ಹೆಣ್ಣು ದನಿಗೆ ದನಿಯಾಗುವ ಸಾಹಿತ್ಯ ಹೂರಣ ಅದರ ಗರ್ಭದಲ್ಲಿರುವ ಕ್ಷೀಣ ದನಿಗಳನ್ನು ಸಮಾಜಕ್ಕೆ ಮರುಪರಿಚಯಿಸುವ ಸಾಹಿತ್ಯಿಕ ಕೃತಿ
“ ಹಾಸನ ಮಣ್ಣಿನ ಹೆಣ್ಣು ದನಿಗಳು ”
ನಾ ದಿವಾಕರ
ಭಾರತೀಯ ಸಮಾಜದಲ್ಲಿ ಪಿತೃಪ್ರಧಾನತೆಯ ಬೇರುಗಳು ಎಷ್ಟು ಆಳಕ್ಕಿಳಿದಿವೆ ಎಂದರೆ, ಅದನ್ನು ಅಲುಗಾಡಿಸಲೂ ಆಗದಂತೆ ಊಳಿಗಮಾನ್ಯ ಮನಸ್ಥಿತಿ ಮತ್ತು ಜಾತಿ ಶ್ರೇಣಿಯ ಮನೋಭಾವ ಪುರಾಣದ ಜಯವಿಜಯರಂತೆ ಎರಡೂ ಬದಿಯಲ್ಲಿ ಸ್ಥಾಪಿತವಾಗಿವೆ. ಮಹಿಳಾ ಸಾಧಕಿಯರನ್ನು ಗುರುತಿಸುವ ಒಂದು ಪ್ರವೃತ್ತಿ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಕ್ರಿಯಾಶೀಲವಾಗಿ ಕಾಣಬಹುದಾದರೂ, ಎಷ್ಟೋ ಮಹಿಳೆಯರು ತಮ್ಮ ಯಶೋಗಾಥೆಯನ್ನು ಎದೆಯೊಳಗೇ ಅದುಮಿಟ್ಟುಕೊಂಡು ಸಮಾಧಾನದಿಂದಿರುವುದು ಕಣ್ಣಿಗೆ ಕಾಣುವ ಸತ್ಯ. ತಳಸಮಾಜದ, ಗ್ರಾಮೀಣ ಬದುಕಿನ ಚಿತ್ರಣಗಳಲ್ಲಿ ಅನೇಕಾನೇಕ ಮಹಿಳೆಯರು ತಮ್ಮ ಬದುಕನ್ನೇ ವಿಶಾಲ ಸಮಾಜಕ್ಕೆ ಮಾರ್ಗದರ್ಶಿಯಾಗಿ ರೂಪಿಸಿಕೊಂಡ ನಿದರ್ಶನಗಳು ಹೇರಳವಾಗಿವೆ. ಇದನ್ನು ಗುರುತಿಸುವ ಪ್ರಯತ್ನಗಳು ನಡೆಯಬೇಕಷ್ಟೆ.
ಇಂತಹ ಸಂಶೋಧನೆಗಳು ನಡೆದಿಲ್ಲ ಎಂದು ಹೇಳಲಾಗುವುದಿಲ್ಲ. ಆದರೆ ಒಂದು ನಿರ್ದಿಷ್ಟ ಜಿಲ್ಲೆಯ ಇತಿಹಾಸವನ್ನು ಶೋಧಿಸಿ, ಆ ಭೂಪ್ರದೇಶದ ಉದ್ದಗಲಕ್ಕೂ ಅಡಗಿಕೊಂಡಿರಬಹುದಾದ, ಅಪ್ರತಿಮ ಸಾಧಕಿಯರನ್ನು ವರ್ತಮಾನದ ಸಮಾಜಕ್ಕೆ ಪರಿಚಯಿಸುವ ಕೆಲಸಗಳು ಬಹುಶಃ ನಡೆದೇ ಇಲ್ಲ ಎನ್ನಬಹುದು. ರಾಣಿ ಅಬ್ಬಕ್ಕ, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಮೊದಲಾದ ಚಾರಿತ್ರಿಕ ಮಹಿಳೆಯರನ್ನು ಇತಿಹಾಸದ ಪುಸ್ತಕಗಳು ಪರಿಚಯಿಸುತ್ತವೆ. ಆದರೆ ಚರಿತ್ರೆಯನ್ನು ದಾಖಲಿಸುವ ಪರಂಪರೆಗೆ ಒಳಗಾಗದ, ತೆರೆಮರೆಯಲ್ಲೇ ಬದುಕು ಸವೆಸುತ್ತಾ, ಇಂದಿಗೂ ನಮ್ಮ ನಡುವೆ ಇರುವ ಮತ್ತು ಈಗ ಇಲ್ಲವಾಗಿರುವ, ಅನೇಕ ಮಹಿಳೆಯರು ಭವಿಷ್ಯದ ಪೀಳಿಗೆಗೆ ಅಪರಿಚಿತರಾಗಿಯೇ ಉಳಿದುಬಿಡುತ್ತಾರೆ. “ಹೌದೇ, ಇಂತಹ ಉದಾತ್ತ ಮಹಿಳೆಯರೂ ನಮ್ಮಲ್ಲಿ ಇದ್ದರೇ?” ಎಂದು ಹುಬ್ಬೇರಿಸುವ ವರ್ತಮಾನದ ಲಕ್ಷಣವೇ ಭವಿಷ್ಯದಲ್ಲೂ ಉಳಿದುಬಿಡುತ್ತದೆ.
