ಮೈಸೂರು : ರಾಜ ವಂಶಸ್ಥರ ಶರನ್ನವರಾತ್ರಿಯ ಪೂಜಾ ಕೈಂಕರ್ಯಕ್ಕೆ ಪೂರ್ವಭಾವಿಯಾಗಿ ಅರಮನೆಯ ಅಂಬಾವಿಲಾಸ ದರ್ಬಾರ್ ಹಾಲ್ನಲ್ಲಿ ರತ್ನ ಖಚಿತ ಸಿಂಹಾಸನವನ್ನು ಬೆಳಗ್ಗೆ 10:05 ರಿಂದ 10:35ರ ಶುಭ ಲಗ್ನದಲ್ಲಿ ನುರಿತ ಅರಮನೆಯ ಕೆಲಸಗಾರರಿಂದ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ನೇತೃತ್ವದಲ್ಲಿ ಜೋಡಣೆ ಮಾಡಲಾಯಿತು.
ಅಕ್ಟೋಬರ್ 15 ರಿಂದ ಅಕ್ಟೋಬರ್ 24ರ ವರೆಗೆ ಅರಮನೆಯಲ್ಲಿ ರಾಜ ಪರಂಪರೆಯಂತೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಶರನ್ನವರಾತ್ರಿಯ ಪೂಜಾ ಕೈಂಕರ್ಯಗಳನ್ನ ರಾಜ ಪರಂಪರೆಯಂತೆ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶುಭ ಲಗ್ನದಲ್ಲಿ ಸಿಂಹಾಸನವನ್ನು ಅರಮನೆಯ ಅಂಬಾ ವಿಲಾಸ ದರ್ಬಾರ್ ಹಾಲ್ನಲ್ಲಿ ಜೋಡಿಸಲಾಯಿತು.

ಅದಕ್ಕೂ ಮುನ್ನ ಅರಮನೆಯ ಸ್ಟ್ರಾಂಗ್ ರೂಂನಲ್ಲಿ ಬಿಡಿಭಾಗಗಳಾಗಿ ಭದ್ರತಾ ಕೊಠಡಿಯಲ್ಲಿದ್ದ ಸಿಂಹಾಸನವನ್ನು ರಾಜಮಾತೆ ಪ್ರಮೋದಾ ದೇವಿ ಹಾಗೂ ಅರಮನೆಯ ಭದ್ರತಾ ಅಧಿಕಾರಿಗಳ ಸಮ್ಮುಖದಲ್ಲಿ ಸೀಲ್ ಮಾಡಿದ ಬಾಗಿಲನ್ನು ತೆರೆದು ಸಿಂಹಾಸನದ ಭಾಗಗಳನ್ನು ದರ್ಬಾರ್ ಹಾಲ್ಗೆ ತಂದರು. ಅಲ್ಲಿ ಸಿಂಹಾಸನ ಜೋಡಣೆಯನ್ನು ಅರಮನೆಯ ಸಿಬ್ಬಂದಿ ಹಾಗೂ ಪುರಾತನ ಕಾಲದಿಂದ ಸಿಂಹಾಸನ ಜೋಡಣೆ ಕೆಲಸವನ್ನು ಮಾಡುತ್ತಿರುವ ಗೆಜ್ಜಗಳ್ಳಿಯ ನುರಿತ ಕೆಲಸಗಾರರು ಸೇರಿ ಸಿಂಹಾಸ ಜೋಡಿಸಿದರು.



