ಕಿವಿ ಕೇಳದ ಯುವಕನನ್ನು ಹೊಟೇಲ್ ರೂಂಗೆ ಕರೆಸಿ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದಲ್ಲಿ ಮಹಿಳೆ ಮತ್ತು ಆಕೆಯ ಜೊತೆಗಿರುವವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕಕ್ಕೆ ನಿರಾಕರಿಸಿದ ಕಾರಣ ಯುವಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ. ಈ ದಾಳಿಯಿಂದ ಯುವಕನೊಬ್ಬನ ಪಕ್ಕೆಲುಬು ಮುರಿದಿದೆ ಎಂದು ತಿಳಿದುಬಂದಿದೆ.

ಪೀಡಿತ ಯುವಕ ಕೊಲ್ಲಂ ನಿವಾಸಿಯಾಗಿದ್ದು, ಈ ಘಟನೆ ಹನಿ ಟ್ರ್ಯಾಪ್ ಯತ್ನದ ವೇಳೆ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಫೆಬ್ರವರಿ 22 ರಂದು ಸಂಜೆ ಸುಮಾರು 6.30ರ ಸುಮಾರಿಗೆ ಘಟನೆ ನಡೆದಿದೆ.ಪೊಲೀಸರ ಮಾಹಿತಿ ಪ್ರಕಾರ, ಯುವಕನನ್ನು ಕಡವನ್ತ್ರ ಜಂಕ್ಷನ್ ಸಮೀಪದ ಒಂದು ಹೊಟೇಲ್‌ಗೆ ಕರೆಸಿಕೊಳ್ಳಲಾಗಿತ್ತು. ಸಫ್ನಾ ಎಂಬ ಮಹಿಳೆ ಹಾಗೂ ಆಕೆಯ ಸಹಚರರು ಲೈಂಗಿಕ ಸಂಪರ್ಕಕ್ಕೆ ಬಲವಂತಪಡಿಸಿದ್ದು, ಯುವಕ ನಿರಾಕರಿಸಿದಾಗ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ದೂರಿನಂತೆ, ಯುವಕನ ಬಟ್ಟೆಗಳನ್ನು ಹರಿದು ಮುಖದ ಮೇಲೆ ಪದೇಪದೇ ಹೊಡೆದಿದ್ದಾರೆ. ಎರಡನೇ ಆರೋಪಿಯು ಟಾರ್ಚ್‌ನಿಂದ ಆತನ ಕೈಗೆ ಹೊಡೆದಿದ್ದಾನೆ ಎಂಬ ಆರೋಪವೂ ಇದೆ.

ಈ ಹಲ್ಲೆ ಅತ್ಯಂತ ಗಂಭೀರವಾಗಿದ್ದು, ಜೀವಾಪಾಯಕ್ಕೂ ಕಾರಣವಾಗಬಹುದಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎರಡನೇ ಮತ್ತು ಮೂರನೇ ಆರೋಪಿಗಳನ್ನು ಬಂಧಿಸಿದ್ದಾರೆ. ಮೊದಲ ಆರೋಪಿಯಾದ ಸಫ್ನಾ ಪರಾರಿಯಾಗಿದ್ದಳು.

ಈಗ ಪೊಲೀಸರು ಮಹಿಳೆಯೊಬ್ಬರನ್ನು ಸೇರಿಸಿ ನಾಲ್ವರನ್ನು ಬಂಧಿಸಿದ್ದಾರೆ.ಬಂಧಿತರನ್ನು ಉತ್ತರ ಪಾರಾವೂರು ನಿವಾಸಿ ಸಫ್ನಾ, ವೈಟಿಲ್ಲಾ ನಿವಾಸಿ ಜಾನ್ ರಾಹುಲ್, ಇರಂಪನಂ ನಿವಾಸಿ ಅಮಲ್ ಹಾಗೂ ಮರಡು ನಿವಾಸಿ ಆನಂದ ಎಂದು ಗುರುತಿಸಲಾಗಿದೆ. ಕೊಲ್ಲಂ ಜಿಲ್ಲೆಯ ನಲ್ಲಿಲಾ ಮೂಲದ 30 ವರ್ಷದ, ಕೇಳುವ ಮತ್ತು ಮಾತನಾಡುವ ಅಸಮರ್ಥತೆಯುಳ್ಳ ವ್ಯಕ್ತಿ ನೀಡಿದ ದೂರಿನ ಆಧಾರದ ಮೇಲೆ ಈ ಬಂಧನ ನಡೆದಿದೆ.