ಹೀಗಾಗಬಾರದು ಎಂಬ ಸದುದ್ದೇಶ ಮತ್ತು ಔದಾತ್ಯದಿಂದಲೇ ಮಹಿಳಾ ಹೋರಾಟಗಾರ್ತಿ, ಸಾಹಿತಿ, ಸಾಮಾಜಿಕ ಕಾರ್ಯಕರ್ತೆ ರೂಪ ಹಾಸನ ಮತ್ತು ಅವರ ತಂಡ ಅಪಾರ ಪರಿಶ್ರಮದಿಂದ ಹಾಸನ ಜಿಲ್ಲೆಯ, ನಮ್ಮ ನಡುವೆ ಇದ್ದೂ ಕೇಳರಿಯದ ಹಾಸನ ಜಿಲ್ಲೆಯ ಹೆಣ್ಣು ದನಿಗಳನ್ನು ದಾಖಲಿಸುವ ಒಂದು ಸಾಹಿತ್ಯಿಕ ಪ್ರಯತ್ನವನ್ನು ಮಾಡಿದ್ದಾರೆ. ಇದರ ಫಲಶ್ರುತಿಯೇ, ಮಾರ್ಚ್ 7 ಮತ್ತು 8ರಂದು ಹಾಸನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಬಿಡುಗಡೆಯಾದ ಕೃತಿ “ ಹಾಸನ ಮಣ್ಣಿನ ಹೆಣ್ಣು ದನಿಗಳು ”. ಎರಡು ವರ್ಷಗಳ ಹಿಂದೆ ನೋವು, ಆಂತರ್ಯದ ವೇದನೆ ಮತ್ತು ಘಾಸಿಗೊಂಡ ಹೃದಯದಿಂದ ಪುರುಷಾಧಿಪತ್ಯದ ವಿರುದ್ಧ ಹಾಸನದಲ್ಲಿ ಬೃಹತ್ ಪ್ರತಿರೋಧದ ಸಮಾವೇಶ ನಡೆಸಿದ್ದ ಮಹಿಳಾ ಸಮೂಹ, ಈ ವರ್ಷ ಆ ನೋವನ್ನು ಮರೆಯದಿದ್ದರೂ, ಮನಸ್ಸಿಗೆ ಮುದ ನೀಡುವ ʼಹೆಣ್ಣು ದನಿಗಳʼ ನಿನಾದಕ್ಕೆ ಕಿವಿಯಾಗಿದ್ದಾರೆ. Thanks to ರೂಪ ಹಾಸನ ಅವರ ತಂಡ ಮತ್ತು ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಸನ ಘಟಕ.
ಹೆಣ್ಣು ದನಿಯ ಆಳ-ವ್ಯಾಪ್ತಿ
ಹೆಣ್ಣನ್ನು ಪ್ರಕೃತಿಯ ಹಸಿರಿಗೆ ಹೋಲಿಸುವ ಪಾರಂಪರಿಕ ಅರಿವಿನೊಂದಿಗೆ ʼತಾಯಿ ಬೇರುಗಳುʼ ಮತ್ತು ʼಕಾಂಡಗಳುʼ ಎಂದು ಎರಡು ಭಾಗಗಳಲ್ಲಿ 66 ಬರಹಗಳನ್ನೊಳಗೊಂಡ ಈ ಸಾಹಿತ್ಯಿಕ ಗುಚ್ಛದಲ್ಲಿ ಹಾಸನ ಜಿಲ್ಲೆಯನ್ನು ಪ್ರತಿನಿಧಿಸುವ ಹೆಣ್ಣುಮಕ್ಕಳು, ಜಿಲ್ಲೆಯ ಹೆಸರನ್ನು ಚಿರಸ್ಥಾಯಿಗೊಳಿಸುವುದಷ್ಟೇ ಅಲ್ಲದೆ, ಸಾಮಾಜಿಕ ಬದ್ಧತೆ ಮತ್ತು ಸಂವೇದನಾಶೀಲತೆಯನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಅಂತರೀಕರಣಗೊಳಿಸಿಕೊಂಡು (Internalise )̧ ಭವಿಷ್ಯದ ಪೀಳಿಗೆಗೆ ಅಮೂಲ್ಯ ಪರಿಕರಗಳನ್ನು ಬಿಟ್ಟುಹೋಗಿರುವ ಯಶೋಗಾಥೆಯನ್ನು ಈ ಸಾಹಿತ್ಯಿಕ ವೃಕ್ಷದಲ್ಲಿ ಕಾಣಬಹುದು. ಎಲ್ಲ ಕಾಲಘಟ್ಟಗಳಲ್ಲೂ, ಎಲ್ಲ ಸ್ತರಗಳಲ್ಲೂ ಸಮಾಜವನ್ನು ಪ್ರಭಾವಿಸುವ ಮತ್ತು ಮಾನವೀಯ ಮೌಲ್ಯಗಳನ್ನು ಬಿತ್ತುವ ಮಹಿಳೆಯರನ್ನು ಗುರುತಿಸಿ, ಅವರ ಪರಿಚಯ ಮಾಡಿರುವ ಈ ಕೃತಿ ಒಂದು ಮಾದರಿಯಷ್ಟೇ ಅಲ್ಲ, ಮುನ್ನುಡಿಯಲ್ಲಿ ಬಾನು ಮುಷ್ತಾಕ್ ಅವರು ಹೇಳಿರುವಂತೆ “ಮುಂದಿನ ಪೀಳಿಗೆಯ ದಿಕ್ಸೂಚಿಯೂ ಹೌದು. ”
ಭಾರತದ ಸಾಂಪ್ರದಾಯಿಕ-ಪಿತೃಪ್ರಧಾನ ಸಮಾಜದಲ್ಲಿ ಮಹಿಳೆಯರ ಸಾಧನೆಗಳನ್ನು ವಿಶಾಲ ಜಗತ್ತಿಗೆ ಪರಿಚಯಿಸಲು ಸಾಂಸ್ಥಿಕ, ಸಾಂಘಿಕ ನೆಲೆಗಳು ಅತ್ಯವಶ್ಯ ಎನ್ನುವುದು ಕಟು ವಾಸ್ತವ. ಕೆಳಸ್ತರದ ಸಮಾಜದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಕಾಯಕ ಜೀವಿಗಳನ್ನು ಹೆಕ್ಕಿ ತೆಗೆದು ಪರಿಚಯಿಸುವ ನೈತಿಕ ಜವಾಬ್ದಾರಿಯನ್ನೂ ಮಹಿಳೆಯರೆ ಹೊತ್ತುಕೊಳ್ಳಬೇಕಾಗುತ್ತದೆ. ಏಕೆಂದರೆ ಸಾಹಿತ್ಯವನ್ನೂ ಒಳಗೊಂಡಂತೆ ಎಲ್ಲ ಸಂವಹನ ಸೇತುವೆಗಳನ್ನೂ ಪುರುಷಾಧಿಪತ್ಯದ ಸ್ತಂಭಗಳು ಆಕ್ರಮಿಸಿಕೊಂಡಿವೆ. ಈ ಹೆಕ್ಕಿ ತೆಗೆಯುವ ಕೆಲಸವನ್ನು ಈ ಸಂಪಾದಕ ಮಂಡಲಿ ಮಾಡಿದೆ. ಗಮನಾರ್ಹ ಸಂಗತಿ ಎಂದರೆ ʼಹಾಸನ ಜಿಲ್ಲೆಯ ಹೆಣ್ಣು ದನಿಗಳʼ ಬೇರುಗಳು ಇರುವಷ್ಟೇ ಸತ್ವಯುತವಾಗಿ ಕಾಂಡ-ಚಿಗುರುಗಳೂ ಇರುವುದು. ಎರಡರ ಸಮ್ಮಿಲನದ ಹೂರಣವನ್ನು ಈ 66 ಬರಹಗಳು ಒದಗಿಸುತ್ತವೆ
