಲವಾರು ಆಚರಣೆಗಳನ್ನು ಪೋಷಿಸುತ್ತಾ ಬರಲಾಗಿದೆ. ಸಹಜವಾಗಿಯೇ ತಮ್ಮ ವೈಯುಕ್ತಿಕ ಶ್ರದ್ಧಾನಂಬಿಕೆಗಳನ್ನು ಸಾಕಾರಗೊಳಿಸುವ ಮೂಲಕ ಸಾಕ್ಷಾತ್ಕರಿಸುವ ಹಂಬಲ ಹೊಂದಿರುವ ಸಮಾಜ, ವಿಶೇಷವಾಗಿ ಸದಾ ನೋವು, ಸಂಕಷ್ಟ, ತಲ್ಲಣಗಳ ನಡುವೆಯೇ ಬದುಕುವ ತಳಸಮಾಜವು ಈ ಆಚರಣೆಗಳನ್ನು ಚಾಚೂ ತಪ್ಪದೆ ಅನುಸರಿಸುವ/ಅನುಕರಿಸುವ ಮೂಲಕ ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಳ್ಳುತ್ತದೆ.

ಪೂಜೆ-ಪುನಸ್ಕಾರ, ಯಜ್ಞ-ಯಾಗ, ಹೋಮ, ಉತ್ಸವ ಇವೇ ಮುಂತಾದ ಸಾರ್ವತ್ರೀಕರಿಸಿದ ಪದ್ದತಿಗಳನ್ನು ಅನುಸರಿಸುವ ಸಾಮಾನ್ಯ ಜನತೆ, ವೈಚಾರಿಕ ಪ್ರಜ್ಞೆ ಮತ್ತು ವೈಜ್ಞಾನಿಕ ಅರಿವಿನ ಹಾದಿಯಿಂದ ವಿಮುಖವಾದಾಗ, ಈ ಆಚರಣೆಗಳಲ್ಲಿ ಸೃಷ್ಟಿಯಾಗುವ ನಂಬಿಕೆಗಳು ಅಂಧಶ್ರದ್ಧೆಯಾಗಿ ಪರಿವರ್ತನೆ ಹೊಂದುತ್ತವೆ. ಗ್ರಾಂಥಿಕವಾಗಿ ವಿಧಿವಿಧಾನಗಳನ್ನು, ಕ್ರಿಯಾ ಕರ್ಮಗಳನ್ನು ಅನುಕರಿಸುವ ಜನಸಾಮಾನ್ಯರು ಕೆಲವು ಮೂಢ ನಂಬಿಕೆಗಳಿಗೆ ಬಲಿಯಾಗುತ್ತಾರೆ. ಎಲ್ಲ ಧರ್ಮಗಳಲ್ಲೂ ಇದರ ಒಂದು ಆಯಾಮವನ್ನು ವಿಭಿನ್ನ ಧಾರೆಗಳಲ್ಲಿ ಗುರುತಿಸಬಹುದು. ದೈವೀಕ ಶಕ್ತಿಗಳಲ್ಲಿನ ನಂಬಿಕೆ ಆಚರಣಾತ್ಮಕ ನೆಲೆಯಲ್ಲಿ ಅಮೂರ್ತ ನೆಲೆಯಲ್ಲಿ ಕೆಲವು ನಂಬಿಕೆ ವಿಶ್ವಾಸಗಳನ್ನು ಜನಸಾಮಾನ್ಯರಲ್ಲಿ ಹುಟ್ಟುಹಾಕುತ್ತದೆ.
