ವಿತ್ತೀಯ ಕೊರತೆ ಸರಿದೂಗಿಸಿಕೊಳ್ಳಲು ಬಿಪಿಸಿಎಲ್ ಅನ್ನು ಪೂರ್ಣಪ್ರಮಾಣಮದಲ್ಲಿ ಮಾರಾಟ ಮಾಡಲು ಮುಂದಾಗಿರುವ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರದ ಕಣ್ಣು ಈಗ ಕರ್ನಾಟಕದ ಹೆಮ್ಮೆಯ ಕೈಗಾರಿಕಾ ಸಂಸ್ಥೆಯಾಗಿರುವ ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಮೇಲೆ ಬಿದ್ದಿದೆ. ಬಿಪಿಸಿಎಲ್ ಮಾರಾಟದಿಂದ ಸುಮಾರು 60,000 ಕೋಟಿ ರುಪಾಯಿ ಗಳಿಸುತ್ತಿರುವ ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹಿಂತೆಗೆತದಿಂದಲೇ ಸುಮಾರು 1.10 ಲಕ್ಷ ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಹೊಂದಿದೆ. ಬಿಇಎಂಎಲ್ ಮುಂದಿನ ವಿತ್ತೀಯ ವರ್ಷದಲ್ಲಿ ಮಾರಾಟವಾಗುವ ನಿರೀಕ್ಷೆ ಇದೆ. ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ ನಾಯಕ್ ಅವರು ಬಿಇಎಂಎಲ್ ಸಂಸ್ಥೆಯಲ್ಲಿನ ಕೇಂದ್ರ ಸರ್ಕಾರದ ಪಾಲನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಸೂಕ್ತ ಪಾಲುದಾರರನ್ನು ಹುಡುಕಲಾಗುತ್ತಿದೆ ಎಂದು ಲೋಕಸಭೆಯಲ್ಲಿ ಪ್ರಕಟಿಸಿದ್ದಾರೆ.
ರಕ್ಷಣಾ ಇಲಾಖೆಗೆ ವಾಹನಗಳು ಮತ್ತು ಪೂರಕ ಯಂತ್ರೋಪರಣಗಳನ್ನು ಸರಬರಾಜು ಮಾಡುತ್ತಿರುವ ಬಿಇಎಂಎಲ್ ಗಣಿಗಾರಿಕೆಗೆ ಬೇಕಾದ ಪೂರಕ ಯಂತ್ರೋಪಕರಣಗಳನ್ನು ತಯಾರಿಸುವ ಅಗ್ರಗಣ್ಯ ಸಂಸ್ಥೆ. ಈ ವಲಯದಲ್ಲಿ ಬಿಇಎಂಎಲ್ ಪಾಲು ಶೇ.70ಕ್ಕಿಂತಲೂ ಹೆಚ್ಚಿದೆ. ಸತತ ಲಾಭದಲ್ಲಿ ನಡೆಯುತ್ತಿರುವ ಬಿಇಎಂಎಲ್ ಕಳೆದ ಎರಡು ತ್ರೈಮಾಸಿಕಗಳಲ್ಲಿ ಮಾತ್ರ 96.85 ಮತ್ತು 25.92 ಕೋಟಿ ನಷ್ಟ ಘೋಷಣೆ ಮಾಡಿದೆ. ಆದರೆ, ಅದರ ಹಿಂದಿನ ತ್ರೈಮಾಸಿಕದಲ್ಲಿ 162.24 ಕೋಟಿ ರುಪಾಯಿ ಲಾಭಗಳಿಸಿತ್ತು. ಪ್ರಸ್ತುತ ಕೇಂದ್ರ ಸರ್ಕಾರದ ಪಾಲು ಶೇ.54.03ರಷ್ಟಿದೆ. ಈ ಪೈಕಿ 26ರಷ್ಟು ಪಾಲನ್ನು ಮಾರಾಟ ಮಾಡಲು ನಿರ್ಧರಿಸಿದೆ. ಆಗ ಕೇಂದ್ರ ಸರ್ಕಾರದ ಬಳಿ ಶೇ.28ರಷ್ಟು ಪಾಲು ಮಾತ್ರ ಉಳಿದುಕೊಳ್ಳುತ್ತದೆ. ಪ್ರಸ್ತುತ ವಿದೇಶಿ ಸಾಂಸ್ಥಿಕ ಹೂಡಿಕೆದಾರರ ಪಾಲು ಶೇ.4.02 ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರ ಪಾಲು ಶೇ.31.11ರಷ್ಟು ಷೇರುಗಳನ್ನು ಹೊಂದಿದ್ದರೆ,. ಇತರೆ ಎಂದರೆ ಚಿಲ್ಲರೆ ಹೂಡಿಕೆದಾರರ ಬಳಿ ಶೇ.10ರಷ್ಟು ಷೇರುಗಳನ್ನು ಹೊಂದಿದ್ದಾರೆ.
ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಬಿಇಎಂಎಲ್ ಶೇ.26ರಷ್ಟು ಪಾಲು ಮಾರಾಟ ಮಾಡುವುದರಿಂದ ಕಂಪನಿಯ ಮೇಲೆ ತನ್ನ ಆಡಳಿತಾತ್ಮಕ ನಿಯಂತ್ರಣವನ್ನು ಕಳೆದುಕೊಳ್ಳುತ್ತದೆ. ಅಂದರೆ, ಅಲ್ಪಸಂಖ್ಯಾತ ಪಾಲುದಾರ ಆಗುವ ಕೇಂದ್ರ ಸರ್ಕಾರಕ್ಕೆ ಕಂಪನಿಯ ಮೇಲೆ ಯಾವುದೇ ನಿಯಂತ್ರಣ ಇರುವುದಿಲ್ಲ. ಇಡೀ ಕಂಪನಿಯ ಆಡಳಿತವನ್ನೇ ಹಸ್ತಾಂತರಿಸುವ ರೀತಿಯಲ್ಲಿ ಬಿಇಎಂಎಲ್ ಮಾರಾಟಕ್ಕೆ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಕೇಂದ್ರಸ್ಥಾನ ಹೊಂದಿರುವ ಬಿಇಎಂಎಲ್ ಗಣಿ, ನಿರ್ಮಾಣ, ವಿದ್ಯುತ್, ನೀರಾವರಿ, ರಸಾಯನಿಕಗೊಬ್ಬರ, ಸಿಮೆಂಟ್, ಕಬ್ಬಿಣ ಮತ್ತು ರೈಲು ವಲಯಗಳಿಗೆ ಬೇಕಾದ ಬೃಹತ್ ಯಂತ್ರೋಪಕರಣಗಳನ್ನು ತಯಾರಿಸುವಲ್ಲಿ ಅಗ್ರಗಣ್ಯ ಸಂಸ್ಥೆ. ಬುಲ್ಡೊಜರ್ಸ್, ಡಂಪ್ ಟ್ರಕ್ಸ್, ಹೈಡ್ರಾಲಿಕ್ ಎಕ್ಸ್ಕವೇಟರ್ಸ್, ವ್ಹೀಲ್ ಲೋಡರ್ಸ್, ರೋಪ್ ಶಾವೆಲ್ಸ್, ವಾಕಿಂಗ್ ಡ್ರಾಗ್ಲೈನ್, ಮೋಟಾರ್ ಗ್ರೇಡರ್ಸ್ ಮತ್ತು ಸ್ರ್ಕೇಪರ್ಸ್ ಗಳನ್ನು ತಯಾರಿಸುತ್ತಿದೆ.ಬೆಂಗಳೂರು, ಮೈಸೂರು, ಕೆಜಿಎಫ್ ಮತ್ತು ಪಾಲಕ್ಕಾಡ್ ನಲ್ಲಿ ತನ್ನ ಘಟಕಗಳನ್ನು ಹೊಂದಿದೆ. 1965ರಲ್ಲಿ ಪ್ರಾರಂಭವಾದ ಬಿಇಎಂಎಲ್ ರಕ್ಷಣಾ ಇಲಾಖೆಗೆ ಬೇಕಾದ ಬಹುತೇಕ ವಾಹನ ಮತ್ತಿತರ ಪರಿಕರಗಳನ್ನು ಪೂರೈಸುತ್ತಲೇ ಬಂದಿದೆ. ಈಗಲೂ ಗಣಿ ಉದ್ಯಮಕ್ಕೆ ಬೇಕಾದ ಭೂಗರ್ಭದಲ್ಲಿ ಕಾರ್ಯನಿರ್ವಹಿಸುವ ವಾಹನ ಮತ್ತು ಯಂತ್ರೋಪಕರಣಗಳ ತಯಾರಿಕೆಯಲ್ಲಿ ಏಷಿಯಾದಲ್ಲೇ ಎರಡನೇ ಅತಿದೊಡ್ಡ ಕಂಪನಿ ಇದಾಗಿದೆ.
