ಕರೋನಾ ಸಂಕಷ್ಟದಲ್ಲಿ ನಿಜವಾಗಿಯೂ ಸಿಲುಕಿ ಪರದಾಡಿದ್ದು ಎಂದರೆ ವಲಸೆ ಕಾರ್ಮಿಕರು. ಕೆಲಸವೂ ಇಲ್ಲದೆ ಪುಡಿಗಾಸಿನ ಸಂಪಾನೆಯೂ ಇಲ್ಲದೆ. ಇದ್ದಲ್ಲಿ ಇರಲಾಗದೆ, ಹುಟ್ಟೂರಿಗೆ ಹೋಗಲಾರದೆ ನರಕಯಾತನೆ ಅನುಭವಿಸಿದ್ದರು. ರಾಜ್ಯ, ಕೇಂದ್ರ ಸರ್ಕಾರಗಳು ಹಸಿವಿನಿಂದ ಯಾರು ನೊಂದುಕೊಳ್ಳಬಾರದು ಎಂದು ಎಷ್ಟೇ ಹೇಳಿದರೂ ಹಸಿವೆಯನ್ನೂ ತೀರಿಸಲು ಮಾತ್ರ ಸಾಧ್ಯವಾಗಲಿಲ್ಲ. ಸಾವಿರಾರು ಮಂದಿ ಬರಿಗಾಲಿನಲ್ಲೇ ನಡೆದು ಸಾವಿರಾರು ದೂರವನ್ನು ಕ್ರಮಿಸಿದರು. ಅದರಲ್ಲಿ ಕೆಲವರು ಸಾವಿನ ಮನೆಯನ್ನೂ ಸೇರಿದರು. ಆದರೆ ಅಂತಿಮವಾಗಿ ವಲಸೆ ಕಾರ್ಮಿಕರ ಕಣ್ಣೀರನ್ನು ನೋಡಲಾಗದ ಕೇಂದ್ರ ಸರ್ಕಾರ ಮೇ 1 ರಿಂದ ಶ್ರಮಿಕ್ ರೈಲು ಬಿಡುವ ಮನಸ್ಸು ಮಾಡಿತು. ಲಕ್ಷಾಂತರ ಜನರು ಸರ್ಕಾರದ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸ, ನಂತರ ಹೋಗಬೇಕಿರುವ ರಾಜ್ಯದಿಂದಲೂ ಅನುಮತಿ ಪಡೆದು ರೈಲಿನಲ್ಲಿ ಹೊರಟು ನಿಂತರು. ಆದರೆ ಸರ್ಕಾರ ಮಾಡಿದ ಎಡವಟ್ಟು ನಿರ್ಧಾರಗಳಿಂದ ಹುಟ್ಟೂರು ಎಂಬ ಸ್ವರ್ಗಕ್ಕೆ ನರಕಯಾತನೆಯಲ್ಲಿ ಪ್ರಯಾಣ ಮಾಡುವ ಸ್ಥಿತಿಯಲ್ಲಿ ವಲಸೆ ಕಾರ್ಮಿಕರು ಗೂಡು ಸೇರಿಕೊಳ್ಳುತ್ತಿದ್ದಾರೆ.