ಅದರಲ್ಲೂ ಸ್ವರ್ಗ-ನರಕ, ಪುನರ್ಜನ್ಮ-ಕರ್ಮ ಸಿದ್ಧಾಂತಗಳಲ್ಲಿ ನಂಬಿಕೆ ಇರಿಸುವ ಹಿಂದೂ, ಕ್ರೈಸ್ತ, ಇಸ್ಲಾಂ ಧರ್ಮಗಳಲ್ಲಿ, ವೈಯುಕ್ತಿಕ ಮೋಕ್ಷವೇ ಮನುಷ್ಯ ಜೀವನದ ಅಂತಿಮ ಗುರಿಯಾಗಿ ಕಾಣುವುದರಿಂದ, ಈ ಮೋಕ್ಷ ಸಾಧನೆಗಾಗಿ ಎಂತಹ ಆಚರಣೆಗಳನ್ನಾದರೂ ಅನುಸರಿಸುವ ಮನೋಧೋರಣೆಯನ್ನು ಸಮಾಜದಲ್ಲಿ ಸೃಷ್ಟಿಸಲಾಗುತ್ತದೆ. ಸ್ವರ್ಗ ಪ್ರಾಪ್ತಿಗಾಗಿ ಕೆಲವು ವಿಧಿವಿಧಾನಗಳನ್ನು ಅನುಸರಿಸಲು ಪ್ರಾಚೀನ ಗ್ರಂಥಗಳು ಸೂಚಿಸುವ ಮಾರ್ಗಗಳನ್ನೇ ಆಧುನಿಕ ವೈಜ್ಞಾನಿಕ ಯುಗದಲ್ಲೂ ಅನುಸರಿಸುವುದನ್ನು ಗುರುತಿಸಬಹುದು. ಕ್ರೈಸ್ತ ಧರ್ಮದಲ್ಲಿ ಧರ್ಮ ಪ್ರಚಾರಕರು (Evangelists) ಈ ಮೂಲಕವೇ ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೊಳಗಾದ ಅನ್ಯಧರ್ಮದ ಸಾಮಾನ್ಯ ಜನರನ್ನು ಸಮ್ಮೋಹನಗೊಳಿಸುವುದನ್ನು ಗಮನಿಸಬಹುದು. ಯಾವುದೇ ಸಮಾಜಕ್ಕೆ ಅಪಾಯಕಾರಿಯಾಗಿ ಕಾಣುವುದು ಈ ಆಚರಣಾತ್ಮಕ ನೆಲೆಯಲ್ಲಿ ಸೃಷ್ಟಿಯಾಗುವಂತಹ ಮೂಢ ನಂಬಿಕೆಗಳು ಮತ್ತು ಮೌಢ್ಯಾಚರಣೆಗಳು.

ದೈವತ್ವದ ಕಲ್ಪನೆ ಮತ್ತು ಆಚರಣೆಗಳು
ದೈವತ್ವ ಅಥವಾ ದೈವೀಕ ಶಕ್ತಿಗಳಲ್ಲಿರುವ ನಂಬಿಕೆಗಳನ್ನೇ ಆಧಾರವಾಗಿಟ್ಟುಕೊಂಡು, ಪುರೋಹಿತಶಾಹಿ ವರ್ಗವು ಸಾಂಪ್ರದಾಯಿಕ ಸಮಾಜದ ನೆಲೆಯಲ್ಲಿ ಇಂತಹ ಮೂಢ ನಂಬಿಕೆಗಳನ್ನು, ಮೌಢ್ಯಾಚರಣೆಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಾ ಹೋಗುತ್ತವೆ. ಭಾರತೀಯ ಸಮಾಜದಲ್ಲಿ, ವಿಶೇ಼ಷವಾಗಿ ಹಿಂದೂ ಸಮಾಜದಲ್ಲಿ ಎಲ್ಲ ವರ್ಗಗಳಲ್ಲೂ ಈ ರೀತಿಯ ಮೌಢ್ಯಾಚರಣೆಗಳನ್ನು, ಕಂದಾಚಾರಗಳನ್ನು ಅನುಸರಿಸುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ. ನಂಬಿಕೆ ಅಥವಾ ಶ್ರದ್ಧೆ ಎನ್ನುವ ಒಂದು ವ್ಯಕ್ತಿಗತ ಮನೋಭೂಮಿಕೆಯನ್ನು ಸಾಮಾಜೀಕರಣಗೊಳಿಸುವ ಸಾಂಸ್ಥಿಕ ಪ್ರಕ್ರಿಯೆಯಲ್ಲಿ, ಈ ಅಂಧಾನುಕರಣೆಯ ಮಾರ್ಗಗಳನ್ನು ರೂಪಿಸುವ ಮೂಲಕ, ಕೆಲವು ಮಾನವನ ಪ್ರಜ್ಞೆಗೆ ನಿಲುಕದ ಅವೈಚಾರಿಕ ಪದ್ಧತಿಗಳನ್ನು ಅಳವಡಿಸಲಾಗುತ್ತದೆ. ಹೆಚ್ಚಿನ ಶಿಕ್ಷಣ ಪಡೆಯದೆ, ನಗರೀಕರಣದ ಅಧುನಿಕತೆಯಿಂದ ದೂರ ಉಳಿದಿರುವ ಜನಸಮುದಾಯಗಳು ಸಹಜವಾಗಿಯೆ ವೈಚಾರಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳದೆ ಇರುವುದರಿಂದ ಇಂತಹ ಮೌಢ್ಯಾಚರಣೆಗಳಿಗೆ ಸುಲಭ ತುತ್ತಾಗುತ್ತಾರೆ.
