ಭಾರತೀಯ ಸೇನೆಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಯೋಧನೊಬ್ಬನನ್ನು ಕೇಂದ್ರ ಗುಪ್ತಚರ ಇಲಾಖೆ ಬಂಧಿಸಿದೆ.
ಬಂಧಿತ ಯೋಧನನ್ನು ಭೋಪಾಲ್ ಮೂಲದ ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ. ಆತ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಮಾಹಿತಿ ಸೋರಿಕೆ ಮಾಡುತ್ತಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ
ಪ್ರಸ್ತುತ ಭೋಪಾಲ್ ನಲ್ಲಿ ನಿಯೋಜನೆಗೊಂಡಿರುವ ರೋಹಿತ್ ಕುಮಾರ್ ಅವರನ್ನು ಬುಧವಾರ ಅಂಬಾಲಾ ಜಿಲ್ಲೆಯ (ಹರ್ಯಾಣ) ಕೊಡ್ವಾ ಗ್ರಾಮದಲ್ಲಿ ಸ್ವಗ್ರಾಮದಿಂದ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಸದ್ಯ ರೋಹಿತ್ ನನ್ನು ಬಂಧಿಸಿರುವ ತನಿಖಾಧೀಕಾರಿಗಳು, ಆತನಿಗೆ ಆಮಿಷವೊಡ್ಡಿದ ಮಹಿಳೆ ಸೇರಿದಂತೆ ಇಬ್ಬರು ಪಾಕಿಸ್ತಾನಿ ವ್ಯಕ್ತಿಗಳೊಂದಿಗೆ ಆತ ಸಂಪರ್ಕದಲ್ಲಿದ್ದ ಮತ್ತು ಯೋಧನ ತಂದೆಯ ಖಾತೆಗೆ ಹಣ ಬಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನು ತನಿಖೆ ನಡೆಯುತ್ತಿದ್ದು ಹೆಚ್ಚಿನ ವಿವರ ನೀಡಲಿಕ್ಕಾಗುವುದಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಅಧಿಕಾರಿ ಟಾಯ್ಗೆ ತಿಳಿಸಿದ್ದಾರೆ.

ರಾಜಸ್ಥಾನದಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಆಗಿ ಕರ್ತವ್ಯದಲ್ಲಿದ್ದ ಮತ್ತೊಬ್ಬ ಯೋಧ ರಾಮ್ ಸಿಂಗ್ ನನ್ನು ಬುಧವಾರ ಬಂಧಿಸಲಾಗಿತ್ತು. ಇದಾದ ಬಳಿಕ ಇದು ಎರಡನೇ ಬಂಧನವಾಗಿದೆ.






