ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಕೇಂದ್ರ ಸಚಿವ ಸಂಪುಟ ಪುನರ್ ರಚನೆ ಕೊನೆಗೂ ಮುಕ್ತಾಯವಾಗಿದೆ. 43 ಜನ ಸಂಸದರು ಬುಧವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ಪ್ರಧಾನಿ ಮೋದಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕರ್ನಾಟಕದ ನಾಲ್ವರು ಸಚಿವರಾಗಿ ಆಯ್ಕೆಯಾಗಿದ್ದಾರೆ.
ನೂತನ ಸಚಿವರು ಸೇರಿದಂತೆ ಈ ಹಿಂದೆ ಇದ್ದಂತಹ ಸಚಿವರ ಖಾತೆ ಬದಲಾವಣೆಯ ಪಟ್ಟಿನ್ನು ಬುಧವಾರ ರಾತ್ರಿಯೇ ಬಿಡುಗಡೆಗೊಳಿಸಲಾಗಿದೆ. ಈ ಹಿಂದೆ ಕರ್ನಾಟಕಕ್ಕೆ ನೀಡಿದ್ದ ಒಂದು ಸಂಪುಟ ದರ್ಜೆಯ ಸಚಿವ ಸ್ಥಾನದ ಕೋಟಾವನ್ನು ಬಿಟ್ಟು, ನಾಲ್ಕು ರಾಜ್ಯ ಸಚಿವ ಸ್ಥಾನಗಳು ಲಭಿಸಿವೆ.
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೃಷಿ ರಾಜ್ಯ ಸಚಿವರ ಖಾತೆ, ಬೀದರ್ ಸಂಸದ ಭಗವಂತ ಖೂಬಾ ಅವರಿಗೆ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಸಚಿವಾಲಯ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ ಖಾತೆ, ಚಿತ್ರದುರ್ಗದ ಸಂಸದ ನಾರಾಯಣ ಸ್ವಾಮಿ ಅವರಿಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಜ್ಯ ಖಾತೆ, ಕರ್ನಾಟಕ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಅವರಿಗೆ ಕೌಶಲ್ಯ ಸಚಿವಾಲಯ, ಅಭಿವೃದ್ದಿ ಮತ್ತು ಉದ್ಯಮಶೀಲತೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ರಾಜ್ಯ ಖಾತೆಯನ್ನು ನೀಡಲಾಗಿದೆ.

ಹೊಸದಾಗಿ ಸೇರ್ಪಡೆಗೊಂಡ ಸಹಕಾರ ಖಾತೆಯನ್ನು ಹೆಚ್ಚುವರಿಯಾಗಿ ಗೃಹ ಮಂತ್ರಿ ಅಮಿತ್ ಶಾ ಅವರಿಗೆ ವಹಿಸಲಾಗಿದೆ. 15 ಸಚಿವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಲಾಗಿದೆ. ನಾರಾಯಣ ತಾತು ರಾಣೆ, ಸರ್ಬಾನಂದ ನೋನೋವಾಲ್, ವೀರೇಂದ್ರ ಕುಮಾರ್, ಜ್ಯೋತಿರಾದಿತ್ಯ ಸಿಂಧಿಯಾ, ರಾಮಚಂದ್ರ ಪ್ರಸಾದ್ ಸಿಂಗ್, ಅಶ್ವಿನಿ ವೈಷ್ಣವ್, ಪಶುಪತಿ ಕುಮಾರ್ ಪಾರಸ್, ಕಿರೆನ್ ರಿಜಿಜು, ರಾಜ್ ಕುಮಾರ್ ಸಿಂಗ್, ಹರ್ದೀಪ್ ಸಿಂಗ್ ಪುರಿ, ಮನ್ಸುಖ್ ಮಾಂಡವಿಯಾ, ಭೂಪೆಂದರ್ ಯಾದವ್, ಪರ್ಷೋತ್ತಮ್ ರುಪಾಲ, ಕಿಶನ್ ರೆಡ್ಡಿ ಹಾಗೂ ಅನುರಾಗ್ ಸಿಣಗ್ ಠಾಕುರ್ ಅವರಿಗೆ ಸಂಪುಟ ದರ್ಜೆಯ ಖಾತೆಗಳು ಲಭಿಸಿವೆ.