ಆದರೆ ವೈಚಾರಿಕತೆ ಮತ್ತು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದಾಗ ವಿದ್ಯಾವಂತ ಸಮಾಜವೂ ಅನುಸರಿಸುವ ಕೆಲವು ಆಚರಣೆಗಳಲ್ಲಿ ಮೌಢ್ಯ ಇರುವುದನ್ನು ಗುರುತಿಸಬಹುದು. ವಾಸ್ತು ಇದರ ಒಂದು ಅತ್ಯುತ್ತಮ ನಿದರ್ಶನ. ಗ್ರಾಮೀಣ ಸಂಸ್ಕೃತಿಗಳಲ್ಲಿ ಹರಕೆ ಹೊತ್ತುಕೊಳ್ಳುವುದು ಸಾಮಾನ್ಯವಾಗಿದ್ದರೆ, ನಗರೀಕರಣಕ್ಕೊಳಗಾದ ಆಧುನಿಕ ಸಮಾಜಗಳಲ್ಲಿ ವಿಶೇಷ ಪೂಜೆಗಳು, ಗಣಹೋಮದಂತಹ ಆಚರಣೆಗಳು, ದೇವಸ್ಥಾನಗಳಲ್ಲಿ ರೂಪಿಸುವ ಸಂಕಷ್ಟ ಗಣಪತಿ, ಪ್ರದೋಷ ಪೂಜೆ, ಜಯಂತಿ ಉತ್ಸವಗಳು ಜನಸಾಮಾನ್ಯರ ನಂಬಿಕೆಗಳನ್ನು ಗಟ್ಟಿಗೊಳಿಸುವುದಷ್ಟೇ ಅಲ್ಲದೆ, ಸಾಂಸ್ಥಿಕವಾಗಿ ಪೂಜಾಸ್ಥಳಗಳ ಬೆಳವಣಿಗೆಗೂ ನೆರವಾಗುತ್ತವೆ. ಇಲ್ಲಿರುವ ಮಾರುಕಟ್ಟೆ ಸಂಬಂಧಗಳನ್ನೂ ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ದೈವ ನಂಬಿಕೆಗೂ ಈ ರೀತಿಯ ಅಂಧಾನುಕರಣೆಯ ವಿಧಿವಿಧಾನಗಳಿಗೂ ಇರುವ ವ್ಯತ್ಯಾಸವನ್ನು ಗಮನಿಸಿದಾಗ, ಜನರಲ್ಲಿ ವೈಚಾರಿಕ ಪ್ರಜ್ಞೆ ಇಲ್ಲದಿರುವುದರ ಪರಿಣಾಮವನ್ನು ಗ್ರಹಿಸಬಹುದು.

ಇದರ ಮತ್ತೊಂದು ಅಪಾಯಕಾರಿ ಆಯಾಮವನ್ನು ಕ್ಷುದ್ರ ದೇವತೆಗಳೆಂಬ ಕಲ್ಪನೆಯಲ್ಲಿ, ಮಾಟ ಮಂತ್ರ ಇತ್ಯಾದಿಗಳಲ್ಲಿ ಗುರುತಿಸಬಹುದು. ಇದು ಸಾಮಾನ್ಯವಾಗಿ ಅನಕ್ಷರಸ್ಥ ಸಮಾಜವನ್ನು ಕಾಡುವ ಗಂಭೀರ ಸಮಸ್ಯೆ. ಇತ್ತೀಚೆಗೆ ಕರ್ನಾಟಕದ ಒಂದು ಗ್ರಾಮದಲ್ಲಿ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣ ನಡೆದಿರುವುದನ್ನು ಗಮನಿಸಬಹುದು. ಅಧುನಿಕ ಸುಶಿಕ್ಷಿತ ಸಮಾಜವನ್ನೂ ಕಾಡುವ ಮತ್ತೊಂದು ಮೌಢ್ಯ ಎಂದರೆ ಜ್ಯೋತಿಷ್ಯ ಶಾಸ್ತ್ರ ಮತ್ತು ವಾಸ್ತು ಪರಿಕಲ್ಪನೆಗಳು. ಸೌರಮಂಡಲದಲ್ಲಿ ಸೂರ್ಯ-ಚಂದ್ರ ಗ್ರಹಣ ಸಂಭವಿಸಿದಾಗೆಲ್ಲಾ ಈ ನೈಸರ್ಗಿಕ ಪ್ರಕ್ರಿಯೆಯ ಸುತ್ತ ಹೆಣೆಯಲಾಗಿರುವ ಹಲವಾರು ನಂಬಿಕೆಗಳು ಜನಸಾಮಾನ್ಯರನ್ನು ಕಂಗೆಡಿಸುತ್ತವೆ. ಇದನ್ನು ಅಲ್ಲಗಳೆಯಲೆಂದೇ ಗ್ರಹಣ ಕಾಲದಲ್ಲಿ ಮೈದಾನಗಳಲ್ಲಿ ಆಹಾರ ಸೇವಿಸುವ, ವಿವಾಹಗಳನ್ನು ನೆರವೇರಿಸುವ ಪ್ರಯತ್ನಗಳ ನಡುವೆಯೂ, ಈ ಅವೈಜ್ಞಾನಿಕ ನಂಬಿಕೆಗಳಿಗೆ ವಿದ್ಯಾವಂತರೂ ಮಾರುಹೋಗುವುದು ಆಧುನಿಕತೆಯ ವಿಪರ್ಯಾಸ.