ಕೃತಿಯ ಹರವು-ವಿಸ್ತಾರ
ಬೇರುಗಳನ್ನು ಪರಿಚಯಿಸುವ ಆರಂಭದಲ್ಲೇ, ಕೌದಿ ಹೊಲಿಯುವ ಗಂಗೂಬಾಯಿ ದೇಸಾಯಿ ಅವರ ಕಥನ ಓದುಗರನ್ನು ನಿಬ್ಬೆರಗಾಗಿಸುತ್ತದೆ. ಅಳತೆ, ವಿನ್ಯಾಸ, ಗುಣಮಟ್ಟ ಮತ್ತು ಬಣ್ಣ ಇವೆಲ್ಲವನ್ನೂ ಮೇಳೈಸಿದಂತಿರುವ ಕೌದಿ ಹೊಲಿಯಲು ಬಳಕೆಯಾಗುವ ಜ್ಞಾನಶಾಖೆಗಳು ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ. ಪರಿಸರ ರಕ್ಷಣೆಯಲ್ಲಿ ಬಳಸಿದ ವಸ್ತುಗಳ ಮರುಬಳಕೆ (Re cycle-use) ಪ್ರಧಾನವಾದ ಒಂದು ಮಾರ್ಗ. ಕೌದಿ ಇದರ ಒಂದು ಪ್ರಾತ್ಯಕ್ಷಿಕೆ. ಬಾಲ್ಯದಿಂದಲೇ ನಡಿಗೆ ಮತ್ತು ಶಿಕ್ಷಣ ಎರಡರಿಂದಲೂ ವಂಚಿತರಾದ ಗಂಗೂಬಾಯಿ ಕೌದಿ ಹೊಲಿಯುವ ಕೌಶಲದಿಂದಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿರುವುದು ಇಡೀ ಶ್ರಮಜೀವಿ ವರ್ಗಕ್ಕೆ ಹೆಮ್ಮೆಯ ವಿಚಾರ.
ಚರಿತ್ರೆಯ ಅಧ್ಯಯನವನ್ನು ರಾಜಪ್ರಭುತ್ವಗಳ ಚೌಕಟ್ಟಿನಲ್ಲಿ ಬಂಧಿಸದೆ, ತಳಸಮಾಜದ ಸಾಮಾನ್ಯ ಜನರವರೆಗೂ ವಿಸ್ತರಿಸಿ ತಮ್ಮ ಸಂಶೋಧನೆಯನ್ನು ಜನಪದ ಲೋಕದವರೆಗೂ ಕೊಂಡೊಯ್ದ ವಸು ಮಳಲಿ ಬಹುಬೇಗನೆ, 48ನೆಯ ವಯಸ್ಸಿಗೇ ನಮ್ಮನ್ನಗಲಿದರೂ, ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸುವಂತಹ ಸಂಶೋಧನೆಗಳನ್ನು ಬಿಟ್ಟು ಹೋಗಿದ್ದಾರೆ. ಹಾಸನದ ಈ ಹೆಣ್ಣುಮಗಳ ಸಾಧನೆಯನ್ನು ದಾಖಲಿಸಿರುವುದು ಪ್ರಶಂಸನೀಯ. ಹಾಗೆಯೇ ಮೌಖಿಕ ಸಾಹಿತ್ಯ ಪರಂಪರೆಯನ್ನು ಡಿಜಿಟಲ್ ಯುಗದಲ್ಲೂ ಜೀವಂತವಾಗಿಟ್ಟಿರುವ ಸೋಬಾನೆ ಲಕ್ಕಮ್ಮ (ಅತ್ನಿ ಲಕ್ಕಮ್ಮ ಕೋಡಯ್ಯ) ತಮ್ಮ ಸೋಬಾನೆ ಪದಗಳ ಮೂಲಕವೇ ಜನಾನುರಾಗಿಯಾಗಿಯಾಗಿದ್ದಾರೆ. ಸರ್ಕಾರಿ ಸಂಸ್ಥೆಗಳಿಗೆ ಗೋಚರಿಸದ ಈ ಮಹಾನ್ ಪ್ರತಿಭೆ ಈ ಸಾಹಿತ್ಯ ವೃಕ್ಷದಲ್ಲಿ ಕಾಣುವುದು ಹೆಮ್ಮೆಯ ವಿಚಾರ.
ಸಮುದಾಯ ಮತ್ತು ಮಹಿಳೆ
ಈ ಡಿಜಿಟಲ್ ಯುಗದಲ್ಲೂ ತಮ್ಮ ಸಾಮಾಜಿಕ-ಸಾರ್ವಜನಿಕ ಪ್ರಾತಿನಿಧ್ಯಕ್ಕಾಗಿ ಹೋರಾಡುವ ಸ್ಥಿತಿಯಲ್ಲಿರುವ ಮಹಿಳಾ ಸಮುದಾಯ ಸದ್ದಿಲ್ಲದೆಯೇ ತನ್ನ ಕಾಯಕಗಳ ಮೂಲಕ ಕುಟುಂಬದ ನೆಲೆಯಿಂದ ವಿಶಾಲ ಸಮಾಜದವರೆಗೂ ಸಾಧನೆಗಳನ್ನು ಮಾಡಿರುತ್ತದೆ. ಆದರೆ ಪುರುಷಾಧಿಪತ್ಯ ಈ ಸಾಮುದಾಯಿಕ ಬೇರುಗಳನ್ನೇ ಮರೆತು ತನ್ನ ಆಧಿಪತ್ಯವನ್ನು ಸಾಧಿಸಿ ನಾಡೇ ತನ್ನದೆಂದು ಮೆರೆಯುತ್ತದೆ. ಇದಕ್ಕೆ ಹಾಸನ ಜಿಲ್ಲೆಗಿಂತಲೂ ಉತ್ತಮ ನಿದರ್ಶನ ಬೇಕಿಲ್ಲ. ಈ ಜಿಲ್ಲೆಗಳಲ್ಲಿ ಸಾಮುದಾಯಿಕ ʼಹೆಣ್ಣು ಬೇರುಗಳನ್ನುʼ ವಿವಿಧ ಕ್ಷೇತ್ರಗಳಲ್ಲಿ ಗುರುತಿಸುವುದು ನಮ್ಮ ನೈತಿಕ ಗುರಿಯಾಗಿರಬೇಕು. ಚರಿತ್ರೆ, ಕೃಷಿ ಮತ್ತು ದಲಿತ ಚಳವಳಿ, ಶಿಕ್ಷಣ, ಆರೋಗ್ಯ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಈ ಹೆಣ್ಣು ಬೇರುಗಳನ್ನು ಈ ಕೃತಿ ಶೋಧಿಸುತ್ತದೆ. (ಸಾಮುದಾಯಿಕ ಬೇರುಗಳು ).