11 ಜನ ಮಹಿಳೆಯರಿಗೆ ಸಚಿವ ಸ್ಥಾನ:
ಈ ಹಿಂದೆ ಸಚಿವೆಯರಾಗಿ ಕಾರ್ಯ ನಿರ್ವಹಿಸುತ್ತಿದ್ದ ನಿರ್ಮಲಾ ಸೀತರಾಮನ್, ಸ್ಮೃತಿ ಇರಾನಿ, ರೇಣುಕಾ ಸೀಂಗ್ ಮತ್ತು ಸಾಧ್ವಿ ನಿರಂಜನ್ ಜ್ಯೋತಿ ಅವರ ಸಚಿವ ಸ್ಥಾನ ಮುಂದುವರೆಸಲಾಗಿದೆ.
ಇವರೊಂದಿಗೆ ಅಪ್ನಾ ದಳದ ಅನುಪ್ರಿಯಾ ಪಟೇಲ್, ಶೋಭಾ ಕರಂದ್ಲಾಜೆ, ದರ್ಶನಾ ಜಾರ್ದೋಶ್, ಮೀನಾಕ್ಷಿ ಲೇಖಿ, ಪ್ರತಿಮಾ ಭೌಮಿಕ್ ಮತ್ತು ಡಾ. ಭಾರತಿ ಪವಾರ್ ಅವರು ಸಚಿವ ಸ್ಥಾನವನ್ನು ಅಲಂಕರಿಸಿದ ಮಹಿಳಾ ಸಂಸದರಾಗಿದ್ದಾರೆ.

ಪ್ರಸ್ತುತ ಸಂಸತ್ತಿನಲ್ಲಿ 78 ಮಹಿಳಾ ಸಂಸದರಿದ್ದು, ಅವರಲ್ಲಿ 41 ಸಂಸದರು ಬಿಜೆಪಿಯಿಂದ ಆಯ್ಕೆಯಾದವರಿದ್ದಾರೆ.
ಸಂಪುಟ ದರ್ಜೆ ಸಚಿವರ ಪಟ್ಟಿ:
ರಾಜನಾಥ್ ಸಿಂಗ್- ರಕ್ಷಣಾ ಖಾತೆ, ಅಮಿತ್ ಶಾ- ಗೃಹ ಮತ್ತು ಸಹಕಾರ ಖಾತೆ, ನಿತಿನ್ ಗಡ್ಕರಿ – ರಸ್ತೆ ಮತ್ತು ಹೆದ್ದಾರಿ, ನಿರ್ಮಲಾ ಸೀತಾರಾಮನ್- ವಿತ್ತ ಮತ್ತು ಕಾರ್ಪೊರೇಟ್ ವ್ಯವಹಾರ, ನರೇಂದ್ರ ಸಿಂಗ್ ತೋಮರ್- ಕೃಷಿ ಮತ್ತು ರೈತ ವ್ಯವಹಾರ, ಡಾ. ಎಸ್ ಜೈಶಂಕರ್ – ವಿದೇಶಾಂಗ ಇಲಾಖೆ, ಅರ್ಜುನ್ ಮುಂಡಾ – ಬುಡಕಟ್ಟು ವ್ಯವಹಾಗಳ ಇಲಾಖೆ, ಸ್ಮೃತಿ ಇರಾನಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪಿಯೂಷ್ ಗೋಯಲ್ – ವಾಣಿಜ್ಯ ಮತ್ತು ಉದ್ದಿಮೆ,ಗ್ರಾಹಕ ವ್ಯವಹಾರಗಳು ಹಾಗೂ ನಾಗರಿಕ ಸರಬರಾಜು ಮತ್ತು ಜವಳಿ ಖಾತೆ, ಧರ್ಮೇಂದ್ರ ಪ್ರಧಾನ್ – ಶಿಕ್ಷಣ ಮತ್ತು ಕೌಶಲ್ಯಾಭಿವೃದ್ದಿ ಖಾತೆಯ ಜವಾಬ್ದಾರಿಯನ್ನು ನೀಡಲಾಗಿದೆ.