ಇಂದಿಗೂ ಸಹ ದೇವರು ಮೈ ಮೇಲೆ ಬರುವ, ದೆವ್ವ ಮೆಟ್ಟುವ ಪ್ರಸಂಗಗಳು ವರದಿಯಾಗುತ್ತಲೇ ಇದ್ದು, ಇದನ್ನು ಬಿಡಿಸುವ ನೆಪದಲ್ಲಿ ವ್ಯಕ್ತಿಗೆ ಚಿತ್ರಹಿಂಸೆ ನೀಡುವ ಒಂದು ಆಚರಣೆಯನ್ನೂ, ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾಣಬಹುದು. ಇಲ್ಲಿ ಸೂಕ್ಷ್ಮವಾಗಿ ಗಮನಿಸಬೇಕಾದ ಅಂಶವೆಂದರೆ, ದೇವರು ಮೈ ಮೇಲೆ ಬರುವುದನ್ನು ಮೇಲ್ಜಾತಿಯ ಪುರೋಹಿತಶಾಹಿಯಲ್ಲಿ ಕಾಣಲಾಗುವುದಿಲ್ಲ. ಅದೇ ತಳಸಮಾಜದಲ್ಲಿ ದೇವಿಗಳನ್ನು ಪೂಜಿಸುವ, ಜನಪದೀಯ ಆಚರಣೆಗಳನ್ನು ಆಚರಿಸುವವರ ನಡುವೆ ಕಾಣುತ್ತದೆ. ಮೂಲತಃ ಇದು ಒಂದು ಮಾನಸಿಕ ಸಮಸ್ಯೆಯಾಗಿದ್ದು, ಭಕ್ತಿ-ಆರಾಧನೆಯ ಪರಾಕಾಷ್ಟೆಯಲ್ಲಿ ಭಾವಾತಿರೇಕಕ್ಕೊಳಗಾಗುವವರಲ್ಲಿ ಇದು ಕಾಣಿಸಿಕೊಳ್ಳುತ್ತದೆ. ಗ್ರಾಮೀಣ ದೇವತೆಗಳನ್ನು ಪೂಜಿಸುವ-ಆರಾಧಿಸುವ ಜನರು ದೇವ-ದೇವತೆಗಳನ್ನು ಮೂರ್ತಿ ಸ್ಪರ್ಶದ ಮೂಲಕ ಕಲ್ಪಿಸಿಕೊಳ್ಳುತ್ತಾರೆ. ದೈವಗಳು ತಮ್ಮೊಡನೆಯೇ ಇರುವಂತೆ, ನಿಕಟ ಅವಿನಾಭಾವ ಸಂಬಂಧವನ್ನು ಕಲ್ಪಿಸಿಕೊಳ್ಳುತ್ತಾರೆ. ಹಾಗಾಗಿ ಆರಾಧನೆಯ ಭಾವೋನ್ಮಾದದ ಸಂದರ್ಭದಲ್ಲಿ ಈ ರೀತಿಯ ಪ್ರತಿಕ್ರಿಯೆಗಳು ಕಂಡುಬರುತ್ತವೆ. ಮೇಲ್ಜಾತಿಯ ದೇವಾಲಯಗಳಲ್ಲಿ ದೇವರನ್ನು ಮೂರ್ತಿಯ ರೂಪದಲ್ಲಿ ದೂರದಲ್ಲಿರಿಸಿ, ಪೂಜಿಸಲಾಗುತ್ತದೆ. ಸ್ಪರ್ಶಾನುಭವ ಹೆಚ್ಚಾಗಿರುವುದಿಲ್ಲ. ಹಾಗಾಗಿ ಈ ವ್ಯತ್ಯಯವನ್ನು ಕಾಣಬಹುದು.
ಮುಂದುವರೆಯುತ್ತದೆ ,,,,,,