ಕೆಜಿಎಫ್ ಘಟಕದಲ್ಲಿ ಗಣಿ ಉದ್ಯಮಕ್ಕೆ ಬೇಕಾದ ಬುಲ್ಡೊಜರ್, ಎಕ್ಸ್ಕವೇಟರ್, ಜೆಸಿಬಿ ಯಂತಹ ವಾಹನ ಉಪಕರಣಗಳನ್ನು ತಯಾರಿಸಲಾಗುತ್ತದೆ. ಮೈಸೂರು ಘಟಕದಲ್ ಡಂಪ್ ಟ್ರಕ್ ಗಳು ಮತ್ತು ವಿವಿಧ ಸಾಮರ್ಥ್ಯದ ಎಂಜಿನ್ ಗಳನ್ನು ತಯಾರಿಸಲಾಗುತ್ತದೆ. ಪಾಲಕ್ಕಾಡ್ ನಲ್ಲಿ ರಕ್ಷಣಾ ಇಲಾಖೆಗೆ ಬೇಕಾದ ಯಂತ್ರೋಪಕರಣಗಳನ್ನು ತಯಾರಿಸಲಾಗುತ್ತಿದೆ.
ಮೆಟ್ರೋ ಯೋಜನೆಗಳಿಗೆ ಬೆನ್ನೆಲುಬು
ದೇಶದ ಪ್ರಮುಖ ನಗರಗಳಲ್ಲಿ ಮೆಟ್ರೋ ಯೋಜನೆ ವ್ಯಾಪಕವಾಗಿ ಜಾರಿಯಾಗುತ್ತಿದೆ. ದೆಹಲಿಯಲ್ಲಿ ಬಹುತೇಕ ಮೆಟ್ರೋ ಯೋಜನೆ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಮುಂಬೈ ಸೇರಿದಂತೆ ಮಹಾನಗರಗಳಲ್ಲಿ, ವಿವಿಧ ರಾಜ್ಯಗಳ ರಾಜಧಾನಿಗಳಲ್ಲಿ ಮೆಟ್ರೋ ಯೋಜನೆ ತಲೆ ಎತ್ತುತ್ತಿವೆ. ಈ ಎಲ್ಲಾ ಮೆಟ್ರೋ ಯೋಜನೆಗಳಿಗೆ ಬಿಇಎಂಎಲ್ ಬೆನ್ನೆಲುಬಾಗಿದೆ. ಮೆಟ್ರೋ ರೋಲಿಂಗ್ ಸ್ಟಾಕ್ (ಅಂದರೆ ರೈಲ್ವೆ ಎಂಜಿನ್, ಕೋಚ್, ವಾಗನ್ ಸೇರಿದಂತೆ ಎಲ್ಲಾ ಮಾದರಿಯ ರೈಲುಗಳು, ಕೋಚುಗಳನ್ನು ಒಳಗೊಂಡಂತೆ) ತಯಾರಿಕೆಯಲ್ಲಿ ತೊಡಗಿದೆ.