ಮಹಾರಾಷ್ಟ್ರದ ಮುಂಬೈ ನಗರದಲ್ಲಿ ಕರೋನಾ ಸೋಂಕು ವಿಪರೀತವಾಗಿ ಬಾಧಿಸಿದ್ದು, ಮಹಾರಾಷ್ಟ್ರದಲ್ಲಿ ಇಲ್ಲೀವರೆಗೂ 45 ಸಾವಿರ ಗಡಿಯಲ್ಲಿ ನಿಂತಿದೆ. ಮುಂಬೈ ನಗರದಲ್ಲಿ ಬದುಕು ಕಟ್ಟಿಕೊಂಡಿದ್ದವರು, ಮುಂಬೈ ಮಹಾ ನರಕದಿಂದ ತಪ್ಪಿಸಿಕೊಂಡು ಹುಟ್ಟೂರಿಗೆ ಹೋದರೆ ಸಾಕು ಎನ್ನುವಂತಾಗಿದೆ. ಇದೇ ಕಾರಣಕ್ಕೆ ಉತ್ತರ ಪ್ರದೇಶದಿಂದ ಮಹಾರಾಷ್ಟ್ರಕ್ಕೆ ವಲಸೆ ಬಂದಿದ್ದ ಸಾವಿರಾರು ಮಂದಿ ಕಾರ್ಮಿಕರು ಹುಟ್ಟೂರಿಗೆ ಹೊರಟು ನಿಂತಿದ್ದರು. ಗುರುವಾರ ಬೆಳಗ್ಗೆ ಮುಂಬೈ ರೈಲು ನಿಲ್ದಾಣದಿಂದ ಉತ್ತರ ಪ್ರದೇಶದ ಗೋರಖ್‌ಪುರದ ಕಡೆಗೆ ಪ್ರಯಾಣ ಬೆಳೆಸಿದರು. ಕರೋನಾ ತಾಪತ್ರಯದಿಂದ ತಪ್ಪಿಸಿಕೊಂಡೆವು ಎಂದು ಕಣ್ಮುಚ್ಚಿ ಮಲಗಿ ಹುಟ್ಟೂರು ಸೇರುವ ಕನಸು ಕಂಡಿದ್ದವರಿಗೆ ರೈಲ್ವೆ ಇಲಾಖೆ ಶಾಕ್ ಕೊಟ್ಟಿತ್ತು. ಉತ್ತರ ಪ್ರದೇಶದ ಗೋರಖ್‌ಪುರಕ್ಕೆ ತಲುಪಬೇಕಿದ್ದ ಶ್ರಮಿಕ್ ರೈಲು ಶನಿವಾರ ಬೆಳಗ್ಗೆ ತಲುಪಿದ್ದು ಮಾತ್ರ ಒಡಿಶಾದ ರೂರ್ಕೇಲಾ ನಗರವನ್ನು.
Also Read: ವಲಸೆ ಕಾರ್ಮಿಕರ ವಿಚಾರದಲ್ಲಿ ಮೋದಿ ಮಾಡಿದ 6 ಎಡವಟ್ಟುಗಳೇನು..?
ಒಡಿಶಾದ ರೂರ್ಕೇಲಾ ನಗರಕ್ಕೆ ರೈಲು ಸುರಕ್ಷಿತವಾಗಿಯೇನೋ ಬಂದು ತಲುಪಿತ್ತು. ಆದರೆ ಮಾರ್ಗ ಬದಲಾವಣೆ ಬಗ್ಗೆ ವಲಸೆ ಕಾರ್ಮಿಕರಿಗೆ ಯಾವುದೇ ಮುನ್ಸೂಚನೆಯನ್ನೂ ರೈಲ್ವೆ ಇಲಾಖೆ ನೀಡಿರಲಿಲ್ಲ. ಇದೀಗ ರೈಲ್ವೆ ಇಲಾಖೆ ತಾನು ಮಾಡಿದ ಎಡವಟ್ಟು ಕೆಲಸಕ್ಕೆ ತೇಪೆ ಹಾಕುವ ಕೆಲಸ ಮಾಡುತ್ತಿದೆ. ಉದ್ದೇಶಪೂರ್ವಕವಾಗಿಯೇ ರೈಲನ್ನು ಉತ್ತರ ಪ್ರದೇಶದ ಗೋರಖ್ಪುರದ ಬದಲಿಗೆ ಒಡಿಶಾದ ರೂರ್ಕೇಲಾಗೆ ಬರುವಂತೆ ಮಾಡಿದ್ದೆವೆ ಎಂದು ಸಬೂಬು ಹೇಳುತ್ತಿದೆ. ಈ ರೀತಿಯ ಕ್ರಮ ಕೈಗೊಂಡಿದ್ದರೆ, ಆನ್ಲೈನ್ ಮೂಲಕ ಎಲ್ಲಾ ಮಾಹಿತಿ ಪಡೆದುಕೊಂಡಿದ್ದ ವಲಸೆ ಕಾರ್ಮಿಕರಿಗೆ ಮಾಹಿತಿ ಕೊಡಬೇಕಿತ್ತು.