ಕೃಷಿ ಮತ್ತು ಸಮೃದ್ಧ ಅರಣ್ಯ ಭೂಮಿಯಿಂದ ಸುತ್ತುವರೆದಿರುವ ಹಾಸನ ಜಿಲ್ಲೆಯ ರೈತ ಚಳವಳಿಗಳಲ್ಲಿ ಮಹಿಳೆಯರ ಹೆಜ್ಜೆ ಗುರುತುಗಳನ್ನು ಲೇಖಕಿ ಮಮತ ಶಿವು ಸಂಕ್ಷಿಪ್ತವಾಗಿಯಾದರೂ ಮನಮುಟ್ಟುವಂತೆ ಓದುಗರ ಮುಂದಿಟ್ಟಿದ್ದಾರೆ. ಈ ಲೇಖನದ “ತಲೆಯ ಮೇಲೆ ಕಸದ ಬುಟ್ಟಿ ಹೊತ್ತು ಮುಖದ ಮೇಲೆ ಸುರಿಯುವ ಗಂಜಲವನ್ನೂ ಲೆಕ್ಕಿಸದೆ ದುಡಿಯುವ ಹೆಣ್ಣುಮಗಳು ಈ ನೆಲದ ನಿಜವಾದ ಸಂಸ್ಕೃತಿಯ ವಾಹಕಿ” ಎಂಬ ಸಾಲುಗಳು ಇಡೀ ಕೃತಿಯ ಆಶಯವನ್ನು ವ್ಯಕ್ತಪಡಿಸುತ್ತದೆ. ದುರದೃಷ್ಟವಶಾತ್ ಈ ಜಿಲ್ಲೆಯೇ ಮಹಿಳಾ ದೌರ್ಜನ್ಯಗಳ ಕಾರಸ್ಥಾನವಾಗಿರುವುದೂ ವಾಸ್ತವ. ರೈತ-ಮಹಿಳಾ ಚಳವಳಿಗಳ ನಾಯಕತ್ವಗಳಲ್ಲಿ ಕಾಣಲಾಗದ ಹೆಣ್ಣು ದನಿ ಹೋರಾಟಗಳ ಗಟ್ಟಿದನಿಯಾಗಿರುವುದನ್ನು ಈ ಅಧ್ಯಾಯಗಳು ನಿರ್ದಿಷ್ಟ ವ್ಯಕ್ತಿಗಳ ಮುಖೇನ ಗುರುತಿಸುತ್ತದೆ.
ರಾಜಕೀಯ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಹೆಣ್ಣು ದನಿಗಳನ್ನು ಗುರುತಿಸುತ್ತಾ, ʼವೈದ್ಯಕೀಯ ಕ್ಷೇತ್ರಕ್ಕೆ ,,,,,ʼ ಲೇಖನದಲ್ಲಿ ಕೆ.ಬಿ.ಮನು ಬಹುಮುಖ್ಯವಾಗಿ ವೈದ್ಯರನ್ನೂ ಮೀರಿ ನಿಸ್ಪೃಹತೆಯಿಂದ, ನಿಸ್ವಾರ್ಥವಾಗಿ ಜನರ ಸೇವೆ ಸಲ್ಲಿಸುವ ಸಹಾಯಕ ಸಿಬ್ಬಂದಿ, ದಾದಿಯರು, ಪ್ರಸೂತಿ ಮತ್ತಿತರ ವಲಯಗಳಲ್ಲಲಿ ದುಡಿಯುವವರು ಮತ್ತು ಆಶಾ ಕಾರ್ಯಕರ್ತೆಯರನ್ನು ಗುರುತಿಸುವುದು (ಪುಟ 97) ಸಂವೇದನೆಯ ತಂತುಗಳನ್ನು ಮೀಟಿದಂತಾಗುತ್ತದೆ. ಕಾನೂನು ಕ್ಷೇತ್ರದಲ್ಲಿ ಈ ಜಿಲ್ಲೆಯನ್ನು ಅಧಿಕೃತವಾಗಿ ಪ್ರತಿನಿಧಿಸುವ 200ಕ್ಕೂ ಹೆಚ್ಚು ಮಹಿಳೆಯರು ಚಿರಸ್ಥಾಯಿಯಾಗಿ ಜನಮಾನಸದಲ್ಲಿ ಉಳಿಯುತ್ತಾರೆ. ಔದ್ಯಮಿಕ ವಲಯದಲ್ಲಿ ಹೆಣ್ಣು ಮಕ್ಕಳ ದುಡಿಮೆ ಕಾಲಾನುಕಾಲದಿಂದ ದಾಖಲಾಗುತ್ತಾ ಬಂದಿದ್ದರೂ, ಉದ್ಯಮಿಗಳಾಗಿ ಬೆಳೆದು ಜಿಲ್ಲೆಯ, ನಾಡಿನ ಕೀರ್ತಿ ಬೆಳಗಿದ ಹೆಣ್ಣು ದನಿಗಳು ಮನಸೆಳೆಯುತ್ತವೆ.
ಕರ್ನಾಟಕದ ಮೊಟ್ಟಮೊದಲ ಉದ್ಯಮಿ-ಕಾಫಿ ಉದ್ಯಮವನ್ನು ಜಿಲ್ಲೆಯ ಹೊರಗೂ ವಿಸ್ತರಿಸಿದ್ದ ಕೊಡಗಿನ ಸಾಕಮ್ಮ (ಕಾಫಿ ವರ್ಕ್ಸ್) ಅವರ ಬಗ್ಗೆ ಒಂದು ಕಿರುಹೊತ್ತಿಗೆಯೂ ಲಭ್ಯವಿಲ್ಲ ಎಂಬ ವಿಷಾದದೊಂದಿಗೆ ಈ ಕೃತಿಯನ್ನು ಓದುತ್ತಿದ್ದಾಗ ʼಪ್ರಯೋಗಶೀಲ ಮಲೆನಾಡಿನ ಮಹಿಳೆಯರು ʼ (ಪುಟ 131) ಅಧ್ಯಾಯ ತುಸು ಸಮಾಧಾನ ನೀಡುತ್ತದೆ. ಕಾರ್ಗೋಡ್ ಕುಟುಂಬದ ಯಶೋಗಾಥೆಯ ಪರಿಣಾಮ ಇಂದು ಹಾಸನ ಜಿಲ್ಲೆ ʼವುಮೆನ್ ಕಾಫಿ ಪ್ರಮೋಷನ್ ಕೌನ್ಸಿಲ್ (ರಿ)ʼ ಎಂಬ 200 ಸದಸ್ಯರ ಸಂಸ್ಥೆಯ ಕೇಂದ್ರವಾಗಿರುವುದು, ಮಹಿಳೆಯರ ಔದ್ಯಮಿಕ ಕ್ಷಮತೆ ಮತ್ತು ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯುತ್ತದೆ. ಸಾಹಿತ್ಯ, ಸಂಗೀತ ಮತ್ತು ನಾಟ್ಯಕಲೆಯಲ್ಲಿ ಜಿಲ್ಲೆಯ ಮೇರು ವ್ಯಕ್ತಿಗಳ ಪರಿಚಯ ಬಹುತೇಕ ಸ್ಥಳೀಯ ವಿಶ್ವಕೋಶದಂತೆ ದಾಖಲಾಗಿದೆ. ಈ ಎಲ್ಲ ಲೇಖಕರೂ ಅಭಿನಂದನಾರ್ಹರು.
