ಉತ್ತರ ಕರ್ನಾಟಕದ ಗದಗ್ ಮತ್ತು ಸುತ್ತಮುತ್ತಲಿನ ಪ್ರದೇಶ ಶೇಂಗಾ ಮತ್ತು ಹೆಸರು ಬೆಳೆಗೆ ಪ್ರಸಿದ್ಧವಾಗಿದ್ದು ಇದೀಗ ಅದಕ್ಕೂ ವೈರಸ್ ಕಾಟ ಶುರುವಾಗಿದೆ. ವೈರಸ್ ಅಂದರೆ ಕೋವಿಡ್ ಅಂದುಕೊಂಡಿರಾ ಅಲ್ಲ, ಇದು ಹಳದಿ ವೈರಸ್ ಅಥವಾ ಹಳದಿ ನಂಜಾಣು ರೋಗ. ಕೃಷಿಕರು ಮುಂಗಾರು ಆರಂಭಕ್ಕಿಂತ ಕೆಲವು ದಿನಗಳ ಮೊದಲೇ ಈ ಬೆಳೆಗಳನ್ನು ಬಿತ್ತಿದ್ದು ಮೋಡದ ಕಡೆಗೆ ನೋಡುತ್ತ ನಿಂತಿದ್ದರು. ಮಳೆ ಈ ಬಾರಿ ಚೆನ್ನಾಗಿಯೇ ಆಯಿತು. ಆದರೆ ಹಳದಿ ನಂಜಾ ರೋಗ ಒಕ್ಕರಿಸಿ ಎಲೆಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು.

ಕಳೆದ ಬಾರಿ ಕೋವಿಡ್ ಸಂಕಷ್ಟದಿಂದ ತೊಂದರೆ ಅನುಭವಿಸಿದ ರೈತು ಈ ಬಾರಿಯೂ ಲಾಕ್ ಡೌನ್ ನಲ್ಲಿ ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ದೂರದ ಮಾರುಕಟ್ಟೆಗೆ ಸಾಗಿಸಲಾಗದೆ ಒದ್ದಾಡಿದರು. ಇಂತಹ ಸಮಯದಲ್ಲಿ ಒಂದು ವೈರಸ್ ಬಂದು ಮುಂಗಾರಿನ ಬೆಳೆಯೂ ಕೈ ತಪ್ಪಿದ್ದು ರೈತರಲ್ಲಿ ಆತಂಕ ಮೂಡಿಸಿದೆ.
ಈಗಾಗಲೇ ಬಹುತೇಕ ಹೊಲಗಳಿಗೆ ಕೃಷಿ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಕೆಲವು ರೈತರಿಗೆ ಉಪಯುಕ್ತ ಮಾಹಿತಿ ಒದಗಿಸಿದ್ದಾರೆ.
“ತಾಲೂಕಿನಾದ್ಯಂತ ಮುಂಗಾರು ಮಳೆ ವಾಡಿಕೆಗಿಂತ ಅಧಿಕ ಪ್ರಮಾಣದಲ್ಲಿ ಆಗಿರುವುದರಿಂದ ರೈತರು ಮುಂಗಾರು ಹಂಗಾಮಿನ ಬೆಳೆಗಳಾದ ಶೇಂಗಾ ಹೆಸರು ಬೆಳೆಗಳನ್ನು ಅಧಿಕ ಪ್ರಮಾಣದಲ್ಲಿ ಬೀತನೆ ಮಾಡಿದ್ದು ಈಗ ಬೆಳೆಗಳಿಗೆ ರೋಗ ಬಾಧೆಯಿಂದ ನಲುಗಿದ್ದು ಅದರಲ್ಲೂ ವಿಶೇಷವಾಗಿ ತಿಮ್ಮಾಪೂರ ಹಾಗೂ ಹರ್ಲಾಪೂರ ಭಾಗದ ಭುಮಿಯಲ್ಲಿ ಶೇಂಗಾ, ಹೆಸರು ಬೆಳೆಗಳಿಗೆ ಹಳದಿ ನಂಜಾಣು ರೋಗ ಹರಡಿ ಬೆಳೆಯು ಸಂಪೂರ್ಣ ಹಾಳಾಗಿವೆ. ಇದರಿಂದ ನೂರಾರು ರೈತರು ನಷ್ಟ ಅನುಭವಿಸಿದ್ದಾರೆ. ಕೃಷಿ ಇಲಾಖೆ ಈ ಬಗ್ಗೆ ಸೂಕ್ತ ಪರಿಕ್ಷೆ ನಡೆಸಿ ರೈತರಿಗೆ ತಿಳಿಸುತ್ತಿದ್ದಾರೆ. ಲಾಕ್ ಡೌನ್ ನಿಂದ ಪದೇ ಪದೇ ತೊಂದರೆ ಅನುಭವಿಸುತ್ತಿದ್ದೇವೆ. ಬೇಡವೆಂದರೂ ನಗರಗಳಿಗೆ ವಲಸೆ ಹೋಗುವ ನಮ್ಮ ಜನರೇ ರೋಗ ತೆಗೆದುಕೊಂಡು ಹಳ್ಳಿಗಳಲ್ಲಿ ಬಂದು ಪಸರಿಸಿಬಿಡುತ್ತಾರೆ. ಹೀಗಾದರೆ ಮುಂದೆ ರೈತರ ಬದುಕು ಹೇಗೆ ಎಂಬುದೇ ತಿಳಿಯದಾಗಿದೆ”ಎಂದು ಹನುಮಂತ ಬಡಿಗಣ್ಣವರ ಎಂಬ ಬೆಳೆಗಾರ ಅಳಲು ತೋಡಿಕೊಂಡಿದ್ದಾರೆ.

ಈ ಕುರಿತು ಪ್ರತಿಧ್ವನಿ ತಂಡದೊಂದಿಗೆ ಮಾತನಾಡಿದ ಕೃಷಿ ಅಧಿಕಾರಿಯೊಬ್ಬರು, “25 ರಿಂದ 40 ದಿನದ ಕಾಲಾವಧಿಯಲ್ಲಿ ಈ ಬೆಳೆಗೆ ಬಿಳಿ ನೊಣಗಳಿಂದ ಈ ಹಳದಿ ನಂಜಾಣು ರೋಗ ಬರುತ್ತದೆ .ಈ ಸಮಯದಲ್ಲಿ ಪ್ರತಿ ಲೀಟರ್ ನೀರಿಗೆ 02 ಇಮಿಡಾಕ್ಲೋಸಪ್ರಿಡ್ ಅಥವಾ 03 ಗ್ರಾಂ ಥೈಯಾಮಿಥಾಕ್ಸಮ್ ಬಳಸಿ ಬೆಳೆಯ ಕೆಳಗಿನ ಎಲೆಗಳಿಗೆ ಹರಡುವಂತೆ ಸಿಂಪಡಿಸಬೇಕು ಹಾಗೂ ಇದು ನಂಜಾಣು ರೋಗ ವಾಗಿರುವುದರಿಂದ ಹಳದಿ ಯಾದ ಸಸಿಗಳನ್ನು ಕಿತ್ತು ಭೂಮಿಯಲ್ಲಿ ಆಳವಾದತೇಗನ್ನು ತೋಡಿ ಉಳುವುದರಿಂದ ಬೇರೆ ಗಿಡಗಳಿಗೆ ಈ ರೋಗವನ್ನು ಹರಡದಂತೆ ಮಾಡಬಹುದು” ಎಂದು ತಿಳಿಸಿದ್ದಾರೆ.




