
ಗೋಮಾ : ಈಸ್ಟ್ ಕಾಂಗೋದ ಕಿವು ಸರೋವರದಲ್ಲಿ ಹಲವಾರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ದೋಣಿ ಬಂದರಿನ ಸಮೀಪ ಇದ್ದಕ್ಕಿದ್ದಂತೆ ಮಗುಚಿ 78ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಈ ದೋಣಿ ದಕ್ಷಿಣ ಕಿವು ಪ್ರಾಂತ್ಯದ ಮಿನೋವಾದಿಂದ ಉತ್ತರ ಕಿವು ಪ್ರಾಂತ್ಯದ ಗೋಮಾಗೆ ಹೋಗುತ್ತಿತ್ತು.

ಈ ಹಡಗಿನಲ್ಲಿ ನಿಖರವಾಗಿ ಎಷ್ಟು ಪ್ರಯಾಣಿಕರಿದ್ದರು,ಈ ಪೈಕಿ ಎಷ್ಟು ಜನ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಈಗಾಗಲೇ ಸುಮಾರು 78ಕ್ಕೂ ಹೆಚ್ಚು ಮೃತದೇಹಗಳನ್ನು ನೀರಿನಿಂದ ಹೊರತೆರೆಯಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ 10 ಜನರು ಬದುಕುಳಿದಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ನೂರಾರು ಪ್ರಯಾಣಿಕರಿಂದ ತುಂಬಿದ್ದ ಈ ದೋಣಿ ಬಂದರಿನ ಸಮೀಪ ನಿಲ್ಲಲು ಪ್ರಯತ್ನಿಸುತ್ತಿದ್ದಾಗ ಧಿಡೀರ್ ಮುಳುಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆಯಿದೆ.