ಆಧುನಿಕ ನಗರ ಜೀವನದಲ್ಲಿ ಅಪರೂಪವಾಗಿ ಕಂಡರೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಅಸ್ತಿತ್ವ ಮತ್ತು ಸೌಂದರ್ಯವನ್ನು ಉಳಿಸಿಕೊಂಡಿರುವ ಗಮಕ ಕಲೆ ಅಥವಾ ಕಾವ್ಯವಾಚನ ಕಲೆಯಲ್ಲಿ ಹಾಸನದ ಮೇರು ಸಾಧಕರನ್ನು ಪರಿಚಯಿಸುವ ಅಧ್ಯಾಯ ʼಜಿಲ್ಲೆಯ ಗಮಕ ಲೋಕದ ತಾರೆಯರುʼ ಗಮನ ಸೆಳೆಯುತ್ತದೆ. ಹಾಗೆಯೇ ಗಮನ ಸೆಳೆವ ಮತ್ತೊಂದು ಬರಹ ʼರಂಗಕಲಾವಿದೆಯರಿಂದ .,,,,,,ʼ ರಂಗಭೂಮಿ ಜೀವಂತ ದೃಶ್ಯಕಲೆಯಷ್ಟೇ ಅಲ್ಲ, ವರ್ತಮಾನದ ಸಾಮಾಜಿಕ ವ್ಯಸನಗಳಿಗೆ, ವ್ಯಾಧಿಗಳಿಗೆ ಮುಲಾಮು ಹಚ್ಚುವ ಚಿಕಿತ್ಸಕ ಗುಣ ಇರುವ ಒಂದು ಕ್ಷೇತ್ರ ಎಂದರೆ ರಂಗಭೂಮಿ. ಈ ಕ್ಷೇತ್ರದಲ್ಲಿ ಹಾಸನದ ಹೆಣ್ಣು ದನಿಗಳನ್ನು ಪರಿಚಯಿಸಲಾಗಿದೆ. “ಹಲವು ನದಿಗಳು ಸೇರಿ ಸಾಗರವಾಗುವಂತೆ ಎಲ್ಲಾ ಕಲಾವಿದೆಯರು ಸೇರಿ ಕಲೆಯ ಅಲೆಯನ್ನು ಇನ್ನಷ್ಟು ಎತ್ತರಕ್ಕೆ ವಿಸ್ತಾರಕ್ಕೆ ಏರಿಸಬೇಕಿದೆ” ಎಂಬ ಲೇಖಕಿಯ ಸಾಲುಗಳು (ಪುಟ 159) ಜಿಲ್ಲೆಯ ಹೆಣ್ಣಿನ ದನಿಯನ್ನು ಮತ್ತಷ್ಟು ಶಿಖರಕ್ಕೇರಿಸುತ್ತವೆ.
ಸಂಘಟನೆ-ಹೋರಾಟ ಪ್ರಾತಿನಿಧ್ಯ
ಸಾಮಾನ್ಯವಾಗಿ ಭಾರತದ ಸಾಮಾಜಿಕ ಹೋರಾಟಗಳನ್ನು ಗಮನಿಸಿದಾಗ, ಮಹಿಳಾ ಆಂದೋಲನಗಳನ್ನು ಹೊರತುಪಡಿಸಿದರೆ, ಉಳಿದೆಲ್ಲಾ ಸಾಂಘಿಕ ಹೋರಾಟಗಳಲ್ಲೂ ಪುರುಷಾಧಿಪತ್ಯವೇ ಪ್ರಧಾನವಾಗಿರುತ್ತದೆ. ಆಶಾ, ಅಂಗನವಾಡಿ, ಪೌರ ಕಾರ್ಮಿಕ ಹೋರಾಟಗಳಲ್ಲಿ ಸಂಖ್ಯೆಯಲ್ಲಿ ಮಹಿಳೆಯರೇ ಹೆಚ್ಚಾಗಿದ್ದರೂ, ಮೇಲ್ಮಟ್ಟದ ನಾಯಕತ್ವ ಬಹುತೇಕ ಸಂದರ್ಭಗಳಲ್ಲಿ ಪುರುಷ ಕೇಂದ್ರಿತವಾಗಿರುತ್ತದೆ. ದಲಿತ, ರೈತ ಹೋರಾಟಗಳಲ್ಲೂ ಇದೇ ಮಾದರಿಯನ್ನು ಕಾಣಬಹುದು. ಈ ಸಿದ್ಧಮಾದರಿಯನ್ನು ಭೇದಿಸುವ ಪ್ರಯತ್ನಗಳು ನಡೆದಿಲ್ಲ ಎಂದೇನಿಲ್ಲ, ಅಂತಹ ಕೆಲವು ಸಂಘಟನೆ-ಹೋರಾಟ-ಸಮಾಜಸೇವೆಯ ಕ್ಷೇತ್ರದಲ್ಲಿ ಹಾಸನದ ಹೆಣ್ಣು ದನಿಗಳನ್ನು ಐದು ಲೇಖನಗಳಲ್ಲಿ ದಾಖಲಿಸಿರುವುದು ಸ್ತುತ್ಯಾರ್ಹ.