ಪೊಲೀಸರ ಪ್ರಕಾರ, ಮಂಗಳವಾರ ತಡರಾತ್ರಿ ಜಾನ್ ರಾಹುಲ್ ಮತ್ತು ಆನಂದ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಬುಧವಾರ ಬೆಳಗಿನ ಜಾವ ಮುಖ್ಯ ಆರೋಪಿಯಾದ ಸಫ್ನಾ ಹಾಗೂ ಮತ್ತೊಬ್ಬ ಸಹಚರ ಆನಂದರನ್ನು ಕಕ್ಕನಾಡ್ನ ಅಪಾರ್ಟ್‌ಮೆಂಟ್ ಒಂದರಲ್ಲಿ ಪತ್ತೆಹಚ್ಚಿ ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಐದನೇ ಆರೋಪಿಯಾದ ಕೊಚ್ಚಿ ನಿವಾಸಿ ಸಂಜು ಇನ್ನೂ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.

ಹೊಟೇಲ್‌ನ ಸಿಸಿಟಿವಿ ದೃಶ್ಯಗಳು ಹಾಗೂ ಸಫ್ನಾಳ ಫೋನ್ ದಾಖಲೆಗಳ ಆಧಾರದ ಮೇಲೆ ಎಲ್ಲಾ ಆರೋಪಿಗಳನ್ನು ಗುರುತಿಸಲಾಗಿದೆ.ಪೊಲೀಸರು ತಿಳಿಸಿದಂತೆ, ಈ ಗ್ಯಾಂಗ್‌ನ ಉದ್ದೇಶ ಸಂಪೂರ್ಣವಾಗಿ ಹಣ ಸುಲಿಗೆಯಾಗಿತ್ತು. ಸಫ್ನಾ ಇನ್‌ಸ್ಟಾಗ್ರಾಂ ಮೂಲಕ ಪೀಡಿತನೊಂದಿಗೆ ಪರಿಚಯ ಮಾಡಿಕೊಂಡು, ಚಾಟ್‌ಗಳ ಮೂಲಕ ಸ್ನೇಹ ಬೆಳೆಸಿದ್ದಾಳೆ. ನಂತರ ಭೇಟಿಯಾಗಲು ಯೋಜನೆ ರೂಪಿಸಲಾಗಿತ್ತು. ಪೀಡಿತ ವ್ಯಕ್ತಿ ಕಡಲತೀರದಲ್ಲಿ ಭೇಟಿಯಾಗಲು ಸೂಚಿಸಿದ್ದರೂ, ಫೆಬ್ರವರಿ 22ರಂದು ಪಣಂಪಿಲ್ಲಿ ನಗರದ ಸೌತ್ ಬ್ರಿಡ್ಜ್ ಸಮೀಪದ ಹೊಟೇಲ್‌ಗೆ ಬರಲು ಸಫ್ನಾ ಆಹ್ವಾನಿಸಿದ್ದಾಳೆ.
ಪೊಲೀಸರ ತನಿಖೆಯ ಪ್ರಕಾರ, ಈ “ಉರುಲು” (ಟ್ರ್ಯಾಪ್)ವನ್ನು ಗ್ಯಾಂಗ್ ಪೂರ್ವನಿಯೋಜಿತವಾಗಿ ರೂಪಿಸಿತ್ತು. ಸಂಜೆ ಸುಮಾರು 6.30ರ ಸುಮಾರಿಗೆ ಪೀಡಿತ ವ್ಯಕ್ತಿ ಹೊಟೇಲ್‌ಗೆ ಬಂದಾಗ, ಕೆಲವರು ಶೌಚಾಲಯದಲ್ಲಿ ಅಡಗಿಕೊಂಡಿದ್ದು, ಇನ್ನೂ ಕೆಲವರು ಹೊರಗಿನಿಂದ ನಂತರ ಆಗಮಿಸಿದ್ದರು.
ಸಫ್ನಾ ಜೊತೆಗೆ ಆತನನ್ನು ಅಶ್ಲೀಲ ಸ್ಥಿತಿಯಲ್ಲಿ ವೀಡಿಯೋಗೆ ಸೆರೆಹಿಡಿದು, ಅದನ್ನು ಬ್ಲ್ಯಾಕ್‌ಮೇಲ್‌ಗೆ ಬಳಸುವುದು ಗ್ಯಾಂಗ್‌ನ ಮುಖ್ಯ ಉದ್ದೇಶವಾಗಿತ್ತು. ಆದರೆ, ಬಟ್ಟೆ ತೆಗೆದು ಲೈಂಗಿಕ ಕ್ರಿಯೆಗೆ ತೊಡಗಲು ಪೀಡಿತ ವ್ಯಕ್ತಿ ಧೈರ್ಯವಾಗಿ ನಿರಾಕರಿಸಿದಾಗ ಪರಿಸ್ಥಿತಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.






