ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೇವಲ ನಾಲ್ಕೇ ತಿಂಗಳಲ್ಲಿ, ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಶುಕ್ರವಾರ ರಾತ್ರಿ 11 ಗಂಟೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೀರಥ್ ಸಿಂಗ್ ನಿರ್ಗಮನದೊಂದಿಗೆ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಮೂರನೆ ಮುಖ್ಯಮಂತ್ರಿಯನ್ನು ಉತ್ತರಾಖಂಡ ಬಿಜೆಪಿ ಪಡೆಯಲಿದೆ.
ಕಳೆದ ಕೆಲ ದಿನಗಳಿಂದ ಉತ್ತರಾಖಂಡದ ನಾಯಕತ್ವ ಬದಲಾವಣೆ ಕುರಿತ ಚಟುವಟಿಕೆಗಳು ಗರಿಗೆದರಿದ್ದವು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತೀರಥ್ ಸಿಂಗ್ ಅವರು ಶುಕ್ರವಾರ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.

ಪಕ್ಷದ ಹೈಕಮಾಂಡ್ ರಾವತ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿತ್ತು. ಪಕ್ಷದ ಸೂಚನೆ ಪಡೆದ ಬೆನ್ನಲ್ಲೇ ರಾವತ್ ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದ್ದಾರೆ.
ಪ್ರಸ್ತುತ ಲೋಕಸಭಾ ಸದಸ್ಯರಾಗಿರುವ ರಾವತ್, ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಬೇಕಿದ್ದರೆ ಸೆಪ್ಟೆಂಬರ್ 10ರೊಳಗೆ ವಿಧಾನಸಭೆ ಉಪಚುನಾವಣೆ ಎದುರಿಸಿ ಶಾಸಕರಾಗಿ ಆಯ್ಕೆಯಾಗಬೇಕಿತ್ತು.ಆದರೆ, ಚುನಾವಣಾ ಆಯೋಗವು ರಾಜ್ಯದಲ್ಲಿ ತೆರವಾಗಿರುವ ಎರಡು (ಗಂಗೋತ್ರಿ ಮತ್ತು ಹಲ್ದವಾನಿ) ಕ್ಷೇತ್ರಗಳಿಗೆ ಕೋವಿಡ್–19ರ ಕಾರಣಕ್ಕೆ ಉಪಚುನಾವಣೆ ನಡೆಸುವ ಸಾಧ್ಯತೆಗಳು ಕಡಿಮೆಯಾಗಿರುವುದರಿಂದ ಮುಖ್ಯ,ಮಂತ್ರಿ ಬದಲಾವಣೆ ಅನಿವಾರ್ಯವಾಗಿತ್ತು.

ಪ್ರಸ್ತುತ ವಿಧಾನಸಭೆಯ ಅವಧಿ ಮುಂದಿನ ಮಾರ್ಚ್‌ನಲ್ಲಿ ಮುಕ್ತಾಯವಾಗಲಿದೆ. ಹೀಗಿರುವಾಗ ಚುನಾವಣಾ ಆಯೋಗ ಉಪಚುನಾವಣೆ ನಡೆಸುವ ಸಾಧ್ಯತೆಗಳು ಕಡಿಮೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಸಾಂಕ್ರಾಮಿಕ ಕಾಯಿಲೆ ಸಂದರ್ಭದಲ್ಲಿ ಈ ಹಿಂದೆ ಚುನಾವಣೆ ನಡೆಸಿದ ಕಾರಣಕ್ಕೆ ಆಯೋಗವನ್ನು ನ್ಯಾಯಾಲಯಗಳು ತರಾಟೆಗೆ ತೆಗೆದುಕೊಂಡಿತ್ತು. ಇದು ಆಯೋಗವನ್ನು ಚುನಾವಣೆ ನಡೆಸಲು ಹಿಂದೆ ಮುಂದೆ ನೋಡುವಂತೆ ಮಾಡಿದೆ ಎನ್ನಲಾಗಿದೆ.
ಉತ್ತರಾಖಂಡದ ಬಿಜೆಪಿ ಶಾಸಕರು ಇಂದು (ಶನಿವಾರ) ಸಭೆ ಸೇರಲಿದ್ದು, ಹೊಸ ನಾಯಕನನ್ನು ಆಯ್ಕೆ ಮಾಡಲಿದ್ದಾರೆ.