‘ಪೌರ ಕಾರ್ಮಿಕ ಮಹಿಳೆಯರಿಗೆ,,,,, ʼ ಲೇಖನದಲ್ಲಿ ಕೆಲವು ಮಹಿಳೆಯರ ಮನದಾಳದ ವೇದನೆಯ ಮಾತುಗಳನ್ನು ಲೇಖಕಿ ದಾಖಲಿಸಿದ್ದಾರೆ. (ಪುಟ 167-168). ಈ ನೋವಿನ ದನಿಗಳು ಎಂತಹ ನಿರ್ದಯಿ ಹೃದಯವನ್ನೇ ಕಲಕಿಬಿಡುತ್ತದೆ. ಈ ಮಾತುಗಳ ಹೊರತಾಗಿ ಲೇಖಕಿ ಸಿ.ಸುವರ್ಣ ಕೆ.ಟಿ. ಶಿವಪ್ರಸಾದ್ ಅವರು ಹೇಳುವ “ಸಮಸ್ಯೆ ಪೌರ ಕಾರ್ಮಿಕ ವೃತ್ತಿಯದ್ದಲ್ಲ ನಾಗರಿಕ, ಆಧುನಿಕ ಎಂದು ಹೇಳಿಕೊಳ್ಳುವ ಮನಸ್ಥಿತಿಯದ್ದು!” ಎಂಬ ಮಾತುಗಳು ಎಲ್ಲರ ಪ್ರಜ್ಞೆಯನ್ನೂ ಬಡಿದೆಬ್ಬಿಸಬೇಕಿದೆ. ಅಂಗನವಾಡಿ ಮಹಿಳೆಯರ ಹೋರಾಟಕ್ಕೆ ದೀರ್ಘ ಚರಿತ್ರೆ ಇದೆ. ಯಶಸ್ಸಿನ ಕಥನಗಳೂ ಇವೆ. ಆದಾಗ್ಯೂ ಸಮಸ್ಯೆಗಳು ಪೂರ್ತಿಯಾಗಿ ಬಗೆಹರಿದಿಲ್ಲ. “ನಮ್ಮ ಮೇಲಾಗುತ್ತಿದ್ದ ದಬ್ಬಾಳಿಕೆ ದೌರ್ಜನ್ಯಗಳನ್ನು ತಡೆಯಲು ಸಂಘಟನೆಯಿಂದ ಮಾತ್ರ ಸಾಧ್ಯ ” ,(ಪುಟ 173) ಇಂದ್ರಮ್ಮ ಎಂಬ ಕಾರ್ಯಕರ್ತೆಯ ಮಾತುಗಳು ಸಂಘಟನೆಯ ಬಲವನ್ನು ದೃಢೀಕರಿಸುತ್ತದೆ.
ಆಶಾ ಕಾರ್ಯಕರ್ತೆಯರ ಸುದೀರ್ಘ ಹೋರಾಟ ಮತ್ತು ಅಲ್ಪ ಫಲಶ್ರುತಿಗಳನ್ನು ದಾಖಲಿಸಿರುವ ಡಿ.ನಾಗಲಕ್ಷ್ಮಿಅವರು “ಜಿಲ್ಲೆಯ ಫಲವತ್ತತೆಗೆ ಆಶಾ ತಾಯಂದಿರ ಕೊಡುಗೆ” ಎಂಬ ಶೀರ್ಷಿಕೆಯಲ್ಲೇ ಎಲ್ಲವನ್ನೂ ಹೇಳಿಬಿಟ್ಟಿದ್ದಾರೆ. ಕೋವಿದ್ ಸಂಕಟಗಳ ಸಮಯದಲ್ಲಿ ತಮ್ಮ ದುಡಿಮೆ ಮತ್ತು ಪರಿಶ್ರಮಕ್ಕೆ ಪ್ರತಿಯಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ʼಜಾಗತಿಕ ಆರೋಗ್ಯ ನಾಯಕರುʼ ಎಂಬ ಬಿರುದು ಗಳಿಸಿದ ಈ ಶ್ರಮಜೀವಿಗಳು ಸಮಾಜದ ಕಣ್ಣಿಗೆ ನೇರವಾಗಿ ಕಾಣುವ ಶೋಷಿತ ವರ್ಗಗಳಲ್ಲಿ ಒಂದು. ಬಿಸಿಯೂಟ ಕಾರ್ಮಿಕರು ಆರ್ಥಿಕ ದೌರ್ಜನ್ಯದ ಜೊತೆಗೆ ಜಾತಿ ದೌರ್ಜನ್ಯವನ್ನೂ ಎದುರಿಸುತ್ತಿರುವುದು ನಾಗರಿಕತೆಯ ದೃಷ್ಟಿಯಿಂದ ತಲೆತಗ್ಗಿಸುವ ವಿಚಾರ.
ಸಾಂಸ್ಥಿಕ ಬೇರುಗಳ ಶೋಧದಲ್ಲಿ 90 ವರ್ಷಗಳ ಇತಿಹಾಸ ಇರುವ ʼಕೆಂಪು ಚೆಲುವಾಜಮ್ಮಣ್ಣಿʼ ಸಮಾಜದ ಬೆಳವಣಿಗೆ ಮತ್ತು ಸಾಧನೆಗಳು ಸಮಕಾಲೀನ ಸಂಸ್ಥೆಗಳಿಗೆ ಮಾರ್ಗದರ್ಶಿಯಾಗಿ ಕಾಣುತ್ತದೆ. ನಿಸ್ಪೃಹ ನಿಸ್ವಾರ್ಥ ಸಮಾಜ ಸೇವೆಗೆ ವೈಯುಕ್ತಿಕ ಪ್ರತಿಫಲಾಕಾಂಕ್ಷೆಗಳೇ ತೊಡಕಾಗುತ್ತವೆ. ಈ ತೊಡಕುಗಳಿಲ್ಲದೆ ಬೆಳೆದಿರುವ ಇಂತಹ ಸಂಸ್ಥೆಗಳು ಅನುಕರಣೀಯವಾದವು. ಇದೇ ಮಾದರಿಯ ಮತ್ತೊಂದು ಸಂಸ್ಥೆ ಅರಸೀಕೆರೆಯ ಕಸ್ತೂರ ಬಾ ರಾಷ್ಟ್ರೀಯ ಸ್ಮಾರಕ ಟ್ರಸ್ಟ್. ಟ್ರಸ್ಟ್ ಎನ್ನುವುದಕ್ಕೆ ಸಂವಾದಿ ಕನ್ನಡ ಪದ ವಿಶ್ವಾಸ. ಯಾವುದೇ ಟ್ರಸ್ಟ್ ನಡೆಸುವ ಮಂದಿಯಲ್ಲಿ ಇರುವ ಪರಸ್ಪರ ವಿಶ್ವಾಸವೇ ಬಂಡವಾಳವಾಗುತ್ತದೆ. ಆಗಲೇ ಆ ಸಂಸ್ಥೆ ಪ್ರಜಾಸತ್ತಾತ್ಮಕ ದಾರಿಯಲ್ಲಿ ಸಾಗುತ್ತದೆ. ಕಸ್ತೂರಬಾ ಒಂದು ನಿದರ್ಶನ.

