ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಸಿಬಿಐ ಈಗಾಗಲೇ ಒಂಬತ್ತು ಎಫ್ಐಆರ್ ದಾಖಲಿಸಿದೆ. ಮೇ 2ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ, ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು.
ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ನಡುವೆ ನಡೆದಂತಹ ಹಿಂಸಾಚಾರದಿಂದಾಗಿ ಹಲವರು ಮೃತಪಟ್ಟಿದ್ದರು. ಟಿಎಂಸಿಯ ದಾಳಿಗೆ ಹೆದರಿ ಸಾವಿರಾರು ಬಿಜೆಪಿ ಕಾರ್ಯಕರ್ತರು ತಮ್ಮ ಮನೆ ತೊರೆದಿದ್ದರು. ಘಟನೆಯಿಂದಾಗಿ 11-14 ಜನರು ಮೃತಪಟ್ಟಿರುವ ಕುರಿತು ವರದಿಯಾಗಿತ್ತು.
ಕಲ್ಕತ್ತಾ ಹೈಕೋರ್ಟ್ ನಿರ್ದೇಶನದಂತೆ ಸಿಬಿಐ ಈ ಹಿಮಸಾಚಾರದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಹಿಂಸಾಚಾರದಿಂದಾಗಿ ನಡೆದಮತಹ ಕೊಲೆ, ಅತ್ಯಾಚಾರ ಹಾಗು ಮಹಿಳೆಯರ ವಿರುದ್ದದ ದೌರ್ಜನ್ಯವನ್ನು ತನಿಖೆ ನಡೆಸುವಂತೆ ಹೈಕೋರ್ಟ್ ಹೇಳಿತ್ತು. ಉಳಿದ ಪ್ರಕರಣಗಳ ತನಿಖೆಗಾಗಿ ರಾಜ್ಯ ಪೊಲೀಸ್ ಇಲಾಖೆಯ ಸಿಬ್ಬಂದಿಗಳ ವಿಶೇಷ ತನಿಖಾ ತಂಡವನ್ನು ಹೈಕೋರ್ಟ್ ರೂಪಿಸಿತ್ತು.

ಹೈಕೋರ್ಟ್ ಆದೇಶದಮತೆ ಸಿಬಿಐನ ನಾಲ್ಕು ತಂಡಗಳು ಕೊಲ್ಕತ್ತಾಗೆ ಭೇಟಿ ನೀಡಿದ್ದವು. ಹಿಂಸಾಚಾರ ನಡೆದಮತಹ ಪ್ರದೇಶಗಳಿಗೆ ಭೇಟಿ ನೀಡಿ ಪ್ರಕರಣಕ್ಕೆ ಪೂರಕವಾದ ಸಾಕ್ಷ್ಯಾಧಾರಗಳನ್ನು ಈ ತಂಡಗಳು ಸಂಗ್ರಹಿಸಿದ್ದವು. ಇಲ್ಲಿಯವರೆಗೆ ಒಂಬತ್ತು ಎಫ್ಐಆರ್ ದಾಖಲಾಗಿದ್ದು, ಇನ್ನೂ ಹಲವು ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಗಳಿವೆ.
ಈ ಕುರಿತಾಗಿ ಹೇಳಿಕೆ ನೀಡಿರುವ ಸಿಬಿಐ ಅಧಿಕಾರಿಯೊಬ್ಬರು, “ಸಂತ್ರಸ್ತರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಸ್ಥಳೀಯ ಪೊಲೀಸರು ನೀಡುವ ಮಾಹಿತಿಯನ್ನು ಆಧರಿಸಿ ಇನ್ನು ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವ ಸಾಧ್ಯತೆಯಿದೆ,” ಎಂದು ಹೇಳಿದ್ದಾರೆ.
ಸಿಬಿಐನ ಜಂಟಿ ನಿರ್ದೇಶಕರ ನೇತೃತ್ವದಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರತೀ ತಂಡದಲ್ಲಿಯೂ ಡಿಐಜಿ, ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮೂವರು ವರಿಷ್ಠಾಧಿಕಾರಿಗಳು ಇರಲಿದ್ದಾರೆ ಎಂದು ವರದಿಯಾಗಿದೆ.