ದಶಕದ ಹಿಂದೆ ಜಾರಿಗೆ ಬಂದ ದೆಹಲಿ ಮೆಟ್ರೋ ಆರಂಭದಲ್ಲಿ ಬೊಂಬಾರ್ಡಿಯರ್ ಕಂಪನಿಯ ಎಂಜಿನ್ ಮತ್ತು ಕೋಚ್ ಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಬಹುತೇಕ ಎಲ್ಲಾ ಎಂಜಿನ್ ಮತ್ತು ಕೋಚ್ ಗಳನ್ನು ಬಿಇಎಂಎಲ್ ತಯಾರಿಸುತ್ತಿದೆ. ಬೆಂಗಳೂರಿನ ಹೆಮ್ಮೆಯಾಗಿರುವ ನಮ್ಮ ಮೆಟ್ರೋಗೂ ಬಿಇಎಂಎಲ್ ತಯಾರಿಸಿದ ಎಂಜಿನ್ ಮತ್ತು ಕೋಚ್ ಗಳನ್ನೇ ಬಳಸಲಾಗುತ್ತಿದೆ. ದೆಹಲಿ ಮೆಟ್ರೋಗೆ 500 ಕೋಚ್, ನಮ್ಮ ಮೆಟ್ರೋಗೆ 150, ಜೈಪುರ ಮೆಟ್ರೋಗೆ 40 ಕೋಟ್ ಗಳನ್ನು ಒದಗಿಸಿದೆ. ಕೊಲ್ಕತ್ತಾ ಮೆಟ್ರೋಗೆ 84, ಮುಂಬೈ ಮೆಟ್ರೋಗೆ 378 ಕೋಚ್ ಗಳನ್ನು ಒದಗಿಸುತ್ತಿದೆ.
ಸತತ ಲಾಭದಲ್ಲಿದ್ದ ಬಿಇಎಂಎಲ್ ಮತ್ತೆ ಲಾಭದತ್ತ ಹೆಜ್ಜೆ ಹಾಕುತ್ತಿದೆ. ಅತ್ಯುತ್ತಮ ಗುಣಮಟ್ಟಕ್ಕೆ ಹೆಸರಾಗಿದೆ. ಕೇಂದ್ರ ಸರ್ಕಾರವು ಈಗ ತನ್ನ ಅಧೀನದಲ್ಲಿರುವ ಶೇ.54ರಷ್ಟು ಪಾಲಿನಲ್ಲಿ ಶೇ.26ರಷ್ಟು ಮಾರಾಟ ಮಾಡುವುದರಿಂದ ಬಿಇಎಂಎಲ್ ಗೆ ದಕ್ಕಿರುವ ‘ಮಿನಿರತ್ನ’ ಹಣೆಪಟ್ಟಿಯು ತಪ್ಪಿಹೋಗುತ್ತದೆ. ಸದೃಢ ಮತ್ತು ಸಮರ್ಥ ಆಡಳಿತ ಮಂಡಳಿ ಮತ್ತು ಮುಂದಿನ ಹತ್ತು ವರ್ಷಗಳವರೆಗಾಗುವಷ್ಟು ವರ್ಕ್ ಆರ್ಡರ್ ಗಳನ್ನು ಪಡೆದಿರುವ ಬಿಇಎಂಎಲ್ ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಬೃಹತ್ ಪ್ರಮಾಣದಲ್ಲಿ ಲಾಭಾಂಶ ನೀಡುತ್ತಿದೆ. ಕೇಂದ್ರ ಸರ್ಕಾರ ಆರಂಭದಲ್ಲಿ ನಷ್ಟದಲ್ಲಿರುವ ಉದ್ಯಮಗಳಲ್ಲಿ ಮಾತ್ರ ಬಂಡವಾಳ ಹಿಂಪಡೆಯಲು ನಿರ್ಧರಿಸಿತ್ತು. ಆದರೀಗ ಲಾಭದಲ್ಲಿರುವ ಕಂಪನಿಗಳನ್ನು ಮಾರಾಟ ಮಾಡುತ್ತಿದೆ. ಮುಂದೊಂದು ದಿನ ನಮ್ಮ ಕರ್ನಾಟಕದ ಹೆಮ್ಮೆಯಾಗಿರುವ ಬಿಇಎಲ್, ಬಿಎಚ್ಇಎಲ್ ಮತ್ತು ಎಚ್ಎಎಲ್ ಗಳ ಕತೆಯೂ ಬಿಇಎಂಎಲ್ ಹಾದಿಯಲ್ಲೇ ಸಾಗಿದರೆ ಅಚ್ಚರಿಪಡಬೇಕಿಲ್ಲ.