ಎಲ್ಲರನ್ನೂ ಕೆಳಕ್ಕೆ ಇಳಿಸಿದ ಬಳಿಕ ಕಕ್ಕಾಬಿಕ್ಕಿಯಾಗಿ ನೋಡುವಂತೆ ಮಾಡಿದ್ದಾದರೂ ಯಾಕೆ..? ಒಂದು ವೇಳೆ ಶ್ರಮಿಕ್ ರೈಲು ಮಾರ್ಗ ತಪ್ಪಿ ಗೋರಖ್‌ಪುರದ ಬದಲಿಗೆ ಒಡಿಶಾದ ರೂರ್ಕೇಲಾಗೆ ಹೋಗಿತ್ತು ಎನ್ನುವುದಾದರೆ ಅಪಘಾತ ಸಂಭವಿಸಿದ್ದರೆ ಯಾರು ಹೊಣೆ..? ಕೇಂದ್ರ ರೈಲ್ವೆ ಇಲಾಖೆಯ ಪ್ರಮುಖ ಅಧಿಕಾರಿಗಳೇ ಈ ಬಗ್ಗೆ ಸೂಚನೆ ಕೊಟ್ಟಿದ್ದರು ಎನ್ನುವುದಾದರೆ ಅಧಿಕೃತ ವೆಬ್ಸೈಟ್ನಲ್ಲಿ ಆದರೂ ಮಾಹಿತಿ ಹಾಕಬಹುದಿತ್ತು. ಅದನ್ನೂ ಮಾಡಲಿಲ್ಲ. ಒಟ್ಟಾರೆ ರೈಲು ಸುರಕ್ಷಿತವಾಗಿದೆ ತಪ್ಪುಗಳು ಮಿಂಚಿ ಮರೆಯಾಗುತ್ತವೆ ಅಷ್ಟೆ.
Also Read: ವಲಸೆ ಕಾರ್ಮಿಕರ ಪರದಾಟ: ಸೇವಾ ಸಿಂಧು ಆ್ಯಪ್‌ನಲ್ಲಿ ಅರ್ಜಿ ಹಾಕಿದರೂ ಸರ್ಕಾರದ ಉತ್ತರವಿಲ್ಲ
ಒಡಿಶಾದ ರೂರ್ಕೇಲಾದಿಂದ ಉತ್ತರ ಪ್ರದೇಶದ ಗೋರಖ್ಪುರ ಬರೋಬ್ಬರಿ 750 ಕಿಲೋ ಮೀಟರ್‌ಗೂ ಹೆಚ್ಚು ದೂರವಿದೆ. ಯಾವುದೇ ಮುನ್ಸೂಚನೆ ಇಲ್ಲದೆ ಬಂದ ಪ್ರಯಾಣಿಕರು ಗಾಬರಿಯಾಗಿದ್ದಾರೆ. ನಂತರ ತಪ್ಪನ್ನು ಸರಿಪಡಿಸಿಕೊಂಡ ರೈಲ್ವೆ ಇಲಾಖೆ ನಂತರ ಗೋರಖ್ಪುರದ ಕಡೆಗೆ ರೈಲನ್ನು ತಿರುಗಿಸಿದೆ. ಆದರೆ 2 ದಿನ ಹೆಚ್ಚುವರಿ ಪ್ರಯಾಣ ಮಾಡುವಂತಾಗಿದ್ದು ಮಾತ್ರ ರೈಲ್ವೆ ಇಲಾಖೆಯ ಬೇಜವಾಬ್ದಾರಿತನಕ್ಕೆ ಛೀಮಾರಿ ಹಾಕಿದಂತೆಯೇ ಸರಿ. ರೂರ್ಕೇಲಾದ ಕೆಲವು ವಲಸೆ ಕಾರ್ಮಿಕರು ಇದೇ ರೈಲಿನಲ್ಲಿದ್ದರು ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಆದರೂ, ಮೊದಲೇ ಹಸಿವಿನಿಂದ ಕಂಗೆಟ್ಟಿದ್ದ ವಲಸೆ ಕಾರ್ಮಿಕರಿಗೆ ಆದ ನೋವನ್ನು ಭರಿಸುವವರು ಯಾರು..?
