ಧಾರವಾಡ: ರಾಷ್ಟ್ರಪಿತ ಮಹಾತ್ಮ ಗಾಂಧೀ ಅವರು ನೀಡಿರುವ ಸತ್ಯ, ಅಹಿಂಸೆ ಆಧಾರಿತ ಗಾಂಧೀ ಪ್ರಣಿತ ಭಾರತವೇ ನಮ್ಮ ಆದ್ಯತೆ, ಗಾಂಧೀಜಿ ಅವರ ಜೀವನ ಮೌಲ್ಯಗಳು ನಮಗೆ ದಾರಿದೀಪವಾಗಿವೆ ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್ ಅವರು ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕಂತಿಕ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿದ್ದ ಮಹಾತ್ಮಾ ಗಾಂಧೀಜಿಯವರ 155ನೇ ಜಯಂತಿ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧೀ ಹಾಗೂ ಲಾಲ್ ಬಹದ್ದೂರ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಾತ್ಮ ಗಾಂಧೀಜಿ ಅವರು ತಮ್ಮ ತತ್ವ ಸಿದ್ದಾಂತಗಳ ಮೂಲಕ ವಿಶ್ವದ ಅನೇಕ ರಾಷ್ಟ್ರಗಳಿಗೆ ಆದರ್ಶವಾಗುವಂತ ಆಡಳಿತ ವ್ಯವಸ್ಥೆ ಕಲ್ಪಿಸಿದ್ದಾರೆ. ಅವರ ರಾಜಕೀಯ ಪ್ರವೇಶ ಭಾರತ ಸ್ವಾತಂತ್ರ್ಯ ಚಳವಳಿಯ ದಿಕ್ಕನ್ನೇ ಬದಲಿಸಿತು. ಅವರ ವ್ಯಕ್ತಿತ್ವ, ಆದರ್ಶಮಯ ಜೀವನಕ್ಕೆ ಮಾರು ಹೋದ ಅನೇಕರು ಅವರಂತೆ ನಾಡಿಗೆ ಮಡಿದರು ಎಂದು ತಿಳಿಸಿದರು.
ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶದ ಕೃಷಿ ಪದ್ಧತಿ, ರೈತರ ಬದುಕು ಸುಧಾರಣೆಗೆ ಕ್ರಮ ವಹಿಸಿದರು. ಜೈ ಜವಾನ್ ಜೈ ಕಿಸಾನ್ ಘೋಷನೆ ಮೂಲಕ ಬದಲಾವಣೆಗೆ ಕ್ರಮವಹಿಸಿದರು ಎಂದು ಅವರು ಹೇಳಿದರು. ಇಂದಿನ ಭಾರತಕ್ಕೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜೀವನ ಮತ್ತು ಸಾಧನೆಗಳು ಅಗತ್ಯವಾಗಿವೆ ಎಂದು ಅವರು ತಿಳಿಸಿದರು.
ಗಾಂಧೀ ಪ್ರತಿಮೆಗೆ ಗೌರವ: ಮಹಾತ್ಮ ಗಾಂಧೀಜಿ ಅವರ 155 ನೇ ಜಯಂತಿಯ ಅಂಗವಾಗಿ ವಾರ್ತಾ ಭವನದ ಮುಂಭಾಗದಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಮಾಲಾರ್ಪಣೆ ಹಾಗೂ ಪುಷ್ರ್ಪಾಣೆ ಮಾಡಿ ನಮನ ಸಲ್ಲಿಸಿದರು.
ಗಾಂಧೀ ನಡಿಗೆ: ವಾರ್ತಾ ಭವನದ ಮುಂಭಾಗದಲ್ಲಿರುವ ಗಾಂಧೀ ಪ್ರತಿಮೆಯಿಂದ ಗಾಂಧೀ ನಡಿಗೆಯನ್ನು ಆಯೋಜಿಸಲಾಗಿತ್ತು. ಗಾಂಧೀ ನಡಿಗೆಯು ಜಿಲ್ಲಾಧಿಕಾರಿಗಳ ಕಚೇರಿಯ ಮಾರ್ಗವಾಗಿ ಕೋರ್ಟ ಸರ್ಕಲ್, ಸರ್.ಎಂ.ವಿಶ್ವೇಶ್ವರಯ್ಯ ಸರ್ಕಲ್ ಮೂಲಕ ಆಲೂರ ವೆಂಕಟರಾವ್ ಭವನದವರೆಗೆ ಜರುಗಿತ್ತು. ಗಾಂಧೀ ನಡಿಗೆಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷ ಭೂಷಣ ಧರಿಸಿದ್ದ ಶಾಲಾ ಮಕ್ಕಳು ಸಾರ್ವಜನಿಕರ ಗಮನ ಸೆಳೆದರು.
ಗಾಂಧೀ ನಡಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್. ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ ಅವರ ನೇತೃತ್ವದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.