ಇನ್ನು, ಪ್ರಹ್ಲಾದ್ ಜೋಷಿ- ಸಂಸದೀಯ ವ್ಯವಹಾರಗಳ ಖಾತೆ, ಗಣಿ ಮತ್ತು ಕಲ್ಲಿದ್ದಲು ಖಾತೆ, ನಾರಾಯಣ ರಾಣೆ- ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಖಾತೆ, ಸರ್ಬಾನಂದ ಸೋನೋವಾಲ್ – ಬಂದರು ಮತ್ತು ಆಯುಚ್ ಇಲಾಖೆ, ಮುಖ್ತಾರ್ ಅಬ್ಬಾಸ್ ನಖ್ವಿ – ಅಲ್ಪಸಂಖ್ಯಾತ ವ್ಯವಹಾರಗಳ ಇಲಾಖೆ, ಡಾ. ವಿರೇಂದ್ರ ಕುಮಾರ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ, ಗಿರಿರಾಜ್ ಸಿಂಗ್- ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜ್ಯೋತಿರಾದಿತ್ಯ ಸಿಂಧಿಯಾ – ನಾಗರಿಕ ವಿಮಾನಯಾನ ಇಲಾಖೆ, ರಾಮಚಂದ್ರ ಪ್ರಸಾದ್ ಸಂಗ್- ಉಕ್ಕು, ಅಶ್ವಿನಿ ವೈಷ್ಣವ್ – ರೈಲ್ವೆ, ಸಂವಹನ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವರನ್ನಾಗಿ ನೇಮಿಸಲಾಗಿದೆ.

ಉಳಿದಂತೆ, ಪಶುಪತಿ ಪಾರಸ್- ಆಹಾರ ಸಂಸ್ಕರಣಾ ಕೈಗಾರಿಕೆಗಳ ಇಲಾಖೆ, ಗಜೇಂದ್ರ ಸಿಂಗ್ ಶೇಖಾವತ್- ಜಲ ಶಕ್ತಿ, ಕಿರೆನ್ ರಿಜಿಜು- ಕಾನೂನು ಮತ್ತು ನ್ಯಾಯ, ರಾಜ್ ಕುಮಾರ್ ಸಿಂಗ್- ಇಂಧನ ಹಾಗೂ ಹೊಸ ಮತ್ತು ನವೀಕರಿಸಬಹುದಾದದ ಇಂಧನ ಇಲಾಖೆ, ಹರ್ದೀಪ್ ಸಿಂಗ್ ಪುರಿ- ಪೆಟ್ರೋಲಿಯಂ, ವಸತಿ ಹಾಗೂ ನಗರ ವ್ಯವಹಾರಗಳ ಖಾತೆ, ಮಾನ್ಸುಖ್ ಮಾಂಡವಿಯ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕಗಳು ಮತ್ತು ರಸಗೊಬ್ಬರ ಇಲಾಖೆ, ಭೂಪೆಂದರ್ ಯಾದವ್- ಪರಿಸರ, ಅರಣ್ಯ ಮತ್ತು ಕಾರ್ಮಿಕ ಇಲಾಖೆ, ಮಹೇಂದ್ರನಾಥ್ ಪಾಂಡೆ- ಬೃಹತ್ ಕೈಗಾರಿಕೆ, ಪರ್ಷೋತ್ತಮ್ ರುಪಾಲ- ಮೀನುಗಾರಿಕೆ, ಹೈನುಗಾರಿಕೆ ಮತ್ತು ಡೈರಿ ಇಲಾಖೆ, ಕಿಶನ್ ರೆಡ್ಡಿ- ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ಈಶಾನ್ಯ ರಾಜ್ಯಗಳ ಅಭಿವೃದ್ದಿ ಇಲಾಖೆ ಹಾಗೂ ಅನುರಾಗ್ ಸಿಂಗ್ ಠಾಕುರ್ ಅವರಿಗೆ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸರಣ ಇಲಾಖೆ ಸೇರಿದಂತೆ ಹೆಚ್ಚುವರಿಯಾಗಿ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಜವಾಬ್ದಾರಿಯನ್ನು ನೀಡಲಾಗಿದೆ.
45 ಜನ ಸಂಸದರಿಗೆ ರಾಜ್ಯ ಸಚಿವ ಸ್ಥಾನವನ್ನು ನೀಡಲಾಗಿದೆ. ಈಗ ಪ್ರಧಾನಿ ಮೋದಿಯವರು ಸೇರಿದಂತೆ ಒಟ್ಟು 78 ಸಚಿವರು ಕೇಮದ್ರ ಮಂತ್ರಿಮಂಡಲದ ಭಾಗವಾಗಿದ್ದಾರೆ.