ಒಂದೇ ವೃಕ್ಷದ ವೈವಿಧ್ಯಮಯ ಕಾಂಡಗಳು
ಕಾಂಡಗಳು-ಚಿಗುರು ಮತ್ತು ರೆಂಬೆ ಕೊಂಬೆಗಳು, ಈ ಭಾಗದಲ್ಲಿನ ಲೇಖನಗಳು ತೆರೆಮರೆಗೆ ಸರಿದಿರುವ ಮತ್ತು ಈಗಲೂ ನಮ್ಮ ನಡುವೆ ಕ್ರಿಯಾಶೀಲವಾಗಿರುವ ಹಲವು ಮಹಿಳೆಯರನ್ನು ಸಾಹಿತ್ಯ, ಕಲೆ, ವಿಜ್ಞಾನ, ಅರ್ಥಶಾಸ್ತ್ರ, ಮಾಧ್ಯಮ ಮತ್ತಿತರ ಕ್ಷೇತ್ರಗಳಿಂದ ಪರಿಚಯಿಸುತ್ತದೆ. ಇದು ವರ್ತಮಾನಕ್ಕೆ ಅತ್ಯಗತ್ಯವಾದ ಒಂದು ಕೊಡುಗೆ ಏಕೆಂದರೆ, ನಮ್ಮ ಸಮಾಜ ಮೂಲತಃ ಗುರುತಿಸುವುದು ಸಾಮಾಜಿಕವಾಗಿ-ಸಾಂಸ್ಕೃತಿಕವಾಗಿ ಉಪ್ಪರಿಗೆಯಲ್ಲಿ ಕುಳಿತವರನ್ನೇ ಹೊರತು, ನೆಲದ ಮೇಲೆ ನಡೆದಾಡುವವರನ್ನಲ್ಲ. ಮಹಿಳೆ ಎಂದರೆ ಈ ಸೂತ್ರ ಇನ್ನೂ ಬಿಗಿಯಾಗಿಬಿಡುತ್ತದೆ. ಉದಾಹರಣೆಗೆ ʼಅರ್ಥಶಾಸ್ತ್ರಜ್ಞೆ ಐರನ್ ಲೇಡಿ ಸುಶೀಲಾ ಸುಬ್ರಹ್ಮಣ್ಯʼ ಲೇಖನದಲ್ಲಿ ಪರಿಚಯಿಸಲಾಗಿರುವ ಮೇರು ವ್ಯಕ್ತಿತ್ವ. ಓದುವವರ ಸಂಖ್ಯೆ ಕಡಿಮೆಯಾಗಿದೆ ಎಂಬ ಅರೆ ಮಿಥ್ಯೆಯ ನಡುವೆಯೂ, ಡಿಜಿಟಲ್ ಯುಗದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಂದು ಮುದ್ರಿತ ಪ್ರಾಕ್ಷಿಕ ʼಸದರ್ನ್ ಎಕಾಮಿಸ್ಟ್ʼ ಚಾಲ್ತಿಯಲ್ಲಿರುವುದು, 65 ವಸಂತಗಳನ್ನು ಪೂರೈಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಈ ಸಾಹಸದ ಕರ್ತೃ ಒಬ್ಬ ಮಹಿಳೆ ಎನ್ನುವುದು ಹಾಸನ ಜಿಲ್ಲೆಗಷ್ಟೇ ಅಲ್ಲ ಕರ್ನಾಟಕಕ್ಕೇ ಹೆಮ್ಮೆ ತರುವ ವಿಚಾರ. ಮುದ್ರಣ ಮಾಧ್ಯಮ ಲೋಕದಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ, ಅರ್ಥಶಾಸ್ತ್ರಕ್ಕೆ ಸೀಮಿತವಾದ ಒಂದು ಪತ್ರಿಕೆಯನ್ನು ಪ್ರಕಟಿವುದು ಸುಲಭವೇನಲ್ಲ. ಶ್ರೀಮತಿ ಸುಶೀಲಾ ಮತ್ತು ಈಗ ಇಲ್ಲವಾಗಿರುವ ಅವರ ಪತಿಯ ಯಶಸ್ವಿ ಪಯಣಕ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಈ ಯಶೋಗಾಥೆ ಹಲವರಿಗೆ ಸ್ಫೂರ್ತಿದಾಯಕವಾಗಬಹುದು. ಗಾದೆ ಹೊಸೆಯುವ ಪುಟ್ಟತಾಯಕ್ಕ, ತೊಗಲುಗೊಂಬೆ ಕಲಾವಿದೆ ದಾಕ್ಷಾಯಿಣಿ, ತಮ್ಮನ್ನು ಕೃಷಿ ವಿದ್ಯಾರ್ಥಿನಿ ಎಂದು ಹೇಳುತ್ತಲೇ ಸಾಧನೆಗಳ ಶಿಖರ ಏರಿರುವ ಹೇಮಾ ಅನಂತ್ ಅವರ ಯಶೋಗಾಥೆಗಳು ಭವಿಷ್ಯದ ಪೀಳಿಗೆಯನ್ನು ಹೊಸ ಲೋಕಕ್ಕೆ ಕರೆದೊಯ್ಯುವ ದಿಕ್ಸೂಚಿಗಳಂತಿವೆ.