ರೈಲ್ವೆ ಇಲಾಖೆ ಶ್ರಮಿಕ್ ರೈಲುಗಳನ್ನು ಬಿಡುತ್ತಿದೆ. ಒಟ್ಟಿಗೆ ಸಾವಿರಾರು ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸುವ ಕೆಲಸ ನಡೀತಿದೆ. ಆದರೆ ಕರೋನಾ ಸೋಂಕು ಹರಡುತ್ತದೆ ಎನ್ನುವ ಕಾರಣಕ್ಕೆ ರೈಲ್ವೆ ಇಲಾಖೆ ಯಾವುದೇ ಆಹಾರ ಪದಾರ್ಥ ಮಾರಾಟಕ್ಕೆ ಅವಕಾಶ ಕೊಟ್ಟಿಲ್ಲ. ಆಹಾರ ಪದಾರ್ಥ ಕೊಡುವುದು ಬೇಡ, ಕನಿಷ್ಠ ಪಕ್ಷ ನೀರಿನ ವ್ಯವಸ್ಥೆಯನ್ನಾದರೂ ಮಾಡಬೇಕಿದ್ದ ಇಲಾಖೆ ದಿವ್ಯ ನಿರ್ಲಕ್ಷ್ಯ ಮಾಡಿದೆ. 48 ಗಂಟೆಗಳ ಕಾಲ ಹೆಚ್ಚುವರಿ ಪ್ರಯಾಣ ಮಾಡುವಂತೆ ರೈಲ್ವೆ ಇಲಾಖೆ ಮಾಡಿದೆ. ಆದರೆ ನಾವು ತಿನ್ನಲು ಬಿಸ್ಕೆಟ್ ಮಾತ್ರ ತಂದಿದ್ದೆವು. ರೈಲ್ವೆ ಇಲಾಖೆ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಿಲ್ಲ. ಇದೊಂದು ರೀತಿಯ ನರಕದತ್ತ ನಾವು ಪ್ರಯಾಣ ಮಾಡಿದಂತಿದೆ ಎಂದು ವಲಸೆ ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
Also Read: ವಲಸೆ ವರಸೆ-1: ಕರೋನಾ ಸೃಷ್ಟಿಸಿರುವ ದುರ್ದಿನಗಳಲ್ಲಾದರೂ ಎಚ್ಚೆತ್ತುಕೊಳ್ಳಬೇಕಿದೆ
ಶ್ರಮಿಕ್ ರೈಲಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ನೀರು, ಆಹಾರವವನ್ನೂ ಮಾರಾಟ ಮಾಡದೆ ವಲಸೆ ಕಾರ್ಮಿಕರನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಳುಹಿಸಿಕೊಡುತ್ತಿದ್ದಾರೆ. ಆದರೆ ವಿದೇಶದಿಂದ ಬರುತ್ತಿರುವ ಭಾರತೀಯ ಜನರನ್ನು ಇದೇ ರೀತಿ ನಡೆಸಿಕೊಳ್ಳುತ್ತಿದ್ದಾರಾ..? ಎಂದರೆ ಸಿಗುವ ಉತ್ತರ ಇಲ್ಲ. ಎಲ್ಲಾ ರೀತಿಯ ವ್ಯವಸ್ಥೆಯನ್ನೂ ಮಾಡಿಕೊಂಡು ಭಾರತಕ್ಕೆ ವಾಪಸ್ ಕರೆಸಿಕೊಳ್ಳುತ್ತಿದ್ದಾರೆ. ಆದರೆ ಇವರು ನಮ್ಮ ದೇಶದ ಕೂಲಿ ಕಾರ್ಮಿಕರಲ್ಲವೇ ಎನ್ನುವ ಅಸಡ್ಡೆಯೋ ಅಥವಾ ವಿದೇಶದಿಂದ ಬರುವ ಜನ ಹಣವಂತರು ಎನ್ನುವ ನಿರೀಕ್ಷೆಯೋ..? ಒಟ್ಟಾರೆ ಶ್ರೀಮಂತರ ಪಾಲಿಗೆ ಎಲ್ಲವೂ ಎಲ್ಲಾ ಕಾಲದಲ್ಲೂ ದಕ್ಕುತ್ತಿದೆ. ದೇಶಕ್ಕಾಗಿ ಎದೆಯ ಬೆವರು ಬಸಿಯುವ ಶ್ರಮಿಕ ವರ್ಗಕ್ಕೆ ಗುಟುಕು ನೀರು, ತುತ್ತು ಅನ್ನವೂ ಸಿಗುವುದಿಲ್ಲ. ಹೋಗಬೇಕಿರುವ ಮಾರ್ಗವೂ ಕೈ ತಪ್ಪಿ ಹೋಗುತ್ತಿದೆ. ಇದು ನಮ್ಮ ದೇಶದ ವ್ಯವಸ್ಥೆ. ಉತ್ತರ ಕೊಡಬೇಕಿದ್ದವರು ಮಾತ್ರ ಸಮರ್ಥನೆಯ ಮಾತನ್ನೇ ಆಡುತ್ತಿದ್ದಾರೆ.