ಸಾಹಿತ್ಯ ಕೃಷಿಯ ಅನುಕರಣೀಯ ಮಾದರಿ
ಲೇಖಕಿ ರೂಪ ಹಾಸನ ಅವರ ಸಂಪಾದಕತ್ವದಲ್ಲಿ, ಆರ್.ಪಿ.ವೆಂಕಟೇಶ ಮೂರ್ತಿ, ಲೀಲಾವತಿ ಮತ್ತು ಅಹಮದ್ ಹಗರೆ ಅವರ ಸಹಕಾರದೊಂದಿಗೆ ಹೊರತಂದಿರುವ ʼಹಾಸನ ಮಣ್ಣಿನ ಹೆಣ್ಣು ದನಿಗಳುʼ ವಿಶ್ವವಿದ್ಯಾಲಯದ ಪಠ್ಯಕ್ರಮಕ್ಕೆ ಸೇರಲೇಬೇಕಾದ ಕೃತಿ. ಅಷ್ಟೇ ಅಲ್ಲ ಕರ್ನಾಟಕದ 29 ಜಿಲ್ಲೆಗಳಲ್ಲೂ ಗುರುತಿಸಬಹುದಾದ ಮಹಿಳಾ ಚೇತನಗಳನ್ನು, ವಿದ್ವಾಂಸರನ್ನು, ಪ್ರತಿಭೆಗಳನ್ನು ಚರಿತ್ರೆಯಿಂದ, ವರ್ತಮಾನದ ಸಮಾಜದಿಂದ ಹೆಕ್ಕಿ ತೆಗೆದು, ಅವರ ಯಶೋಗಾಥೆಗಳನ್ನು ದಾಖಲಿಸುವ ಒಮದು ಸಾಹಿತ್ಯಿಕ ಮಾದರಿಯನ್ನು ರೂಪ ಹಾಸನ ಮತ್ತು ಅವರ ತಂಡ ಕರ್ನಾಟಕಕ್ಕೆ ಉಡುಗೊರೆಯಾಗಿ ನೀಡಿದೆ. ಇದು ಮೌಖಿಕ ಸಾಹಿತ್ಯದ ಯುಗ ಅಲ್ಲ, ಲಿಖಿತ ಸಾಹಿತ್ಯದ ಡಿಜಿಟಲೀಕರಣದ ಯುಗ. ಭವಿಷ್ಯದ ಪೀಳಿಗೆಯ ಜ್ಞಾನ ಭಂಡಾರವನ್ನು ಅಲಂಕರಿಸಬೇಕಾದರೆ ಇಂತಹ ಅಮೂಲ್ಯ ಕಥನಗಳು ಡಿಜಿಟಲೀಕರಣಗೊಳ್ಳಬೇಕು.

ಈ ಕೃತಿಯಲ್ಲಿ ಬಿಟ್ಟುಹೋಗಿರಬಹುದಾದ ಹಲವರು ಇರಬಹುದು. ಅಂದರೆ ನಮ್ಮ ಸಮಾಜ ಇನ್ನೂ ಶೋಧಿಸುವ ಆಲೋಚನೆ ಮಾಡದೆ ಇರಬಹುದು. ಹೆಣ್ಣು ದನಿಗಳನ್ನು ಹೆಣ್ಣು ಮಕ್ಕಳೇ ಗುರುತಿಸಿ ಸಮಾಜದ ಮುಂದೆ ಪ್ರಸ್ತುತಪಡಿಸಬೇಕು ಎಂಬ ನಿಯಮವೇನೂ ಇಲ್ಲ ಆದರೆ ಪಿತೃಪ್ರಧಾನ ವ್ಯವಸ್ಥೆ ಮತ್ತು ಎಲ್ಲ ವಲಯಗಳಲ್ಲಿ ಬೇರೂರಿರುವ (Entrenched) ಪುರುಷಾಳ್ವಿಕೆಯ ನಡುವೆ ಇದೇ ನಿಯಮವೇನೋ ಎನಿಸಿದರೆ ಅಚ್ಚರಿಪಡಬೇಕಿಲ್ಲ. ಹಾಸನ ಜಿಲ್ಲಾ-ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಇದನ್ನು ಭೇದಿಸಿ ಇಂತಹ ಒಂದು ಅಮೂಲ್ಯ ಕೃತಿಯನ್ನು ಹೊರತರಲು ಶ್ರಮಿಸಿರುವುದು ಅಭಿನಂದನಾರ್ಹ.
ಪ್ರಾತಿನಿಧ್ಯಕ್ಕಾಗಿ ಹೋರಾಡಬೇಕಾದ ಹೆಣ್ಣು ದನಿಗೆ ಅಕ್ಷರ ಲೋಕದಲ್ಲಿ ಯಾವುದೇ ನಿರ್ಬಂಧಗಳಿರುವುದಿಲ್ಲ. ಇಲ್ಲಿ ನಾವು ಕಾಣುವ ಪ್ರಾತಿನಿಧಿಕ ಮೌಲ್ಯ ಶತಮಾನಗಳ ಕಾಲ ತನ್ನ ಮೌಲ್ಯವನ್ನು ಉಳಿಸಿಕೊಂಡಿರುತ್ತದೆ. ಹಾಗೆಯೇ ಈ ಅಕ್ಷರ ಕೃಷಿಯಲ್ಲಿ ದಾಖಲಾಗಿರುವ ವಿದ್ವತ್ ಪಡೆ, ಹೋರಾಟಗಾರರ ತಂಡಗಳು ಹಾಗೂ ಬೌದ್ಧಿಕ ಸಂಪತ್ತು ನಮ್ಮ ಸಮಾಜದ ಸ್ಥಿರಾಸ್ತಿಯಾಗಿ ಮುಂದಿನ ಹಲವು ಪೀಳಿಗೆಗಳಿಗೆ ಮಾರ್ಗದರ್ಶಿ ಸೂತ್ರಗಳಾಗಿ ಪರಿಣಮಿಸುತ್ತವೆ. ಈ ಅನುಕರಣೀಯ ಮಾದರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ರೂಪುಗೊಂಡರೆ, ಕರ್ನಾಟಕದ ಹೆಣ್ಣು ಮಕ್ಕಳ ದನಿ ಇನ್ನೂ ಗಟ್ಟಿಯಾಗಿ ಕೇಳಿಸುವಂತಾಗುತ್ತದೆ.
ಸಂಪಾದಕ ಮಂಡಲಿ ಮತ್ತು ಪ್ರಧಾನ ಸಂಪಾದಕಿ ರೂಪ ಹಾಸನ ಅವರ ಅಪಾರ ಪರಿಶ್ರಮ, ಬದ್ಧತೆ, ಕ್ಷಮತೆ ಮತ್ತು ದಕ್ಷತೆ ಈ ಕೃತಿಯ ಎಲ್ಲ ಲೇಖಕರಿಗೂ ನ್ಯಾಯ ಒದಗಿಸಿರುವುದು ಮೆಚ್ಚುವಂತಹ ಅಂಶ. ಕಡಿಮೆ ಸಮಯದಲ್ಲಿ ಹೆಚ್ಚು ಮಾಹಿತಿ ಸಂಗ್ರಹ ಮಾಡಿ, ಪುಟಮಿತಿ/ಪದಮಿತಿಗಳ ನಿರ್ಬಂಧಗಳನ್ನು ಗೌರವಿಸಿ, ಬರಹಗಳನ್ನು ಒದಗಿಸಿರುವ ಎಲ್ಲ ಲೇಖಕ/ಲೇಖಕಿಯರೂ ಅಭಿನಂದನಾರ್ಹರು.
-೦-೦-೦-೦-೦-





